ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಸುರೇಶ ದೇಸಾಯಿ, ಅಶೋಕ ಆಲೂರ, ಗಂಗಾಧರ ಸಂಬಣ್ಣಿ, ಶಶಿಕಾಂತ ಪಟ್ಟಣ ಮತ್ತಿತರರಿದ್ದರು.
- ಕುಲಪತಿ ಡಾ. ಅಶೋಕ ಆಲೂರ ಹೇಳಿಕೆ
- ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ
ವಿಜಯಪುರ: ಬಹುದೇವೋಪಾಸನೆಯಿಂದ ಏಕದೇವೋಪಾಸನೆಯೆಡೆಗೆ, ಮಂದಿರದಿಂದ ಅನುಭವ ಮಂಟಪದೆಡೆಗೆ, ಜಾತಿಯಿಂದ ನೀತಿಯೆಡೆಗೆ, ಕರ್ಮ ಸಿದ್ಧಾಂತದಿಂದ ಕಾಯಕ ಸಿದ್ಧಾಂತದೆಡೆಗೆ, ಮೂಢನಂಬಿಕೆಯಿಂದ ವೈಚಾರಿಕತೆಯೆಡೆಗೆ ಹಾಗೂ ಲಿಂಗ ಭೇದವಿಲ್ಲದ ಸಮ ಸಮಾಜದೆಡೆಗೆ ಕರೆದೊಯ್ದು ಮತ್ತು ಅಂತಹ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಆಲೂರ ಹೇಳಿದರು.
ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಅವರು ಮಾತನಾಡಿದರು.
ಅಹಿಂಸೆಯ ಪರಾಕಾಷ್ಠೆ ಬೋಧಿಸಿದ ಬಸವ ಧರ್ಮ ಇದು ಜಗದ ಧರ್ಮ. ಅರಿವು, ಆಚಾರ ಮತ್ತು ಅನುಭಾವ ಇವು ಅದರ ಉತ್ತುಂಗದ ತತ್ವಗಳು. ಅನುಭವ ಮಂಟಪದಲ್ಲಿ ವಿಶ್ವದಲ್ಲೇ ಮೊದಲು ಪ್ರಜಾಪ್ರಭುತ್ವದ ಚಿಂತನೆಗಳು ನೀಡಿದ ಪ್ರಥಮ ಹರಿಕಾರ ಬಸವಣ್ಣನವರು ಎಂದು ಅವರು ಬಣ್ಣಿಸಿದರು.
ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ ಕಾರ್ಯಕ್ರಮ ಉದ್ಘಾಟಿಸಿ, ಲಿಂಗಾಯತರು ಉಪ ಪಂಗಡಗಳ ಸಂಕುಚಿತ ಭಾವ ತೊರೆದು ಬಸವ ಧರ್ಮ ಪಾಲಿಸಬೇಕು ಎಂದು ಕರೆ ನೀಡಿದರು. ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಮಾತನಾಡಿ, ಜಗತ್ತಿನಲ್ಲಿ ಪಶು-ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುವ ಹಾಗೂ ವರ್ಗ ಮತ್ತು ವರ್ಣ ಶ್ರೇಷ್ಠತೆಯನ್ನು ತೆಗೆದು ಹಾಕಿದ ಏಕೈಕ ಧರ್ಮ ಬಸವ ಧರ್ಮ. ಜಗತ್ತು ಕಂಡ ಬಹು ದೊಡ್ಡ ದಾರ್ಶನಿಕ ಬಸವಣ್ಣ. ಅವರ ಜನ್ಮಭೂಮಿಯಾದ ವಿಜಯಪುರದಲ್ಲಿ ಸರ್ಕಾರ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಅಧ್ಯಕ್ಷ ಸುರೇಶ ದೇಸಾಯಿ, ಬಳ್ಳಾರಿಯ ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ಶಾರದಮ್ಮ, ಧಾರವಾಡದ ಡಾ. ಮೃತ್ಯುಂಜಯ ಶೆಟ್ಟರ ಮಾತನಾಡಿದರು. ಶಾರದಾ ಪಾಟೀಲ, ಸರಸ್ವತಿ ಪಾಟೀಲ, ವಿಜಯಲಕ್ಷ್ಮೀ ಹಂಗರಗಿ ವೇದಿಕೆಯಲ್ಲಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಡಿನ 21 ಜನ ಸಾಧಕರಿಗೆ ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ, ವಚನ ಗಾನಕೋಗಿಲೆ ಹಾಗೂ ಬಸವ ಸೇವಾ ಪ್ರಶಸ್ತಿ ನೀಡಿ ಶರಣ ಸಾಹಿತ್ಯ ಪರಿಷತ್‌ನ ನಾಗಠಾಣ ಮತ್ತು ಸಿದ್ರಾಮಪ್ಪ ಉಪ್ಪಿನ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಶೋಧನಾ ಕೇಂದ್ರದ ಜಿಲ್ಲಾ ಘಟಕದ ಉಪಾಧ್ಯಕ್ಷ ಗಂಗಾಧರ ಸಾಲಕ್ಕಿ, ಕೋಶಾಧ್ಯಕ್ಷೆ ರತ್ನಾಬಾಯಿ ಬಿರಾದಾರ, ಪುಷ್ಪಾವತಿ ಗೋಟ್ಯಾಳ ಮತ್ತಿತರರಿದ್ದರು.