ಯಾದಗಿರಿ ಯಿಮ್ಸ್​ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಜಿಪಂ ಸಿಇಒ ಲವೀಶ್​ ಓರ್ಡಿಯಾ ಮಾತನಾಡಿದರು. ವಿಜಯಕುಮಾರ ಮಡ್ಡೆ, ಸಿ.ಬಿ.ದೇವರಮನಿ, ವೆಂಕಟೇಶ ಚಟ್ನಳ್ಳಿ ಇತರರಿದ್ದರು. 
ರಾಜ್ಯ

ಕುಡಿವ ನೀರಿನ ಸಮಸ್ಯೆ ಬಗ್ಗೆ ಎಚ್ಚರ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಲವೀಶ್​ ಓರ್ಡಿಯಾ ಸೂಚನೆ
  • ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ
ಯಾದಗಿರಿ: ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಗ್ರಾಮಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್​ ಓರ್ಡಿಯಾ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ವೈದ್ಯಕಿಯ ವಿಜ್ಞಾನಗಳ ಪದವಿ ಮಹಾವಿದ್ಯಾಲಯ(ಯಿಮ್ಸ್​) ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನ, ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಹಳ್ಳಿಗಳಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ಪಿಡಿಒಗಳು ಯಾವ ಕಾರಣಕ್ಕೂ ಮೊಬೈಲ್​ ಬಂದ್​ ಇಡಬಾರದು. ಫೋನ್​ ಕರೆ ಮೂಲಕವೂ ಕೆಲ ಸಮಸ್ಯೆ ಪರಿಹರಿಸಲು ಸಾಧ್ಯವಿದೆ ಎಂದರು.ಜಿಲ್ಲೆಯ 360 ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರಕ್ಕೆ ಸೇರಿದ ಬೋರ್​ವೆಲ್​ಗಳಿವೆ. ಯಾವ ಬೋರ್​ವೆಲ್​ನಲ್ಲಿ ನೀರು ಕಡಿಮೆ ಇದೆ ಎಂಬ ಬಗ್ಗೆ ಪಿಡಿಒಗೆ ಮಾಹಿತಿ ಇರಬೇಕು. ಹಾಗೆಯೇ ಕುಡಿಯುವ ನೀರಿನ ಯೋಗ್ಯತೆ ಪರಿಕ್ಷಿಸಿ, ಉದ್ದೇಶಪೂರ್ವಕವಾಗಿ ನೀರಿನ ಸಮಸ್ಯೆ ಕುರಿತು ವದಂತಿ ಹಬ್ಬಿಸುವವರ ಮೇಲೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಮೇ ತಿಂಗಳಲ್ಲಿ 33 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ. ಹೀಗಾಗಿ ಅಂತಹ ಗ್ರಾಮಸ್ಥರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಸಮಸ್ಯೆ ಬಗೆಹರಿಸಲು ಸರ್ಕಾರ ನೀಡಿದ ತುರ್ತು ಅನುದಾನ ಬಳಸಿಕೊಳ್ಳಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳ್ಳಿ, ವಿವಿಧ ತಾಪಂ ಇಒಗಳಾದ ಬಸವರಾಜ ಶರಭೈ, ಅಂಬ್ರೇಶ ಪಾಟೀಲ, ಮಹಾದೇವ ಬಾಬಲಗಿ, ಬಸವರಾಜ ಸಜ್ಜನ, ಶಶಿಧರ ಹಿರೇಮಠ, ಬಸಣ್ಣ ನಾಯಕ ಇತರರಿದ್ದರು.
ಕೆಲಸ ಕೇಳಿ ಜಿಪಂ ಕಚೇರಿಗೆ ಬರಕೂಡದು
ನರೇಗಾ ಯೋಜನೆಯಡಿ ಜನರಿಗೆ ಕೂಲಿ ಕೆಲಸ ಕೊಡಿ. ಯೋಜನೆ ಬಂದ್​ ಆಗಿದೆ ಎಂದು ಜನರಲ್ಲಿ ತಪ್ಪು ಮಾಹಿತಿ ಹೋಗುತ್ತಿದೆ. ಗ್ರಾಮ ಪಂಚಾಯಿತಿಗಳಲ್ಲಿ ಈ ಹಿಂದಿನ ವರ್ಷದ ವಾರ್ಷಿಕ ಕ್ರಿಯಾಯೋಜನೆಯಲ್ಲಿನ ಕಾಮಗಾರಿಗಳನ್ನು ಅನುಷ್ಠಾನ ಮಾಡಿ, ಪೂರ್ಣಗೊಳಿಸದೆ ಬಾಕಿ ಉಳಿದ ಅನುದಾನಕ್ಕೆ ಅನುಸಾರ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಬೇಕು. ಕೆಲಸ ಕೊಡುತ್ತಿಲ್ಲ ಎಂದು ಯಾರೂ ಜಿಲ್ಲಾ ಪಂಚಾಯಿತಿಗೆ ದೂರು ನೀಡಬಾರದು ಎಂದು ಓರ್ಡಿಯಾ ತಾಕೀತು ಮಾಡಿದರು.
ಮಕ್ಕಳ ಕಾವಲು ಸಮಿತಿ ಬಲಪಡಿಸಿ
ಹಳ್ಳಿಗಳಲ್ಲಿ ಎದುರಾಗುವ ಕುಡಿಯುವ ನೀರು ಪೂರೈಕೆ ಸಮಸ್ಯೆ, ಪಂಚಾಯತ ರಾಜ್​ ವಿಷಯ, ನರೇಗಾ ಯೋಜನೆ, ವಿವಿಧ ವಸತಿ ಯೋಜನೆ, ಸ್ವಚ್ಛ ಭಾರತ ಮಿಷನ್​ (ಗ್ರಾ), ಗ್ರಾಮ ಪಂಚಾಯಿತಿ ಮಟ್ಟದ ಮಕ್ಕಳ ಕಾವಲು ಸಮಿತಿ ಬಲಪಡಿಸುವಿಕೆ ಹಾಗೂ ಲೋಕಾಯುಕ್ತ ದೂರುಗಳ ನಿರ್ವಹಣೆ ಪ್ರಗತಿ ಕುರಿತ ವರದಿಗಳನ್ನು ಸಿಇಒ ಪರಿಶೀಲಿಸಿದರು.