ಕೋಟೆ ಕೆರೆ 
ರಾಜ್ಯ

ಯುವ ಕರ್ನಾಟಕ ವೇದಿಕೆ ಆಗ್ರಹ

ಬೆಳಗಾವಿ: ನಗರದ ಕೋಟೆ ಕೆರೆ ಮಧ್ಯದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಯುವ ಕರ್ನಾಟಕ ವೇದಿಕೆ ಕಾರ್ಯಕರ್ತರು ಸೋಮವಾರ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬೇರೆ ರಾಜ್ಯಕ್ಕೆ ಸೇರಿದ ವ್ಯಕ್ತಿಗಳ ಮೂರ್ತಿಗಳನ್ನು ಎಲ್ಲೂ ಪ್ರತಿಷ್ಠಾಪಿಸಬಾರದು. ಬದಲಿಗೆ ಅಮಟೂರ ಬಾಳಪ್ಪ, ವಡ್ಡರ ಯಲ್ಲಣ್ಣ, ಸರ್ದಾರ ಗುರುಸಿದ್ದಪ್ಪ, ಇಮ್ಮಡಿ ಪುಲಕೇಶಿ, ಕೆಂಪೇಗೌಡ, ಬೆಳವಡಿ ಮಲ್ಲಮ್ಮ ಹಾಗೂ ಕೆಳದಿ ಚನ್ನಮ್ಮರಂತಹ ಕರ್ನಾಟಕದ ಸಾಧಕರ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು.
ಸರ್ಕಾರಿ ಆದೇಶದಂತೆ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು. ಈ ವೇಳೆ ಮನವಿ ಸ್ವೀಕರಿಸಲು ಉಪ ಆಯುಕ್ತ ಉದಯಕುಮಾರ ತಳವಾರ ಆಗಮಿಸಿದ್ದಾಗ ಆಯುಕ್ತರೇ ಸ್ಥಳಕ್ಕೆ ಬರುವಂತೆ ಪ್ರತಿಭಟನಕಾರರು ಪಟ್ಟುಹಿಡಿದರು.
ಈ ವೇಳೆ ಕೆಲಹೊತ್ತು ವಾಗ್ವಾದ ಉಂಟಾಯಿತು. ಕೊನೆಗೆ ಮಹಾಪೌರ ಮಂಗೇಶ ಪವಾರ ಮತ್ತು ಉಪಮೇಯರ್ ವಾಣಿ ಜೋಶಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಮುಖಂಡ ಶಂಕರ ಕಾಮಕರ ಇತರರಿದ್ದರು.