ಅಫಜಲಪುರ ತಾಪಂ ಸಭಾಂಗಣದಲ್ಲಿ ಶಾಸಕ ಎಂ.ವೈ.ಪಾಟೀಲ್​ ಅಧ್ಯತೆಯಲ್ಲಿ ಟಾಸ್ಕ್​ ಫೋರ್ಸ್​ ಸಮಿತಿ ಸಭೆ ನಡೆಯಿತು. ತಹಸೀಲ್ದಾರ್​ ಸಂಜೀವಕುಮಾರ ದಾಸರ, ತಾಪಂ ಇಒ ಶಂಕರ ರಾಠೋಡ್​ ಇತರರಿದ್ದರು. 
ರಾಜ್ಯ

ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗೆ ಸ್ಪಂದಿಸಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಂ.ವೈ.ಪಾಟೀಲ್​ ಸೂಚನೆ
  • ಅಫಜಲಪುರದಲ್ಲಿ ಟಾಸ್ಕ್​ಫೋರ್ಸ್​ ಸಭೆ
ಅಫಜಲಪುರ: ಬೇಸಿಗೆ ಪ್ರಾರಂಭವಾಗಿದ್ದು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಜನರಿಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ನನಗೆ ದೂರುಗಳು ಬಂದರೆ ಮುಲಾಜಿಲ್ಲದೆ ಸಂಬಂಧಿತರ ವಿರುದ್ಧ ಕ್ರಮವಹಿಸಲಾಗುತ್ತದೆ ಎಂದು ಶಾಸಕ ಎಂ.ವೈ.ಪಾಟೀಲ್​ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೀರಿನ ಸಮಸ್ಯೆ ಬಗ್ಗೆ ಟಾಸ್ಕ್​ ಫೋರ್ಸ್​ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾರಾಷ್ಟ್ರ ಸರ್ಕಾರ ಅಕ್ರಮವಾಗಿ ಸೀನಾ ನದಿಗೆ ನೀರು ಹರಿಸಿರುವುದರಿಂದ ಮತ್ತು ಡ್ಯಾಮ್​ಗಳನ್ನು ನಿರ್ಮಾಣ ಮಾಡಿಕೊಂಡಿರುವುದರಿಂದ ನಮ್ಮ ಪಾಲಿನ ನೀರು ಬರುತ್ತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ನಮ್ಮ ಹಕ್ಕಿನ ನೀರನ್ನು ಪಡೆಯುತ್ತೇವೆ ಎಂದರು.
ನಾರಾಯಣಪುರ ಜಲಾಶಯದಲ್ಲಿ ತುರ್ತು ಸಂದರ್ಭಕ್ಕಾಗಿ 2 ಟಿಎಂಸಿ ನೀರು ಭೀಮಾ ನದಿಗಾಗಿ ಸಂಗ್ರಹವಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ವೇಳೆ ಮಂಜೂರಾತಿ ದೊರೆತರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗುವುದಿಲ್ಲ. ಕೆಲವೇ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ, ಆದರೆ ವಾಸ್ತವದಲ್ಲಿ ಸಾಕಷ್ಟು ಕಡೆ ಜಲ ಸಮಸ್ಯೆ ಇದೆ. ಕೂಡಲೇ ಸ್ಪಂದಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ತಹಸೀಲ್ದಾರ್​ ಸಂಜೀವಕುಮಾರ ದಾಸರ ಮಾತನಾಡಿ, ಹವಾಮಾನ ಇಲಾಖೆ ಪ್ರಕಾರ ಮೇ 15ಕ್ಕೆ ಮಳೆ ಬರುವ ಮುನ್ಸೂಚನೆಯಿದೆ. ಜೂನ್​ ತಿಂಗಳಲ್ಲಿ ಮಳೆಯ ಕೊರತೆಯಿದೆ. ಹೀಗಾಗಿ ಸೊನ್ನ ಬ್ಯಾರೇಜ್​, ತ್ತರಗಾ ಮತ್ತು ದೇವಲಗಾಣಗಾಪುರ ಬ್ರಿಡ್ಜ್​ ಕಂ ಬ್ಯಾರೇಜ್​ನಲ್ಲಿ ನೀರು ಸಂಗ್ರಹ ಮಾಡಿಕೊಳ್ಳಬೇಕು. ಮಳೆ ಕಡಿಮೆ ಆದರೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ತಾಲೂಕಾಡಳಿತ ಸಿದ್ಧವಾಗಿದೆ ಎಂದು ಹೇಳಿದರು.
ಭೀಮಾ ಏತ ನೀರಾವರಿ ನಿಗಮ ನಿಯಮಿತ ಇಇ ಶಿವಕುಮಾರಸ್ವಾಮಿ ಮಾತನಾಡಿ, ಸೊನ್ನ ಬ್ಯಾರೇಜ್​ನಲ್ಲಿ ಸದ್ಯ ಶೇ.20 ನೀರು ಸಂಗ್ರಹವಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ತ್ತರಗಾ ಮತ್ತು ದೇವಲಗಾಣಗಾಪುರ ಬ್ರಿಡ್ಜ್​ನಲ್ಲಿ ನೀರಿದೆ ಎಂದು ಮಾಹಿತಿ ನೀಡಿದರು.
ತಾಪಂ ಇಒ ಶಂಕರ ರಾಠೋಡ್​, ಸಣ್ಣ ನೀರಾವರಿ ಇಲಾಖೆ ಎಇಇ ಶಾಂತಪ್ಪ ಜಾಧವ್​, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಅರುಣಕುಮಾರ, ಜೆಸ್ಕಾಂ ಎಇಇ ನಾಗರಾಜ, ಪುರಸಭೆ ಮುಖ್ಯಾಧಿಕಾರಿ ಫಕ್ರುದ್ದಿನ್​, ಶೋಭಾ ದಿಕ್ಸಂಗಾ ಇತರರಿದ್ದರು.