ಗುಲ್ಬರ್ಗ ವಿವಿಯಲ್ಲಿ ಡಾ.ಗಳಂಗಳಪ್ಪ ಪಾಟೀಲ್ (ಎಸ್.ಬಿ. ಪಾಟೀಲ) ಬಸವಾದಿ ಶರಣ ಸಾಹಿತ್ಯ ಕೇಂದ್ರ ಸೋಮವಾರ ಆಯೋಜಿಸಿದ್ದ ಸಾಂಸತಿಕ ನಾಯಕ ಜಗಜ್ಯೋತಿ ಬಸವೇಶ್ವರರ 893ನೇ ಜಯಂತ್ಯುತ್ಸವದಲ್ಲಿ ಡಾ.ಬಿ.ಜಿ.ಪಾಟೀಲ್, ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ, ಸಿದ್ದಪ್ಪ ಸುಳ್ಳದ್, ಬಂಡೆಪ್ಪ ಕೆಸೂರ, ಡಾ.ಎನ್.ಜಿ.ಕಣ್ಣೂರ್, ಜಯಾಂಬಿಕ, ಪ್ರೊ.ರಮೇಶ ಲಂಡನಕರ್ ಇದ್ದರು.
- ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಹೇಳಿಕೆ
- ಗುಲ್ಬರ್ಗ ವಿವಿಯಲ್ಲಿ ಬಸವ ಜಯಂತಿ ಆಚರಣೆ
ಕಲಬುರಗಿ: ಬಸವೇಶ್ವರರ ಕಾಯಕ ಶ್ರೇಷ್ಠತೆ ಜಗತ್ತಿಗೆ ಮಾದರಿ ಜಗಜ್ಯೋತಿ ಬಸವೇಶ್ವರರ ಕಾಯಕ ತತ್ವ ಜಗತ್ತಿಗೆ ಮಾದರಿ. 12ನೇ ಶತಮಾನದಲ್ಲಿ ಸಮ ಸಮಾಜ ಕಟ್ಟಲು ಶ್ರಮಿಸಿದ ಬಸವಣ್ಣ ಒಬ್ಬ ಶ್ರೇಷ್ಠ ಸಮಾಜ ಸುಧಾರಕ. ಅವರ ಸಮಾಜಮುಖಿ ಚಿಂತನೆ, ಸಂದೇಶಗಳು ಸಮಾಜದ ಸುಧಾರಣೆಗೆ ಪ್ರೇರಣೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಡಾ.ಗಳಂಗಳಪ್ಪ ಪಾಟೀಲ (ಎಸ್.ಬಿ.ಪಾಟೀಲ) ಬಸವಾದಿ ಶರಣ ಸಾಹಿತ್ಯ ಕೇಂದ್ರ ಸೋಮವಾರ ಆಯೋಜಿಸಿದ್ದ ದಾರ್ಶನಿಕ, ಸಾಂಸತಿಕ ನಾಯಕ ಬಸವೇಶ್ವರರ 893ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯ ಬಸವಾದಿ ಶರಣ ಸಾಹಿತ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಎರಡು ಎಕರೆ ಜಾಗ ನೀಡಿದೆ. ಅದರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಕೇಂದ್ರದ ಉಪನ್ಯಾಸಕ ಹಾಗೂ ಸಂಯೋಜನಾಧಿಕಾರಿ ಡಾ.ಆನಂದ ಸಿದ್ದಾಮಣಿ ಮಾತನಾಡಿ, ಬಸವಣ್ಣನವರ ವಚನ ಚಳುವಳಿ ಮೂಲಕ ಕೈಗೊಂಡ ಕಾರ್ಯಗಳು ದೇಶ ವಿದೇಶಗಳ ಮೇಲೆ ಹೆಚ್ಚು ಪ್ರಭಾವ ಬೀರಿವೆ. ಅವರ ವಚನಗಳು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದು ವ್ಯಕ್ತಿತ್ವ ವಿಕಸನ ಮಾಡುತ್ತಿವೆ. ಬಸವಣ್ಣನ ಕಾಯಕ ಸಿದ್ಧಾಂತ ಸಮಾಜದಲ್ಲಿ ಅರಿವು, ಸಮಾನತೆ, ಜಾತಿ ನಿರಾಕರಣೆ, ಸಿ ಸಮಾನತೆಯಂತಹ ಮಹತ್ವದ ವಿಚಾರಗಳನ್ನು ಬಿಂಬಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ ಮಾತನಾಡಿ, ಬಸವಾದಿ ಶರಣರು ತಮ್ಮ ಚಿಂತನೆಗಳ ಮೂಲಕ ಜಗತ್ತಿಗೆ ಬೆಳಕಾದವರು. ಶರಣ ಪರಂಪರೆಯಲ್ಲಿ ಜಾತಿ ಭೇದವಿರಲಿಲ್ಲ. ಗಂಡು ಹೆಣ್ಣು ತಾರತಮ್ಯವಿರಲಿಲ್ಲ. ಕಾಯಕವೇ ಶಕ್ತಿ ಮತ್ತು ಮುಕ್ತಿ ಎಂಬುದು ಶರಣರ ಆಶಯವಾಗಿತ್ತು. ಕಂದಾಚಾರ, ಢಂಬಾಚಾರ, ವ್ಯಕ್ತಿ ಪೂಜೆ, ಮೂರ್ತಿ ಪೂಜೆ, ಮೂಢನಂಬಿಕೆ ವಿರೋಧಿಸಿ ಜ್ಞಾನ, ಕಾಯಕ, ಅನ್ನ ದಾಸೋಹ ಪರಂಪರೆ ಪ್ರಚುರಪಡಿಸಿದರು. ಅವುಗಳ ನೈಜ ಸಂದೇಶಗಳನ್ನು ಅರಿತು ಉತ್ತಮ ಜೀವನ ಕಂಡುಕೊಳ್ಳಬೇಕು ಎಂದರು.
