ಯಾದಗಿರಿಯಲ್ಲಿ ಮಂಗಳವಾರ ರೈತರ ಸಮ್ಮುಖದಲ್ಲಿ ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ ಅವರೊಂದಿಗೆ ಚರ್ಚೆ ನಡೆಸಿದ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್​. ವೆಂಕಟರೆಡ್ಡಿ ಪಾಟೀಲ್​ ತಂಗಡಗಿ, ಶರಣಗೌಡ ಅಲ್ಲಿಪುರ, ಮಲ್ಲಿಕಾರ್ಜುನರೆಡ್ಡಿ ವಡವಡಗಿ, ಸುರೇಶ ರಾಠೋಡ, ವಿಜಯಕುಮಾರ್​ ಚಟ್ನಳ್ಳಿ ಇತರರಿದ್ದರು. 
ರಾಜ್ಯ

ರಸಗೊಬ್ಬರ ಕೊರತೆಯಾಗದಂತೆ ಎಚ್ಚರ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ರಾಚನಗೌಡ ಮುದ್ನಾಳ್​ ಹೇಳಿಕೆ
  • ರೈತರ ನಿಯೋಗದೊಂದಿಗೆ ಕೃಷಿ ಅಧಿಕಾರಿಯೊಂದಿಗೆ ಚರ್ಚೆ
ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು, ಈ ವೇಳೆ ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಕೊರತೆಯಾಗದಂತೆ ಕೃಷಿ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪದ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್​ ಆಗ್ರಹಿಸಿದ್ದಾರೆ.
ಮಂಗಳವಾರ ಯಾದಗಿರಿ ಮತೇತ್ರದ ವಿವಿಧ ಗ್ರಾಮಗಳ ರೈತರ ನಿಯೋಗದೊಂದಿಗೆ ತಮ್ಮ ಸ್ವಗೃಹದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ ಅವರನ್ನು ಭೇಟಿ ಮಾಡಿ ಮಾತನಾಡಿದ ಅವರು, ಸದ್ಯ ರಸಗೊಬ್ಬರ ವಿತರಣೆಯಲ್ಲಿ ಗೊಂದಲ ಮತ್ತು ತಾರತಮ್ಯ ತಾಂಡವವಾಡುತ್ತಿದೆ. ಕೆಲ ಮಾರಾಟ ಮಳಿಗೆಗಳಲ್ಲಿ 10 ಎಕರೆಗೆ ಮಾತ್ರ ರಸಗೊಬ್ಬರ ನೀಡುವುದಾಗಿ ಹೇಳಲಾಗುತ್ತಿದೆ. ಹಾಗಾದರೆ 15&20 ಎಕರೆ ಜಮೀನು ಹೊಂದಿರುವ ಸಣ್ಣ ಹಾಗೂ ಮಧ್ಯಮ ರೈತರು ಉಳಿದ ಬೆಳೆಗೆ ಗೊಬ್ಬರವನ್ನು ಎಲ್ಲಿಂದ ತರಬೇಕು? ದೊಡ್ಡ ರೈತರ ಕಥೆ ಏನು? ಎಂದು ಪ್ರಶ್ನಿಸಿದರು.ನಕಲಿ ಬೀಜ, ಕಳಪೆ ಕೀಟನಾಶಕ ಮಾರಾಟದ ಬಗ್ಗೆಯೂ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ಜಾಗೃತ ದಳ ರಚಿಸಿ ದಿಢೀರ್​ ತಪಾಸಣೆ ನಡೆಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಸಿಬ್ಬಂದಿ ನಿಯೋಜಿಸಿ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಎಲ್ಲ ಅಹವಾಲುಗಳನ್ನು ಶಾಂತಚಿತ್ತರಾಗಿ ಆಲಿಸಿದ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ, ಜಿಲ್ಲೆಯಲ್ಲಿ ಸದ್ಯಕ್ಕೆ ರಸಗೊಬ್ಬರದ ಕೊರತೆ ಇಲ್ಲ. ಆದರೆ ವಿತರಣೆಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಾಗಿವೆ. ಕೂಡಲೇ ಎಲ್ಲ ಮಾರಾಟಗಾರರ ಸಭೆ ಕರೆದು ಏಕರೂಪದ ಮಾರ್ಗಸೂಚಿ ನೀಡಲಾಗುವುದು. ದಾಸ್ತಾನು ವಿವರವನ್ನು ಪ್ರತಿದಿನ ಪ್ರಕಟಿಸಲಾಗುವುದು. ನಕಲಿ ಬೀಜ&ಗೊಬ್ಬರ ತಡೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಭರವಸೆ ನೀಡಿದರು.
ಕೃಷಿ ಇಲಾಖೆ ಅಧಿಕಾರಿ ಸುರೇಶ ಮತ್ತು ಕೃಷಿಕ ಸಮಾಜದ ಅಧ್ಯ ವೆಂಕಟರೆಡ್ಡಿ ಪಾಟೀಲ್​ ತಂಗಡಗಿ, ಮುಖಂಡರಾದ ಶರಣಗೌಡ ಅಲ್ಲಿಪುರ, ಮಲ್ಲಿಕಾರ್ಜುನರೆಡ್ಡಿ ವಡವಡಗಿ, ಸುರೇಶ ರಾಠೋಡ, ವಿಜಯಕುಮಾರ್​ ಚಟ್ನಳ್ಳಿ ಸೇರಿ ಯಾದಗಿರಿ ಮತೇತ್ರದ ಚಟ್ನಳ್ಳಿ, ಹೆಡಗಿಮದ್ರಾ, ನಾಯ್ಕಲ್​ ಸೇರಿ ವಿವಿಧ ಗ್ರಾಮಗಳ ರೈತ ಮುಖಂಡರು ಹಾಗೂ ಕೃಷಿಕ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸುಖಾ ಸುಮ್ಮನೆ ರೈತರಿಗೆ ತೊಂದರೆ ನೀಡಬೇಡಿ
ಜಿಲ್ಲೆಯಲ್ಲಿ ರಸಗೊಬ್ಬರದ ದಾಸ್ತಾನು ಕೊರತೆ ಇದ್ದರೆ ಕೃಷಿ ಇಲಾಖೆಯೇ ಅಧಿಕೃತ ಪ್ರಕಟಣೆ ಹೊರಡಿಸಲಿ. ಪ್ರಸ್ತುತ ಇಷ್ಟೇ ದಾಸ್ತಾನು ಲಭ್ಯವಿದೆ, ರೈತರು ಲಭ್ಯತೆ ನೋಡಿಕೊಂಡು ಬಿತ್ತನೆ ಯೋಜನೆ ರೂಪಿಸಿಕೊಳ್ಳಿ ಎಂದು ಮುಕ್ತವಾಗಿ ತಿಳಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಪ್ರತಿ ಮಳಿಗೆಯಲ್ಲೂ ರೈತರು ಗಂಟೆಗಟ್ಟಲೆ ಕಾಯುವ, ಜಗಳ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ರಾಚಣ್ಣಗೌಡ ಮುದ್ನಾಳ್​ ಹೇಳಿದರು. ಬಿತ್ತನೆ ಸಮಯ ವ್ಯರ್ಥವಾಗಿ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇಲಾಖೆ ಪಾರದರ್ಶಕವಾಗಿ ವರ್ತಿಸಬೇಕು. ಸುಖಾಸುಮ್ಮನೆ ರೈತರಿಗೆ ತೊಂದರೆ ಕೊಡುವುದು ಬೇಡ ಎಂದು ಅವರು ತಾಕೀತು ಮಾಡಿದರು.