ಆದರೆ ಶ್ರೀರಂಗಮಹಾಗುರುಗಳು ಈ ಆಚರಣೆಯ ಹಿಂಬದಿಯ ತತ್ತ್ವವನ್ನು ವಿವರಿಸಿದ್ದಾರೆ. ಸಂಕ್ರಾಂತಿಯಂದು ಉತ್ತರಾಯ ಣವು ಆರಂಭವಾಯಿತೆಂದರೆ ದೇವಾಲಯಗಳಲ್ಲಿ ರಥೋತ್ಸವಗಳು ಸಾಮಾನ್ಯವಾಗಿ ಸಪ್ತಮೀತಿಥಿಯಂದೇ ಆರಂಭವಾಗುವುವು. ಆ ಕಾರಣಕ್ಕೇ ರಥಸಪ್ತಮೀ ಎಂಬ ಹೆಸರು ಬಂದಿರುವುದು.
ಈ ಹಬ್ಬದಲ್ಲಿ ಒಂದು ವಿಶಿಷ್ಟವಾದ ಆಚರಣೆಯಿರುವುದು. ಅದೆಂದರೆ ಅಂದು ಸ್ನಾನ ಮಾಡುವ ಬಗೆ: ಬೆಳಗಿನ ಜಾವವೇ ಸ್ನಾನ. ಏಳು ಎಕ್ಕದಎಲೆಗಳನ್ನು ತಲೆಯ ಮೇಲೂ, ಏಳು ಎಲಚೀಎಲೆಗಳನ್ನು ತೋಳುಗಳ ಮೇಲೆಯೂ ಇರಿಸಿಕೊಂಡು ಸ್ನಾನ. ಏಕಿದು? ಮಾಘ ಶುಕ್ಲ ಸಪ್ತಮಿಯೆಂಬುದೇ ಸೂರ್ಯಗ್ರಹಣಕ್ಕೆಸಮಾನವಾದುದೆಂಬ ಉಕ್ತಿಯಿದೆ. ಮಾಘಮಾಸವೆಂದರೆ ಬಹಳ ಚಳಿಯೇ. ಅದರಲ್ಲೂ ಬೆಳಗಿನ ಜಾವವೆಂದರೆ ಮತ್ತೂ ತಣ್ಣಗಿರುವುದು. ಆದರೂ ಅರುಣೋದಯ- ಸಮಯದಲ್ಲೇ ಈ ಸ್ನಾನವು ವಿಹಿತ.
ಇದರಿಂದಾಗಿ ನಮ್ಮಲ್ಲಿಯ ಏಳು ಜನ್ಮದ ಪಾಪಗಳು ದೂರವಾಗುತ್ತವೆ. ನಮ್ಮ ಏಳುವಿಧ ಪಾಪಗಳೂ ತೊಲಗುತ್ತವೆ: 1. ಈ ಜನ್ಮದಲ್ಲಿ ಮಾಡಿದ ಪಾಪ 2. ಜನ್ಮಾಂತರಗಳಲ್ಲಿ ಸಂಪಾದಿ ಸಿದ ಪಾಪ; 3, 4, 5- ಮನಸ್ಸು, ವಾಕ್ಕು, ಕಾಯ - ಇವುಗಳಿಂದ ಮಾಡಿರುವ ಪಾಪ; ಹಾಗೂ 6,7 ತಿಳಿದು ಮಾಡಿದ ಪಾಪ, ಮತ್ತು ತಿಳಿಯದೇ ಮಾಡಿದ ಪಾಪ. ಅಲ್ಲದೆ ತನ್ನ ತಂದೆಯ ಕಡೆ ಹಾಗೂ ತಾಯಿಯ ಕಡೆ ಏಳೇಳು ತಲೆಮಾರುಗಳ ಉದ್ಧಾರವಾಗುತ್ತದೆ. ಹೀಗೆಂಬುದಾಗಿ ಹೇಳುವ ಶಾಸ್ತ್ರವಾಕ್ಯಗಳಿವೆ.
