Basaveshwaraswamy's grand Kalasotsava 
ರಾಜ್ಯ

ಬಸವೇಶ್ವರಸ್ವಾಮಿ ಅದ್ದೂರಿ ಕಳಸೋತ್ಸವ

ಹುಳಿಯಾರು: ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಶ್ರೀಬಸವೇಶ್ವರಸ್ವಾಮಿ ಮತ್ತು ಶ್ರೀ ಆದಿಶಕ್ತಿ ಚೌಡಮ್ಮ ದೇವಿಯ ಜಾತ್ರೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಕಳಸೋತ್ಸವವು ಅದ್ದೂರಿಯಾಗಿ ನೆರವೇರಿತು.
ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿ ಹೊಳೆಸೇವೆ, ಗಂಗಾಪೂಜೆ ನಂತರ ಹೊಳೆಯಲ್ಲಿ ಕಳಸ ಸ್ಥಾಪಿಸುವ ಮೂಲಕ ಉತ್ಸವ ಆರಂಭವಾಯಿತು. ಉತ್ಸವದಲ್ಲಿ ಹುಳಿಯಾರು, ಗೂಬೆಹಳ್ಳಿ, ದೊಡ್ಡಬಿದರೆ, ಸಂಗೇನಹಳ್ಳಿ, ಗರಗದಹಳ್ಳಿ ಸೇರಿದಂತೆ ವಿವಿಧಗ್ರಾಮಗಳ ಹೆಣ್ಣುಮಕ್ಕಳು ಶ್ರೀ ಅಮ್ಮನವರ ಕಳಸವನ್ನು ತಲೆ ಮೇಲೆ ಹೊತ್ತು ನಡೆಮುಡಿಯೊಂದಿಗೆ ಮೂಲ ಸ್ಥಾನಕ್ಕೆ ಆಗಮಿಸಿದರು.
ದೂತರಾಯನ ಜತೆ ಶ್ರೀ ಚೌಡಮ್ಮ ದೇವಿ ಕಳಸೋತ್ಸವವು ಮಂಗಳವಾದ್ಯಗಳೊಂದಿಗೆ ಹೊಳೆಯಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನ ತಲುಪಿತು. ನಂತರ ಘಟೆ ಉತ್ಸವ, ಸಿಡಿ, ಶ್ರೀ ಆದಿಶಕ್ತಿ ಚೌಡೇಶ್ವರಿ ಅಮ್ಮನವರ ಪುಷ್ಪಾಲಂಕಾರದ ವಾನದ ಉತ್ಸವ ಸೇರಿದಂತೆ ಅನೇಕ ಧಾರ್ಮಿಕ ಕೈಂಕರ್ಯಗಳು ನೆರವೇರಿತು.