ಆಳಂದನಲ್ಲಿ ಹಮ್ಮಿಕೊಂಡಿದ್ದ ಎಸ್​ಐಆರ್​ ಕುರಿತ ಸಭೆಯಲ್ಲಿ ಶಾಸಕ ಬಿ.ಆರ್​.ಪಾಟೀಲ್​ ಮಾತನಾಡಿದರು. ಶಿವಪುತ್ರಪ್ಪ ಪಾಟೀಲ್​, ಶರಣು ಭೂಸನೂರ, ಸುಭಾಷ ಮುರುಡ ಇದ್ದರು. 
ರಾಜ್ಯ

ಎಸ್​ಐಆರ್​ನಿಂದ ಹೊರಗುಳಿಯದಂತೆ ಎಚ್ಚರ ವಹಿಸಿ

ಆಳಂದ : ಹೊಟ್ಟೆ ಪಾಡಿಗಾಗಿ ಹೊರ ರಾಜ್ಯಗಳಿಗೆ ಕ್ಷೇತ್ರದಿಂದ ಸಾಕಷ್ಟು ಜನರು ಗುಳೆ ಹೋಗಿದ್ದು, ಅವರು ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​)ಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಿದೆ. ಈ ಬಗ್ಗೆ ಕಾಂಗ್ರೆಸ್​ನ ಬಿಎಲ್​ಒಗಳು ಜಾಗೃತಿ ಮೂಡಿಸಬೇಕು ಎಂದು ಶಾಸಕ ಬಿ.ಆರ್​. ಪಾಟೀಲ್​ ಕರೆ ನೀಡಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಕುರಿತ ಸಭೆಯಲ್ಲಿ ಮಾತನಾಡಿ, ಚುನಾವಣೆ ಆಯೋಗದಿಂದ ಮಂಗಳವಾರದಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಶುರುವಾಗಲಿದೆ. 2002ರಲ್ಲಿ ನಡೆದ ಎಸ್​ಐಆರ್​ ವೇಳೆಯ ಗುರುತಿನ ಚೀಟಿಯ ಮಾಹಿತಿ ಅಗತ್ಯವಾಗಿದೆ. ಆ ಸಂದರ್ಭದಲ್ಲಿ 18 ವರ್ಷ ಆಗಿರದಿದ್ದವರು ಈಗ ಎನ್ಯುಮರೇಷನ್​ ಅರ್ಜಿಯಲ್ಲಿ ತಮ್ಮ ತಂದೆಯ 2002ರ ಅವಧಿಯ ಗುರುತಿನ ಚೀಟಿ ಮಾಹಿತಿ ತುಂಬಬೇಕು. ತಂದೆ ಇಲ್ಲದಿದ್ದರೆ ಅಜ್ಜನ ಮಾಹಿತಿ ನೀಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕಿದೆ. ಇಲ್ಲದಿದ್ದರೆ ನಾಗರಿಕರು ತಮ್ಮ ಮತವನ್ನು ಕಳೆದುಕೊಳ್ಳುತ್ತಾರೆ ಎಂದರು.
ಮತದಾನದ ಹಕ್ಕು ಹೋದರೆ ಪಂಚ ಗ್ಯಾರಂಟಿ ಯೋಜನೆ, ಪಿಂಚಣಿ, ಸ್ಕಾಲರ್​ಶಿಪ್​ ಸೇರಿ ಸರ್ಕಾರದ ಅನೇಕ ಯೋಜನೆಗಳಿಂದ ವಂಚಿತರಾಗಬೇಕಾಗುತ್ತದೆ. ಕ್ಷೇತ್ರದಲ್ಲಿನ ಮತದಾರರು ಅಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಬೇಕು. ಪದ ಬಿಎಲ್​ಒಗಳು ಮನೆ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ತಿಳುವಳಿಕೆ ನೀಡಬೇಕು. ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವ ಹಾಗೆ ಮನವೊಲಿಸಬೇಕು ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್​ ಮುನ್ನಹಳ್ಳಿ, ಎಸ್​ಎಸ್​ಕೆಎನ್​ ಉಪಾಧ್ಯ ಸುಭಾಷ ಮುರುಡ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣು ಭೂಸನೂರ ಇದ್ದರು.