ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ ಸಿಂಗ್ ಮೀನಾ, ಉಪಅರಣ್ಯ ಸಂರಕ್ಷಣಾಧಿಕಾರಿ ಸುಮಿತ ಪಾಟೀಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಆಲದ್‌ಕಟ್ಟಿ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 
ರಾಜ್ಯ

ಕುಡಿಯುವ ನೀರು-ಬಿಸಿಗಾಳಿ-ಜಾನುವಾರಗಳ ಮೇವಿನ ಬಗ್ಗೆ ಮುಂಜಾಗ್ರತೆ ಇರಲಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಬಂತು
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮುಂಬರುವ ಬೇಸಿಗೆ ಸಮಯದಲ್ಲಿ ಕುಡಿಯುವ ನೀರು, ಜಾನುವಾರಗಳ ಮೇವು ಹಾಗೂ ಬಿಸಿಗಾಳಿ ಬೀಸಿದಲ್ಲಿ ಅಗತ್ಯ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತಂತೆ ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲು ಹಮ್ಮಿಕೊಳ್ಳಲಾಗಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಜನವರಿ 2025 ರಿಂದ ಡಿಸೆಂಬರ್ ವರೆಗೆ ವಾಡಿಕೆಯಂತೆ 770 ಮಿ.ಮಿ ಮಳೆಯಾಗಬೇಕಾಗಿದ್ದು, 1068 ಮಿ.ಮಿ ಮಳೆಯಾಗುವ ಮೂಲಕ ಶೇ 39 ರಷ್ಟು ಹೆಚ್ಚು ಮಳೆಯಾಗಿತ್ತು. ಆದರೆ, 2026 ರ ಜನವರಿಯಿಂದ ಫೆಬ್ರವರಿ 11 ರ ವರೆಗೆ ವಾಡಿಕೆಯಂತೆ 6.1 ಮಿ.ಮಿ ಮಳೆಯಾಗಬೇಕಾಗಿದ್ದು, ಈವರೆಗೆ ಯಾವುದೇ ಮಳೆಯಾಗದಿರುವುದು ಆತಂಕ ಮೂಡಿಸಿದೆ ಎಂದರು.
ಸಂಬಂಧಿಸಿದ ಅಧಿಕಾರಿಗಳಿಂದ ಕಲಬುರಗಿ ಜಿಲ್ಲೆಯ ಕುಡಿಯುವ ನೀರಿನ ಮೂಲಗಳಾದ ಬೆಣ್ಣಿತೊರ, ಭೀಮಾ, ಚಂದ್ರಂಪಳ್ಳಿ, ಗಂಡೋರಿನಾಲ ಸೇರಿದಂತೆ ಇತರೆ ಸ್ಥಳಗಳಲ್ಲಿ ಹಾಗೂ ಕೆರೆಗಳಲ್ಲಿ ಪ್ರಸ್ತುತವಾಗಿ ಲಭ್ಯವಿರುವ ನೀರಿನ ಮಾಹಿತಿಯನ್ನು ಪಡೆದ ಅವರು ಭವಿಷ್ಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಳ್ಳಬಹುದಾದ ಅಂಶಗಳ ಕುರಿತು ಚರ್ಚಿಸಿದರು.
