ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಟ್ರೋಫಿ ಗೆದ್ದ ಗಿಲ್ಲಿ ನಟರಾಜ್ ಅವರಿಗೆ ಈಗ ಸಾಲು ಸಾಲು ಪ್ರಶ್ನೆಗಳು ಎದುರಾಗುತ್ತಿವೆ. ಅದರಲ್ಲಿ ಪ್ರಮುಖವಾದುದು ಅವರ ಮದುವೆಯ ವಿಚಾರ. ಬಿಗ್ ಬಾಸ್ ಮನೆಯಲ್ಲಿದ್ದಾಗ ಸಹ-ಸ್ಪರ್ಧಿ ಕಾವ್ಯಾ ಶೈವ ಅವರೊಂದಿಗೆ ನಟರಾಜ್ ಹೆಸರು ಸಾಕಷ್ಟು ತಳುಕು ಹಾಕಿಕೊಂಡಿತ್ತು.
ಫ್ಯಾಮಿಲಿ ವೀಕ್ ಸಂದರ್ಭದಲ್ಲಿ ಕಾವ್ಯಾ ಅವರ ಪೋಷಕರು ಬಂದಾಗ, "ನಿಮ್ಮ ಮಗಳ ಮದುವೆ ಬಗ್ಗೆ ಏನು ಯೋಚಿಸಿದ್ದೀರಿ? ನನ್ನಂತಹ ಹುಡುಗನಾದರೆ ಓಕೆನಾ?" ಎಂದು ತಮಾಷೆಯಾಗಿ ಕೇಳುತ್ತಿದ್ದರು. ಇದೀಗ ಮಾಧ್ಯಮಗಳ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ ಗಿಲ್ಲಿ.
ಹೌದು, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟರಾಜ್ ಮತ್ತು ಕಾವ್ಯ ಶೈವ ನಡುವಿನ ಸ್ನೇಹ ನೋಡುಗರಿಗೆ ಅಚ್ಚುಮೆಚ್ಚಿನದ್ದಾಗಿತ್ತು. ನಟರಾಜ್ ಅವರು ಕಾವ್ಯಾರನ್ನು ರೇಗಿಸುತ್ತಿದ್ದ ರೀತಿ ಮತ್ತು ಕಾವ್ಯ ಅವರು ಅದನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದ ಪರಿ, ಇವರಿಬ್ಬರೂ ಮದುವೆಯಾಗಲಿ ಎಂಬ ಆಸೆ ಅಭಿಮಾನಿಗಳಲ್ಲಿ ಮೂಡಿತ್ತು. ಈಗ ಟ್ರೋಫಿ ಗೆದ್ದ ನಂತರ ಮಾಧ್ಯಮಗಳು "ಅಭಿಮಾನಿಗಳಲ್ಲಿ ಕೇಳ್ತಾ ಇದ್ದಾರೆ, ಕಾವ್ಯ ಶೈವ ಅವರನ್ನೇ ಮದುವೆ ಆಗ್ತೀರಾ?" ಎಂದು ನೇರವಾಗಿ ಪ್ರಶ್ನಿಸಿವೆ.
ಈ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಗಿಲ್ಲಿ ನಟರಾಜ್, "ನೋಡಿ, ಜೀವನದಲ್ಲಿ ನಾವು ಅಂದುಕೊಂಡಿದ್ದೆಲ್ಲವೂ ನಡೆಯುವುದಿಲ್ಲ. ಮನೆಯೊಳಗೆ ನಾವಿಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೆವು. ಈಗಷ್ಟೇ ಜೀವನದ ಹೊಸ ಅಧ್ಯಾಯ ಶುರುವಾಗಿದೆ. ಮದುವೆ ಅನ್ನೋದು ದೊಡ್ಡ ಜವಾಬ್ದಾರಿ. ಅದಕ್ಕೆ 'ಕಂಕಣಬಲ ಕೂಡಿ ಬರಬೇಕು' ಎಂದು ಹೇಳುವ ಮೂಲಕ ಮದುವೆಯ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.
ಮುಂದುವರಿದು ಮಾತನಾಡಿದ ಅವರು, "ಕಾವ್ಯ ತುಂಬಾ ಒಳ್ಳೆಯ ಹುಡುಗಿ, ಅವರ ಪೋಷಕರೂ ಕೂಡ ನನ್ನನ್ನು ಪ್ರೀತಿಯಿಂದ ಕಂಡಿದ್ದಾರೆ. ಆದರೆ ಸದ್ಯಕ್ಕೆ ನನ್ನ ಮೊದಲ ಆದ್ಯತೆ ಸಿನಿಮಾ ಮತ್ತು ಕರಿಯರ್. ಮದುವೆ ಬಗ್ಗೆ ನಿರ್ಧಾರ ತಗೆದುಕೊಳ್ಳುವ ಮುನ್ನ ಸ್ವಲ್ಪ ಸಮಯ ಬೇಕು" ಎಂದಿದ್ದಾರೆ. ನಟರಾಜ್ ಅವರ ಈ 'ಕಂಕಣಬಲ'ದ ಹೇಳಿಕೆ ಇದೀಗ ವೈರಲ್ ಆಗಿದೆ.
ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯ ಈ ಕ್ಯೂಟ್ ಜೋಡಿ ನಿಜ ಜೀವನದಲ್ಲೂ ಒಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.