ಮುದ್ದೇಬಿಹಾಳ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ಡಾ. ಸತೀಶ್ ತಿವಾರಿ ಉದ್ಘಾಟಿಸಿದರು. ಎಂ.ಎಸ್. ಗೌಡರ, ಎಸ್.ಸಿ. ರುದ್ರವಾಡಿ, ಯಲ್ಲಪ್ಪ ಚಲವಾದಿ ಇತರರಿದ್ದರು. 
ರಾಜ್ಯ

ಸೊಳ್ಳೆಗಳು ಹರಡದಂತೆ ಜಾಗೃತಿ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಡಾ. ಸತೀಶ್ ತಿವಾರಿ ಹೇಳಿಕೆ
  • ವಿಶ್ವ ಮಲೇರಿಯಾ ದಿನಾಚರಣೆ
ಮುದ್ದೇಬಿಹಾಳ: ಮಲೇರಿಯಾ, ಡೆಂಘಿ, ಚಿಕೂನ್‌ಗುನ್ಯಾ ಹಾಗೂ ಆನೆಕಾಲು ರೋಗದಂತಹ ಭೀಕರ ಕಾಯಿಲೆಗಳು ಸೊಳ್ಳೆಗಳಿಂದಲೇ ಹರಡುತ್ತಿದ್ದು, ಸಾರ್ವಜನಿಕರು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸುವ ಮೂಲಕ ಜಾಗೃತಿ ವಹಿಸಬೇಕು ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ. ಸತೀಶ್ ತಿವಾರಿ ಹೇಳಿದರು.  
ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶ್ರೀ ಸಿದ್ಧಗಂಗಾ ಪ್ಯಾರಾ ಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಮಲೇರಿಯಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ಗೌಡರ ಮಾತನಾಡಿ, ಹೆಣ್ಣು ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಹರಡುತ್ತದೆ. ಚಳಿ, ವಿಪರೀತ ಜ್ವರ ಮತ್ತು ನಂತರ ಬೆವರುವಿಕೆ ಈ ರೋಗದ ಪ್ರಮುಖ ಲಕ್ಷಣಗಳು. ಇಂತಹ ಲಕ್ಷಣಗಳು ಕಂಡುಬಂದ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಲೇರಿಯಾ ದೃಢಪಟ್ಟಲ್ಲಿ ಪ್ರಮ್ಯಾಕ್ವಿನ್ ಮಾತ್ರೆಗಳ ಸೇವನೆಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಮಾಹಿತಿ ನೀಡಿದರು.
ವಿಬಿಡಿ ಮೇಲ್ವಿಚಾರಕ ಎಸ್. ಸಿ. ರುದ್ರವಾಡಿ ಮಾತನಾಡಿ, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೊಳ್ಳೆಗಳ ನಿಯಂತ್ರಣಕ್ಕೆ ಮೊದಲ ಆದ್ಯತೆಯಾಗಬೇಕು. ಸೊಳ್ಳೆ ಪರದೆ, ಬೇವಿನ ಸೊಪ್ಪಿನ ಹೊಗೆ ಹಾಗೂ ಸೊಳ್ಳೆ ಬತ್ತಿಗಳನ್ನು ಬಳಸುವ ಮೂಲಕ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ, ಎ.ಪಿ. ಶಾಸ್ತ್ರಿಮಠ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ,  ಪ್ರಶಾಂತ್ ಕಡಿ, ವೀರೇಶ ಎಸ್.ಬಿ, ವಿಜಯ ಹೂಗಾರ, ಹಿನಾಕೌಸರ್ ಸುತಾರ, ಮುನಿರಾಬೇಗಂ ನದಾಫ್,  ವಿದ್ಯಾರ್ಥಿಗಳು ಭಾಗವಹಿಸಿದ್ದರು.