ಮುಂಬರುವ ಬೇಸಿಗೆ ಸಮಯದಲ್ಲಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನ-ಜಾನುವಾರಗಳಿಗೆ ಸೇರಿದಂತೆ ಕುಡಿಯುವ ನೀರಿನ ಸಲುವಾಗಿ ಒಟ್ಟು 4 ಟಿಎಂಸಿ ನೀರಿನ ಅಗತ್ಯವಿದ್ದು ಸದರಿ 4 ಟಿಎಂಸಿ ನೀರಿನ ಪ್ರಮಾಣವನ್ನು ಕಾಯ್ಸಿರಿಸುವಂತೆ ನೀರಾವರಿ ಸಲಹಾ ಸಮಿತಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವಕ್ಕೆ ಒಳಗಾಗುವ 170 ಕ್ಕೂ ಹೆಚ್ಚು ಗ್ರಾಮಗಳಿಗೆ ಲಭ್ಯವಿರುವ ನೀರಿನ ಮೂಲಗಳಾದ ಕೊಳವೆ/ತೆರೆದ ಭಾವಿ, ಹೊಸ ಬೋರವೆಲ್, ಟ್ಯಾಂಕರ್ ಸೇರಿದಂತೆ ಖಾಸಗಿ ಮಾಲೀಕರ ಕೊಳವೆ/ತೆರೆದ ಭಾವಿಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ನೀರು ಒದಗಿಸಲು ಈಗಲೇ ಸೂಕ್ತ ಮುಂಜಾಗ್ರತ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಯಾವುದೇ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿ ಆದೇಶಿಸಿರುವುದಿಲ್ಲ, ಹೀಗಾಗಿ ಈ ವರ್ಷ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಎಸ್.ಡಿ.ಆರ್.ಎಫ್ ಅನುದಾನವನ್ನು ಬಳಸಿಕೊಳ್ಳಲು ಅವಕಾಶವಿರುವುದಿಲ್ಲ. ಆದ್ದರಿಂದ, ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ತೆಗೆದುಕೊಂಡ ಖಾಸಗಿ ಕೊಳವೆ/ತೆರೆದ ಬಾವಿಯ ಮತ್ತು ಟ್ಯಾಂಕರ್ ಸಾಗಾಣಿಕೆ ವೆಚ್ಚವನ್ನು ಗ್ರಾಮ ಪಂಚಾಯತಿಯ 15ನೇ ಹಣಕಾಸು ಯೋಜನೆಯಡಿಯಲ್ಲಿ ಲಭ್ಯವಿರುವ ಅನುದಾನದಿಂದ ಭರಿಸತಕ್ಕದ್ದು.
ಈ ವರ್ಷ ಅಂತರ್ಜಲ ಮಟ್ಟವು ಸುಧಾರಣೆಯಾಗಿರುವುದರಿಂದ ಅವಶ್ಯಕತೆ ಇದ್ದಲ್ಲಿ ಮಾತ್ರ ಹೊಸ ಕೊಳವೆ ಭಾವಿಗಳನ್ನು ಕೊರೆಯಿಸುವ ಕುರಿತು ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳುವುದು. ಕೆರೆ/ಶೇಖರಣಾ ಜಲಾಶಯಗಳ ಗೇಟ್ಗಳಿಂದ ನೀರು ಸೋರಿಕೆಯನ್ನು ತಡೆಗಟ್ಟುವ ಕುರಿತು ಅವಶ್ಯಕ ಕ್ರಮ ತೆಗೆದುಕೊಳ್ಳುವುದು. ಕಾರ್ಯನಿರ್ವಾಹಕ ಅಭಿಯಂತರರು ಕುಡಿಯುವ ನೀರು ಅವಶ್ಯಕತೆ ಇರುವ ಕಡೆಗೆ ವಿವಿಧ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ತೀವ್ರ ಉಷ್ಣಾಂಶದ ಹೆಚ್ಚಳ ಹಾಗೂ ಬಿಸಿಗಾಳಿ ಪರಿಸ್ಥಿತಿಯನ್ನು ನಿಭಾಯಿಸಲು ಸಂಬಂಧಪಟ್ಟ ಇಲಾಖೆಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗ ಸೂಚಿಯಲ್ಲಿ ತಿಳಿಸಿರುವ ಮಾನದಂಡಗಳನ್ನು ಅನುಸರಿಸುವಂತೆ ಸೂಚಿಸಿದರು.
ತೀವ್ರ ಉಷ್ಣಾಂಶದ ಹೆಚ್ಚಳ ಹಾಗೂ ಬಿಸಿಗಾಳಿ ಪರಿಸ್ಥಿತಿ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಿದ್ಯುನ್ಮಾನ ಹಾಗೂ ದೈನಂದಿನ ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ಸರ್ಕಾರೇತರ ಸಂಘ-ಸಂಸ್ಥೆಗಳು, ವೈದ್ಯರು ಹಾಗೂ ಆರೋಗ್ಯ ಸಹಾಯಕರ ಅಗತ್ಯ ನೆರವು ಮತ್ತು ಜಾಗೃತಿ ಅಭಿಯಾನ ಕೈಗೊಳ್ಳವುದು.