ರಥಸಪ್ತಮಿಯಂದು ಮಾಡುವ ಸ್ನಾನವನ್ನು ಸರೋವರ ದಲ್ಲೋ ಮಹಾನದಿಯಲ್ಲೋ ಮಾಡುವುದು ಹೆಚ್ಚು ಪ್ರಶಸ್ತವೆಂದಿದೆ. ಪುಣ್ಯಸರೋವರಗಳಲ್ಲಿ ಪುಷ್ಕರವು ಬಹುಶ್ರೇಷ್ಠ. ಮಹಾನದಿಗಳಲ್ಲಿ ಗಂಗೆ ಯಂತೂ ಪರಮಶ್ರೇಷ್ಠವೇ. ಇದಲ್ಲದೆ ಸಮುದ್ರಸ್ನಾನವೂ ಪ್ರಶಸ್ತ. ಮತ್ತು ಇವೆಲ್ಲದರಲ್ಲೂ ಅವಗಾಹನ ಸ್ನಾನ, ಅರ್ಥಾತ್ ಮುಳುಗು ಹಾಕಿ ಮಾಡುವ ಸ್ನಾನವು ಪ್ರಶಂಸೆಗೆ ಪಾತ್ರವಾಗಿದೆ.
ಅಂದು ಶ್ರಾದ್ಧ/ತರ್ಪಣಗಳ ಆಚರಣೆ, ವಿಶಿಷ್ಟದಾನಗಳು, ಸೂರ್ಯ ನಿಗೆ ಪ್ರಿಯವೆನಿಸುವ ಮಂತ್ರ-ಸ್ತೋತ್ರಗಳ ಪಾರಾಯಣ, ರಥೋತ್ಸವ ದರ್ಶನ, ಎಳ್ಳನ್ನು ಬೀರುವುದು - ಇವುಗಳನ್ನೂ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸೂರ್ಯನನ್ನು ನಮ್ಮ ಪ್ರಾಚೀನರು ಕಂಡಿರುವ ಬಗೆಯನ್ನೂ ಕೊಂಚ ವಿಶ್ಲೇಷಿಸಬಹುದು. ಮೊದಲನೆಯದಾಗಿ ಸೂರ್ಯನು ಒಬ್ಬನೇ ಅಲ್ಲ, ಹನ್ನೆರಡು ಮಂದಿ ಆದಿತ್ಯರುಂಟು - ಎಂದು ಹೇಳುವ ಮಾತುಗಳಿವೆ. ಇದಲ್ಲದೆ ಸೂರ್ಯರನ್ನು ಏಳು ಅಥವಾ ಎಂಟು ಎಂದು ಹೇಳುವ ನುಡಿಗಳೂ ಉಂಟು. ಏಕೆ ಹೀಗೆ? ಮಾಸಗಳು ಹನ್ನೆರಡಾದ್ದರಿಂದ, ದ್ವಾದಶಾದಿತ್ಯರು ಎನ್ನುವ ಲೆಕ್ಕ. ಆದರೆ ಏಳು-ಎಂಟುಗಳೆಂಬುದು, ಹಾಗೂ ಸೂರ್ಯರಥಕ್ಕೆ ಏಳು ಕುದುರೆಗಳು - ಎನ್ನುವುದರ ತತ್ತ್ವವನ್ನು ಅರಿಯಬೇಕಲ್ಲವೇ?
