ಬಸವಕಲ್ಯಾಣದ ಗುಣತೀರ್ಥವಾಡಿಯಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಬಸವ, ಅಕ್ಕ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶ ಎಸ್.ಎಸ್.ನಾಗರಾಳೆ ಉದ್ಘಾಟಿಸಿದರು. ಶ್ರೀ ಬಸವಪ್ರಭು ಸ್ವಾಮೀಜಿ, ಸಿದ್ಧವಿರ ಸಂಗಮದ, ಪ್ರಿಯಾಂಕ ಪರಸಂಗ, ಜಗನ್ನಾಥ ಪತಂಗೆ ಇತರರಿದ್ದರು.
- ಸಿದ್ಧವಿರ ಸಂಗಮದ ಅಭಿಮತ
- ಗುಣತೀರ್ಥ ವಾಡಿಯಲ್ಲಿ ಮಹಾತ್ಮರ ಜಯಂತಿ
ಬಸವಕಲ್ಯಾಣ: ಕನ್ನಡ ನಾಡಿನಲ್ಲಿ ಜನಿಸಿದ ಬಸವಣ್ಣನವರು ವಿಶ್ವದ ಕಲ್ಯಾಣಕ್ಕಾಗಿ ದುಡಿದಿದ್ದಾರೆ. ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ ಎನ್ನುವ ಜನಪದ ನುಡಿಯಂತೆ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಸೇರಿ ಎಲ್ಲ ರಂಗಗಳಲ್ಲಿ ನೈತಿಕತೆ ಸಂದೇಶ ಸಾರಿದ್ದಾರೆ ಎಂದು ರಾಷ್ಟ್ರೀಯ ಬಸವದಳದ ಸಿದ್ಧವಿರ ಸಂಗಮದ ಹೇಳಿದರು.
ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆ ಮಹಾಮಠದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಬಸವೇಶ್ವರ, ಅಕ್ಕಮಹಾದೇವಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅನುಭಾವ ನೀಡಿದ ಅವರು, ಪರಮಾತ್ಮನ ಉದ್ದೇಶ ಈಡೇರಿಸಲು ಬಂದ ಕಾರಣಿಕ ಪುರುಷ ಬಸವಣ್ಣ. ಅರಿವನ್ನು ಗುರುವನ್ನಾಗಿಸಿಕೊಂಡು ಈ ಇಳೆಯಲ್ಲಿ ಸತ್ಯ, ನ್ಯಾಯ, ಧರ್ಮದಿಂದ ನಡೆ&ನುಡಿ ಒಂದಾಗಿಸಿಕೊಂಡು ಪರಿಪೂರ್ಣ ಚೇತನರಾಗಿ ಕಂಗೊಳಿಸಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ನ್ಯಾಯಾಧೀಶ ಎಸ್.ಎಸ್. ನಾಗರಾಳೆ ಮಾತನಾಡಿ, ಶರಣರು ನುಡಿದಂತೆ ನಡೆದವರು. ಅವರಂತೆ ನಾವು ಅರಿವು ಮತ್ತು ಆಚಾರದಲ್ಲಿ ಒಂದಾದಾಗಲೇ ಶರಣರ ಜಯಂತಿ ಸಾರ್ಥಕ್ಯ ಕಾಣಲಿದೆ. ಬಸವಣ್ಣನವರು, ಅಕ್ಕಮಹಾದೇವಿ, ಡಾ.ಅಂಬೇಡ್ಕರ್ ನೀಡಿದ ಸಂದೇಶಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಪ್ರಿಯಾಂಕ ಪರಸಂಗ ಮಾತನಾಡಿ, ವೈರಾಗ್ಯ ನಿಧಿ ಅಕ್ಕಮಹಾದೇವಿ ಸವೆಸಿದ ದಾರಿ ಮುಳ್ಳು ಕಲ್ಲಿನದ್ದು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣನ್ನು ಶತಮಾನಗಳ ಕಾಲ ಶೋಷಿಸಿದ ಈ ಸಮಾಜಕ್ಕೆ ತನ್ನ ವೀರ ವಿರಕ್ತಿಯಿಂದ ಆಧ್ಯಾತ್ಮಿಕತೆಯನ್ನು ಸಾಧಿಸಿ ಉತ್ತರ ನೀಡಿದ್ದಾಳೆ. ಹೆಣ್ಣಿಗೆ ಅವಕಾಶ ಸಿಕ್ಕರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಅಕ್ಕಮಹಾದೇವಿ ನಿದರ್ಶನ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು. ಕಲ್ಯಾಣರಾವ ರಾಮಬಾಣ, ಚಂದ್ರಪ್ಪ ಗುಂಗೆ ಮಾತನಾಡಿದರು. ಜಗನ್ನಾಥ ಪತಂಗೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಸಂಜೀವ ಗಾಯಕವಾಡ, ಭೋಜಪ್ಪ, ಯಶವಂತ, ಮಹಾದೇವ ಮೇತ್ರೆ, ಗಿರಿಜಾ ಸಿದ್ದಣ್ಣ, ಶ್ರೀದೇವಿ ಉಜಳಂಬೆ, ಸುಮಿತ್ರಾದೇವಿ, ರೇಣುಕಾ ಮಾಮನೆ, ಸುರೇಖಾ, ಮಹಾದೇವಿ ಬಾಪುರ, ಮಲ್ಲಮ್ಮ, ಸಿದ್ಧಮ್ಮ ಉಪಸ್ಥಿತರಿದ್ದರು. ನಾಗೇಶ ಸ್ವಾಗತಿಸಿದರು. ಪಂಡಿತ ಬಾಳೂರೆ ವಂದಿಸಿದರು. ಸಂಗಮೇಶ ನಿರೂಪಣೆ ಮಾಡಿದರು. ವಿಜಯಲಕ್ಷಿ$್ಮ ಕೆಂಗನಾಳ ವಚನ ಸಂಗೀತ ನಡೆಸಿಕೊಟ್ಟರು.
ಆಳಂದ ತಾಲೂಕಿನ ಕಣಮಸ್ ಗ್ರಾಮದ ಧರ್ಮಣ್ಣ ಪೂಜಾರಿ ಅವರಿಗೆ ಸಮತಾ ರತ್ನ ಪ್ರಶಸ್ತಿ ನೀಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆಯಾದ ಮಕ್ಕಳನ್ನು ಸತ್ಕರಿಸಲಾಯಿತು. ನೂರಾರು ವಿದ್ಯಾರ್ಥಿಗಳು ಸಾಮೂಹಿಕ ವಚನ ಪಠಣ ಮಾಡಿ ಗಮನಸೆಳೆದರು. ದಾನಮ್ಮ ಬಳಗದಿಂದ ತೊಟ್ಟಿಲೋತ್ಸವ ನೆರವೇರಿತು.