ಬಸವಾದಿ ಶರಣ ಕೇಂದ್ರದ ನಿರ್ದೇಶಕ ಹಾಗೂ ಬಸವ ಜಯಂತಿ ಸಂಚಾಲಕ ಪ್ರೊ.ಎಸ್.ಎಂ.ಹನಗೋಡಿಮಠ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಬಸವಣ್ಣ ಸಾಮಾಜಿಕ ಮೌಲ್ಯಗಳ ಅರಿವು ಮೂಡಿಸಲು ಕ್ರಾಂತಿ ಕೈಗೊಂಡರು. ಅವರ ಸಮಾನತೆ, ಕಾಯಕ, ದಾಸೋಹ ಸೇವೆಯ ಮೂಲಕ ಜೀವಂತವಾಗಿದ್ದಾರೆ. ಶ್ರದ್ಧೆ ಮತ್ತು ಭಕ್ತಿಯಿಂದ ಕಾಯಕ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗಲಿದೆ ಎಂಬ ಮಹತ್ವದ ಸಂದೇಶ ನೀಡಿದ್ದಾರೆ. ಹುಟ್ಟಿನಿಂದ ಎಲ್ಲರೂ ಸಮಾನರೆಂದು ಜಾತೀಯತೆ ಅಳಿಸಲು ಪ್ರಯತ್ನಿಸಿದರು ಎಂದರು.
ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಸುಳ್ಳದ್, ಬಸವಾದಿ ಶರಣ ಸಾಹಿತ್ಯ ಕೇಂದ್ರದ ಸಲಹಾ ಸಮಿತಿಯ ಖಾಯಂ ಸದಸ್ಯ ಬಂಡೆಪ್ಪ ಕೆಸೂರ, ಮೌಲ್ಯಮಾಪನ ಕುಲಸಚಿವ ಡಾ.ಎನ್.ಜಿ.ಕಣ್ಣೂರ, ವಿತ್ತಾಧಿಕಾರಿ ಜಯಾಂಬಿಕ, ಕುಲಸಚಿವ ಪ್ರೊ.ರಮೇಶ ಲಂಡನಕರ್ ಇದ್ದರು.
ಸಂಗೀತ ವಿಭಾಗದ ಅತಿಥಿ ಉಪನ್ಯಾಸಕಿ ಡಾ.ಲಕ್ಷಿ$್ಮಶಂಕರ್ ಜೋಷಿ, ಸುನಿತಾ ಜಟಕಿಕರ್, ಡಾ.ಜಯಾ ಡಿ. ದಾನಮ್ಮ ಬಸವಣ್ಣನವರ ನಾಡಗೀತೆ, ವಚನ ಗಾಯನ ಪ್ರಸ್ತುತಪಡಿಸಿದರು. ಡಾ.ಚಂದ್ರಕಾಂತ ಬಿರಾದಾರ ಅತಿಥಿ ಪರಿಚಯ ಮಾಡಿ, ವಂದಿಸಿದರು. ಡಾ. ಎಂ.ಬಿ.ಕಟ್ಟಿ ನಿರೂಪಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಶರಣರ ಜಯಂತಿ ಆಚರಣೆ ಜತೆಗೆ ವಿಶೇಷ ಉಪನ್ಯಾಸ, ವಿಚಾರ ಸಂಕಿರಣವನ್ನೂ ಆಯೋಜಿಸಿದರೆ ಅಗತ್ಯ ಆರ್ಥಿಕ ನೆರವು ನೀಡಲಾಗುವುದು.
ಅಶಾಂತಿ, ಜಾತಿ, ಅನ್ಯಾಯ, ಸಂರ್ಷ, ಅಸಮಾನತೆ, ಶೋಷಣೆ, ಮಹಿಳಾ ದೌರ್ಜನ್ಯ, ಬಿಕ್ಕಟ್ಟುಗಳು ಸಮಾಜವನ್ನು ಬಾಧಿಸುತ್ತಿವೆ. ಬಲಿಷ್ಟ ರಾಷ್ಟ್ರಗಳು ಶಕ್ತಿ ಮತ್ತು ಪ್ರಾಭಲ್ಯ ತೋರಿಸಲು ಯುದ್ಧವೊಂದೇ ಪರಿಹಾರ ಎಂಬ ನಿರ್ಧಾರದಿಂದ ಜನರು ಭಯ ಮತ್ತು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಸವಣ್ಣನವರ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ಎಂಬ ವಚನ ಸಂದೇಶದಲ್ಲಿ ಎಲ್ಲಾ ಬಿಕ್ಕಟ್ಟುಗಳಿಗೆ ಪರಿಹಾರವಿದೆ.