ಸಪ್ತಾಶ್ವಗಳೆಂದರೆ ಸಪ್ತವರ್ಣಗಳೆಂಬುದು ಒಂದು ರೂಪಕ - ಎಂದು ಅನೇಕ ಮಂದಿ ವ್ಯಾಖ್ಯಾನಿಸುತ್ತಾರೆ. ಆದರೆ ಅದು ಹಾಗಲ್ಲವೆಂಬುದನ್ನು ಶ್ರೀರಂಗಮಹಾಗುರುಗಳು ಸ್ಪಷ್ಟಪಡಿಸಿದ್ದಾರೆ. ನಾವು ಲೋಕದಲ್ಲಿ ನೋಡುವ ಬೆಳಕೂ ಅದರಲ್ಲಿ ಅಂತರ್ಗತವಾದ ಸಪ್ತವರ್ಣಗಳೂ ಭೌತಿಕಪದಾರ್ಥಗಳು. ಅವಕ್ಕಿಲ್ಲಿ ಅನ್ವಯವಿಲ್ಲ.
ಇಲ್ಲಿ ಹೇಳುತ್ತಿರುವುದು ಅತಿಶ್ರೇಷ್ಠವಾದ ಅಧ್ಯಾತ್ಮ-ವಿಚಾರ ವನ್ನು. ಏನದು? ನಮ್ಮೆಲ್ಲರ ಶಿರಸ್ಸಿನಲ್ಲಿ ಏಳು ಪ್ರಾಣಗಳುಂಟು. ಹೇಗೆ? ಜ್ಞಾನೇಂದ್ರಿಯಗಳು ಐದಲ್ಲವೇ? ಐದೂ ಶಿರಸ್ಸಿನಲ್ಲಿವೆ. ಅವಲ್ಲಿ ಕಣ್ಣು, ಕಿವಿಗಳು ಎರಡೆರಡಿವೆ. ಮೂಗಿನಲ್ಲಿ ಎರಡು ಹೊಳ್ಳೆಗಳಿವೆ. ಇವುಗಳ ಜೊತೆಗೆ ನಾಲಿಗೆಗೆ ಪ್ರತೀಕವಾದ ಬಾಯಿಯಿದೆ. ಈ ಏಳು ‘ಖ’ಗಳನ್ನೇ, ಎಂದರೆ ರಂಧ್ರಗಳನ್ನೇ, ಶೀರ್ಷಣ್ಯ-ಪ್ರಾಣಗಳೆಂದಿರುವುದು.
ಪ್ರಾಣಶಕ್ತಿಯು ಹೀಗೆ ಏಳು ಬಗೆಯಾಗಿ ಇರುವುದನ್ನೇ ಸೂರ್ಯಾಶ್ವಗಳೆಂದಿರುವುದು. ಪ್ರಾಣಶಕ್ತಿಗಳನ್ನು ಅಶ್ವಗಳೆಂದು ರೂಪಕವಾಗಿ ತೋರಿಸಿದೆ. ಇವನ್ನೇ ಕೆಲವೊಮ್ಮೆ ಸಪ್ತ-ಸೂರ್ಯ ರೆಂದಿರುವುದು. ಹಾಗಾದರೆ ಎಂಟನೆಯ ಸೂರ್ಯನೆಂದರಾರು? ಮುಖ್ಯಪ್ರಾಣ ಅಥವಾ ಜ್ಯೇಷ್ಠಪ್ರಾಣನನ್ನೇ ಹಾಗೆ ಹೇಳಿದೆ. ಸಪ್ತ ಸೂರ್ಯರಿಗೆ ಚಲನೆಯುಂಟು. ನಿಶ್ಚಲನಾದ ಅಷ್ಟಮಸೂರ್ಯನು ಮಹಾಮೇರುವಿನಲ್ಲಿ ಪ್ರತಿಷ್ಠಿತ. ಇವೆಲ್ಲವನ್ನೂ ಪರಿಗಣಿಸಿಯೇ ಈ ಸಪ್ತಮೀ ಹಬ್ಬದಲ್ಲಿ ಏಳು-ಏಳರ ವೈಭವಗಳನ್ನು ತಂದಿರುವುದು. ಇದು ಶ್ರೀರಂಗಮಹಾಗುರುಗಳಿತ್ತಿರುವ ತತ್ತ್ವ-ದರ್ಶನ.