Basavaraj Horatti | ಸಿಎಂ ಮನವಿಗೆ ಸ್ಪಂದಿಸಿದ ಬಸವರಾಜ್ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ!
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಮ್ಮತಿಸಿದ್ದು, ಮುಂಬರುವ ಮುಂಗಾರು ಅಧಿವೇಶನದ ಎರಡನೇ ದಿನದಂದು ಉಪಸಭಾಪತಿಯವರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣವೇ ಅವರು ತಮ್ಮ ಸ್ಥಾನವನ್ನು ತೊರೆಯಲಿದ್ದಾರೆ.
ಪರಿಷತ್ತಿನ ಉಪಸಭಾಪತಿ ಸ್ಥಾನಕ್ಕೆ ಆಗಸ್ಟ್ 14ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಗಿದ್ದು, ನೂತನ ಉಪಸಭಾಪತಿಯವರ ಆಯ್ಕೆಯಾದ ತಕ್ಷಣವೇ ಬಸವರಾಜ ಹೊರಟ್ಟಿ ಅವರು ಸಭಾಪತಿ ಹುದ್ದೆಯಿಂದ ಅಧಿಕೃತವಾಗಿ ನಿರ್ಗಮಿಸಲಿದ್ದಾರೆ.
ಆದರೆ ಸಂಪುಟ ಸಚಿವರ ಹಾಗೂ ನಾಯಕರ ಒತ್ತಡದ ಹೊರತಾಗಿಯೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಪಕ್ಷದ ಹೈಕಮಾಂಡ್ ಹಾಗೂ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಅಂತಿಮವಾಗಿ ಸಭಾಪತಿ ಸ್ಥಾನ ತ್ಯಾಗ ಮಾಡುವಂತೆ ಹೊರಟ್ಟಿ ಅವರಲ್ಲಿ ವಿನಂತಿಸಿಕೊಂಡರು.
ಕಾಂಗ್ರೆಸ್ ಹೈಕಮಾಂಡ್ ವಿಧಾನ ಪರಿಷತ್ತಿನಲ್ಲಿ ಹೊಸ ಸಭಾಪತಿಯನ್ನು ನಿರ್ಧರಿಸಿದ್ದು, ಆ ಸ್ಥಾನಕ್ಕೆ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ ಹಾಗೂ ಉಪ ಸಭಾಪತಿ ಸ್ಥಾನಕ್ಕೆ ಉಮಾಶ್ರೀ ಅವರ ಹೆಸರನ್ನು ಅನುಮೋದಿಸಿದೆ. ಮೇಲ್ಮನೆಯಲ್ಲಿ ಬದಲಾದ ಸಂಖ್ಯಾಬಲ ಹಾಗೂ ಪಕ್ಷದ ಆಂತರಿಕ ನಿರ್ಧಾರಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಹೈಕಮಾಂಡ್ ಸೂಚನೆಯಂತೆ ಹೊರಟ್ಟಿ ಅವರಿಗೆ ಹುದ್ದೆ ತ್ಯಜಿಸುವಂತೆ ವಿನಂತಿಸಿಕೊಂಡಿದ್ದರು.
ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಬಲಿತ ಸಭಾಪತಿಯಾಗಿದ್ದ ಹೊರಟ್ಟಿ ಅವರು, ಹುದ್ದೆ ತೊರೆಯುವ ಮುನ್ನ ಪ್ರತಿಪಕ್ಷಗಳ ನಾಯಕರೊಂದಿಗೂ ಚರ್ಚಿಸಿ, ಯಾವುದೇ ಸಂಘರ್ಷಕ್ಕೂ ಅವಕಾಶ ನೀಡದೆ ಸಾಂವಿಧಾನಿಕ ಚೌಕಟ್ಟಿನಲ್ಲೇ ನಿರ್ಗಮಿಸಲು ನಿರ್ಧರಿಸಿದ್ದು, ರಾಜ್ಯದ ವಿಧಾನ ಪರಿಷತ್ತಿನ ಅತ್ಯಂತ ಹಿರಿಯ ಸದಸ್ಯರಲ್ಲಿ ಒಬ್ಬರಾಗಿರುವ (8 ಬಾರಿ ಎಂಎಲ್‌ಸಿ) ಬಸವರಾಜ್ ಹೊರಟ್ಟಿ ಅವರು ಶಿಕ್ಷಕರ ಕ್ಷೇತ್ರವನ್ನು ಸುದೀರ್ಘ ಕಾಲ ಪ್ರತಿನಿಧಿಸಿ ಸದನದ ಘನತೆಯನ್ನು ಎತ್ತಿಹಿಡಿದ ಹೆಗ್ಗಳಿಕೆ ಹೊಂದಿದ್ದಾರೆ.
ಆಗಸ್ಟ್ 14ರಂದು ಉಪಸಭಾಪತಿಯಾಗಿ ಕಾಂಗ್ರೆಸ್‌ನ ಉಮಾಶ್ರೀ ಅವರು ಆಯ್ಕೆಯಾದ ಬಳಿಕ, ಹೊರಟ್ಟಿ ಅವರು ನಿಯಮಾವಳಿಗಳ ಪ್ರಕಾರ ಉಪಸಭಾಪತಿಯವರಿಗೇ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಲಿದ್ದಾರೆ. ತದನಂತರ ಸಭಾಪತಿ ಸ್ಥಾನ ತೆರವಾಗಲಿದ್ದು, ಸಲೀಂ ಅಹ್ಮದ್ ಅವರನ್ನು ನೂತನ ಸಭಾಪತಿಯಾಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.