ಚಿಕ್ಕೋಡಿ ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಂಭುಲಿಂಗಪ್ಪ ವಡೆಯನಪುರ ಮಾತನಾಡಿದರು. ಡಾ.ದರ್ಶನಕುಮಾರ ಬಿಳ್ಳೂರ, ಡಾ.ಸುನೀಲ ಹೆಬ್ಬಾಳೆ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಉದ್ಯಮದಲ್ಲಿ ಸಾಧನೆ ಮಾಡಲು ಮೂಲಜ್ಞಾನ, ಶಿಸ್ತು ಮುಖ್ಯ. ಇಂಜಿನಿಯರಿಂಗ್ ಪದವಿ ಪಡೆದರೂ ಸಹಿತ ಕಲಿಕೆ ನಿರಂತರವಾಗಿರಲಿ. ನಾವು ನೇಮಕಾತಿಯಲ್ಲಿ ಕೆಎಲ್‌ಇ ವಿದ್ಯಾರ್ಥಿಗಳಿಗೆ ವಿಶೇಷ ಪ್ರಾತಿನಿಧ್ಯ ನೀಡುತ್ತೇವೆ ಎಂದು ಬೆಂಗಳೂರು ಇಂಜಿನಿಯರ್ ಶಂಭುಲಿಂಗಪ್ಪ ವಡೆಯನಪುರ ಹೇಳಿದರು.
ಪಟ್ಟಣದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆ್ಯಂಡ್ ಡೆಟಾ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈಚೆಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ‘ಅಮಿಗೊಜ್ ವೊಯೆಜ್’ ಸಮಾರಂಭದಲ್ಲಿ ಮಾತನಾಡಿ, ಸುಲಭ ಮಾರ್ಗದ ಬೆನ್ನು ಹತ್ತದಿರಿ, ದಾರಿ ಕಠಿಣವಾದರೂ ಸಹಿತ ಅಂತ್ಯದಲ್ಲಿ ಖುಷಿ ಕೊಡುತ್ತದೆ. 2012ರಲ್ಲಿ ಪಾಸಾಗಿ ನಾನು ಮತ್ತು ಸಹಪಾಠಿಗಳು ಇಂದು ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಬೇರೆ-ಬೇರೆ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ತಾವು ಹೊಸ ಪ್ರಾಡಕ್ಟ್ ವಿನ್ಯಾಸಗೊಳಿಸಿ, ದೇಶಕ್ಕೆ ಕೊಡುಗೆ ನೀಡಿ ಎಂದರು.
ಪ್ರಾಚಾರ್ಯ ಡಾ.ದರ್ಶನಕುಮಾರ ಬಿಳ್ಳೂರ ಮಾತನಾಡಿ, ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳಾದರೂ ಸಹಿತ, ಎಲ್ಲ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇಂಜಿನಿಯರಿಂಗ್ ಮುಗಿದ ನಂತರ ವೃತ್ತಿ ಜೀವನದ ನೈಜ ಪ್ರಯಾಣ ಆರಂಭವಾಗುತ್ತದೆ. ಹಿರಿಯ ವಿದ್ಯಾರ್ಥಿಗಳ ಸಹಾಯ ಪಡೆದು ವೃತ್ತಿ, ಉದ್ಯಮದಲ್ಲಿ ಯಶಸ್ವಿಯಾಗಬೇಕು ಎಂದರು.
ಸುಮಿತ ಬಡಕೆ, ಪದ್ಮರಾಜ ಮೆಕ್ಕಳಕಿ, ಧನಶ್ರೀ ಕುಲಕರ್ಣಿ, ಖುಷಿ ಪಾಟೀಲ, ನಂದಿನಿ ಯಾದವ, ಪುನೀತ ಬೈರನ್ನವರ, ಪ್ರಿಯಾ ಕುಲಕರ್ಣಿ ಅನುಭವ ಹಂಚಿಕೊಂಡರು.
ಡಾ.ಸುನೀಲ ಹೆಬ್ಬಾಳೆ, ಡಾ.ಸಚಿನ ಮೆಕ್ಕಳಕಿ, ಪ್ರೊ.ಬಾಲಚಂದ್ರ ರಾವ, ಪ್ರೊ.ಅಮೃತಾ ಸೋನಾವಳೆ, ಪ್ರೊ.ವಿನಾಯಕ ಪಾನಧಾರೆ, ಸಂತೋಷ ಪಾಟೀಲ ಇತರರಿದ್ದರು. ತನ್ವಿ ನೀಲಕಂಠನವರ, ವಿರಾಜ ಪಾಟೀಲ ನಿರೂಪಿಸಿದರು. ವಿಭಾಗ ಮುಖ್ಯಸ್ಥರಾದ ಡಾ.ಜಗನ್ನಾಥ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಓಂ ಕದಮ ವಾರ್ಷಿಕ ವರದಿ ವಾಚಿಸಿದರು. ಪೂಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ನಂದಿನಿ ಯಾದವ ಸ್ವಾಗತಿಸಿದರು. ಸುಲೋಚನಾ ಚನ್ನವರ ಪರಿಚಯಿಸಿದರು. ನಿಖಿಲ ಕಾಗಲಕರ ವಂದಿಸಿದರು.