ಸಿಂದಗಿ ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಶಾಸಕ ಅಶೋಕ ಮನಗೂಳಿ ಅರ್ಹ ಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರ ನೀಡಿದರು. ಪೌರಾಯುಕ್ತ ರವಿ ಶಿರಗುಪ್ಪಿ, ಹಣಮಂತ ಸುಣಗಾರ, ಭೀಮು ರೋಡಗಿ, ಸಿದ್ದು ಅಂಗಡಿ, ನಬಿರಸೂಲ್ ಉಸ್ತಾದ ಮತ್ತಿತರರಿದ್ದರು.
- ಶಾಸಕ ಮನಗೂಳಿ ಅಸಮಾಧಾನ
- ಹಕ್ಕು ಪತ್ರ ವಿತರಣಾ ಸಮಾರಂಭ
ಸಿಂದಗಿ: ನಗರದ ಸ.ನಂ. 842ರಲ್ಲಿನ ಕುಟುಂಬಗಳ ತೆರವಿಗೆ ಹೈಕೋರ್ಟ್ ಆದೇಶ ಮಾಡಿತ್ತು. ಅದರಂತೆ ತೆರವುಗೊಳಿಸಲಾಗಿದೆ ಆದರೆ ಈ ವಿಷಯದಲ್ಲಿ ನನ್ನ ಹಾಗೂ ನಗರಸಭೆ ಅಧಿಕಾರಿಗಳ ಮೇಲೆ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಗರಸಭೆ ಹಮ್ಮಿಕೊಂಡಿದ್ದ 183 ನಿರಾಶ್ರಿತ ಕುಟುಂಬಗಳಿಗೆ ಸಾಂಕೇತಿಕವಾಗಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ಆ ಜಾಗದಲ್ಲಿನ 82 ಕುಟುಂಬಗಳು ನಿರಾಶ್ರಿತವಾಗಿವೆ. ಅವರಿಗೆ ಸೂರು ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅಲ್ಲಿನ ನಿರಾಶ್ರಿತ ಕುಟುಂಬಗಳು ನಗರಸಭೆಗೆ ಬಂದು ಅರ್ಜಿ ಸಲ್ಲಿಸಬೇಕು. ಅಲ್ಲದೇ ಅವರು ಈ ಹಿಂದೆ ಎಲ್ಲಿಯಾದರೂ ಜಾಗ ಪಡೆದುಕೊಂಡಿದ್ದರೆ, ಆ ಜಾಗಕ್ಕೆ ಸರ್ಕಾರದಿಂದ ದೊರೆಯಬಹುದಾದ ಪರಿಹಾರ ಮತ್ತು ಅದರ ಮೌಲ್ಯವನ್ನು ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಗರದ ನಿರಾಶ್ರಿತರಿಂದ ಪಡೆದ ಅರ್ಜಿಗಳಲ್ಲಿ ಒಟ್ಟು 221 ಲಾನುಭವಿಗಳ ಹಕ್ಕನ್ನು ಅನುಮೋದನೆಗೆ ಕಳುಹಿಸಲಾಗಿತ್ತು. ಅವುಗಳಲ್ಲಿ 42 ಲಾನುಭವಿಗಳ ಹಕ್ಕು ಪತ್ರ ತಾಂತ್ರಿಕ ಹಾಗೂ ಇತರೆ ಕಾರಣಗಳಿಂದ ವಿತರಿಸಲಾಗುತ್ತಿಲ್ಲ. ಅವರಿಗೂ ತಾಂತ್ರಿಕ ತೊಂದರೆ ನಿವಾರಿಸಿ, ಹಕ್ಕುಪತ್ರ ಒದಗಿಸಲಾಗುವುದು ಎಂದು ಹೇಳಿದರು.
ನಗರಸಭೆಯ ಸ.ನಂ. 28ರಲ್ಲಿ ಅಂದಾಜು 550 ಕುಟುಂಬಗಳಿಗೆ ನಿವೇಶನ ಒದಗಿಸುವ ಗುರಿ ಹೊಂದಿದ್ದು, ಅರ್ಹ ಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಲಾನುಭವಿಗಳ ಆಯ್ಕೆ ನಂತರದಲ್ಲಿ ಸೂಕ್ತ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ನಗರಸಭೆ ಪೌರಾಯುಕ್ತ ರವಿ ಶಿರಗುಪ್ಪಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಹಣಮಂತ ಸುಣಗಾರ, ಆಶ್ರಯ ಕಮಿಟಿ ಸದಸ್ಯ ಭೀಮು ರೋಡಗಿ, ರಾಜು ಖೇಡ, ಶೈಲಾ ಪೂಜಾರಿ, ಮಲ್ಲು ಸದುಗೋಳ ಹಾಗು ಹಾಸಿಂ ಆಳಂದ, ಸಾಯಬಣ್ಣ ಪುರದಾಳ, ರಹೀಮ ದುದನಿ, ಚನ್ನಪ್ಪ ಗೋಣಿ, ಸದಾಶಿವ ಕುಂಬಾರ, ನಗರಸಭೆಯ ಅಧಿಕಾರಿಗಳು ಮತ್ತಿತರರಿದ್ದರು.