ತೀವು ಉಷ್ಣಾಂಶದ ಹೆಚ್ಚಳ ಹಾಗೂ ಬಿಸಿಗಾಳಿ ಹಿನ್ನಲೆಯಲ್ಲಿ ಆಕಸ್ಮಿಕ ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ವೈದ್ಯರುಗಳು, ಆರೋಗ್ಯ ಸಹಾಯಕರುಗಳನ್ನು ಮತ್ತು ಸ್ವಯಂ ಸೇವಕರುಗಳನ್ನು ನಿಯೋಜಿಸುವುದು ಮತ್ತು ಮತ್ತು ಅಗತ್ಯ ತರಬೇತಿಗಳನ್ನು ಹಮ್ಮಿಕೊಳ್ಳುವುದು. ಅಗತ್ಯ ಸಂದರ್ಭಗಳಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ಇ.ಎಸ್.ಐಗಳು ಔಷಧಾಲಯಗಳನ್ನು ಸಾರ್ವಜನಿಕರಿಗೆ ಚಿಕಿತ್ಸೆ ನೀಡುವುದು.
ಸಾರ್ವಜನಿಕ ಸ್ಥಳಗಳಲ್ಲಿ ಬಸ್ಸು ನಿಲ್ದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು. ಈ ಬಗ್ಗೆ ದಾನಿಗಳಿಗೆ, ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಯವರಿಗೆ ಕುಡಿಯುವ ನೀರಿನ CSR (Corporate Social Responsibility) ಅನುದಾನದಾನದಲ್ಲಿ ನೀರಿನ ಕಿಯೋಸ್ಕ್ಗಳನ್ನು ತರೆಯಲು ಪ್ರೋತ್ಸಾಹ ನೀಡಲಾಗುವುದು.
ತೀವ್ರ ಬಿಸಿಲಿನ ಶಾಖದ ಸಮಯದಲ್ಲಿ ಬಿಸಿಲಿನ ಝಳ ತಪ್ಪಿಸಲು ಕಾರ್ಮಿಕ ಕೆಲಸಗಾರರಿಗೆ ಕೆಲಸದ ವೇಳಾ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗುವುದು. ಉದ್ಯೋಗದಾರರನು ಉದ್ಯೋಗ ಸ್ಥಳಗಳಲ್ಲಿ ಕುಡಿಯುವ ನೀರು ಪೂರೈಕೆ, ORS ಪೊಟ್ಟಣಗಳ ಪೂರೈಕೆ ಮತ್ತು ನೆರಳಿನ ಶಡ್ ನಿರ್ಮಾಣ ಮಾಡುವುದು ಸೇರಿದಂತೆ ಅಗತ್ಯ ಇದ್ದಲ್ಲಿ ಶಾಲಾ ಕಾಲೇಜ್ ಮತ್ತು ಸರ್ಕಾರಿ ಕಛೇರಿ ಕೆಲಸದ ವೇಳೆಯನ್ನು ಬದಲಾವಣೆ ಮಾಡುವುದು.
ಕುಡಿಯವ ನೀರಿನ ಪರಿಸ್ಥಿತಿ ಎದುರಿಸುತ್ತಿರುವ ಪ್ರತಿ ಗ್ರಾಮಗಳಲ್ಲಿ ತುರ್ತಾಗಿ ಕುಡಿಯುವ ನೀರಿನ ಪೂರೈಕೆ ಕಾರ್ಯ ಕೈಗೊಳ್ಳುವುದು. ಕುಡಿಯುವ ನೀರಿನ ಸಂಬಂಧ ದೂರುಗಳನ್ನು ಸ್ವೀಕರಿಸಲು ಜಿಲ್ಲಾ/ತಾಲೂಕು ಮಟ್ಟದಲ್ಲಿ ದಿನದ 24 ಗಂಟೆಗಳು ಕೆಲಸ ನಿರ್ವಹಿಸುವ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುವುದು.
ತೀವು ಬಿಸಿಲಿನ ಶಾಖದಿಂದ ಉದ್ಭವಿಸಬಹುದಾದ ಘಟನೆಗಳನ್ನು ಪರಿಶೀಲಿಸಲು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ತಾಲೂಕಿನಲ್ಲಿ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಭೆ ಜರುಗಿಸುವುದು, ಮುಂದಿನ ಕ್ರಮಗಳ ಬಗ್ಗೆ, ವಿಮರ್ಶೆ ಕೈಗೊಳ್ಳುವುದು ಮತ್ತು ಮುಂದಿನ ಕ್ರಿಯಾ ಯೋಜನೆ ಕುರಿತು ಚರ್ಚಿಸುವುದನ್ನು ನಿರಂತರವಾಗಿ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ ಸಿಂಗ್ ಮೀನಾ, ಉಪಅರಣ್ಯ ಸಂರಕ್ಷಣಾಧಿಕಾರಿ ಸುಮಿತ ಪಾಟೀಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಆಲದ್‌ಕಟ್ಟಿ, ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.