ಕೇರಳ್ಳಿಯಲ್ಲಿ ಶ್ರೀ ಬಿಸಿಲು ಬಸವೇಶ್ವರ ದೇವರು ನೆಲೆಸಿ, ಭಕ್ತರ ಕಷ್ಟಗಳನ್ನು ದೂರ ಮಾಡುತ್ತಿದ್ದಾರೆ. ಭಕ್ತರಿಗೆ ವಸತಿ ಗೃಹ ಸೇರಿ ಅಗತ್ಯ ಸೌಕರ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಸರ್ಕಾರದ ಸಹಕಾರವೂ ಅಗತ್ಯವಾಗಿದೆ.  
ರಾಜ್ಯ

ಭಕ್ತರನ್ನು ಉದ್ಧರಿಸುತ್ತಿರುವ ಬಿಸಿಲು ಬಸವಣ್ಣ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಕೇರಳ್ಳಿಯಲ್ಲಿ ನೆಲೆನಿಂತಿರು ಬಸವ ಹಾಗೂ ನೀಲಮ್ಮ ತಾಯಿ
  • ನಾಳೆ ಪ್ರಭಾವಳಿ ಮೆರವಣಿಗೆ
ಚಿಂಚೋಳಿ: ಕೆರೋಳ್ಳಿ ಗ್ರಾಮದಲ್ಲಿ ನೆಲೆನಿಂತಿರುವ ಬಿಸಿಲು ಬಸವೇಶ್ವರ ದೇವರು ಭಕ್ತರ ಕಷ್ಟಗಳನ್ನು ದೂರ ಮಾಡುವ ಮೂಲಕ ಬೇಡಿದ್ದನ್ನು ಕರುಣಿಸುವ ಕಾಮಧೇನುವಾಗಿದ್ದಾರೆ.
ತಾಲೂಕು ಕೇಂದ್ರದಿಂದ 24 ಕಿಮೀ. ದೂರದಲ್ಲಿರುವ ಕೇರಳ್ಳಿಯೂ ಬಿಸಿಲು ಬಸವೇಶ್ವರ ದೇವಸ್ಥಾನದ ಮೂಲಕ ಧಾರ್ಮಿಕವಾಗಿ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ. ಕ್ಷೇತ್ರದ ಮಹಿಮೆ ಪುರಾಣಗಳಲ್ಲೂ ಉಲ್ಲೇಖವಾಗಿದೆ. ಶ್ರೀ ಬಿಸಿಲು ಬಸವೇಶ್ವರ ದೇವರು ಅಪಾರ ಶಕ್ತಿವಂತನಾಗಿದ್ದು, ಈ ಹಿಂದೆ ಅನಾದಿ ಕಾಲದಲ್ಲಿ ದೊರೆಗಳ ಕನಸಲ್ಲಿ ಬಸವಣ್ಣ ಬಂದು ಒಂದೇ ದಿನದಲ್ಲಿ ದೇವಾಲಯ ನಿರ್ಮಾಣವಾಗಬೇಕು. ಅಲ್ಲಿ ನನ್ನನ್ನು ಪ್ರತಿಷ್ಠಾಪಿಸಬೇಕು ಎಂದಿದ್ದರು. ಆಗ ದೊರೆಗಳ ಜತೆಗೆ ನೂರಾರು ಭಕ್ತರು ಸೇರಿಕೊಂಡು ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಒಂದೇ ದಿನದಲ್ಲಿ ಸಂಪೂರ್ಣ ದೇಗುಲ ನಿರ್ಮಾಣವಾಗಲಿಲ್ಲ. ಹೀಗಾಗಿ ಮೇಲ್ಚಾವಣಿ ಇಲ್ಲದೆ ಬಸವಣ್ಣ ಹಾಗೂ ನೀಲಮ್ಮ ತಾಯಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಅಂದಿನಿಂದ ಇಲ್ಲಿನ ದೇವರಿಗೆ ಬಿಸಿಲು ಬಸವಣ್ಣ ಎಂಬ ಹೆಸರು ಬಂದಿದೆ.
ಸ್ಥಳ ಪುರಾಣಗಳ ಪ್ರಕಾರ ಒಮ್ಮೆ ಕಳ್ಳರು ನೀಲಮ್ಮ ತಾಯಿಯ ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದರು. ಈ ವೇಳೆ ಬಸವಣ್ಣ ಮುಖ ತಿರುವಿ ನೋಡಿದ್ದರಿಂದ ಕಳ್ಳರು ದೇವಿ ಮೂರ್ತಿಯನ್ನು ಬಿಟ್ಟು ಸ್ಥಳದಲ್ಲೇ ಭಸ್ಮವಾಗಿದ್ದರು. ಇಂದಿಗೂ ಕಳ್ಳರ ಪಾದದ ಗುರುತುಗಳಿದ್ದು, ಅಂದಿನಿಂದ ಆ ಸ್ಥಳದಲ್ಲೇ ಭಕ್ತರು ಅಗ್ಗಿ ತುಳಿದು ಹರಕೆ ತೀರಿಸುತ್ತಿದ್ದಾರೆ. ಇದೀಗ ದೇವಾಲಯ ಜಿಣೋರ್ದ್ಧಾರವಾಗಿದ್ದು, ಕಳ್ಳರ ಪಾದದ ಗುರುತು ಮರೆಯಾಗಿವೆ.
ಜಾತ್ರೋತ್ಸವ ಸಂಭ್ರಮ
ಕೇರಳ್ಳಿಯಲ್ಲಿ ಶ್ರೀ ಬಿಸಿಲು ಬಸವಣ್ಣ ಜಾತ್ರೋತ್ಸವ ಈಗಾಗಲೇ ಶುರುವಾಗಿದೆ. ಏ.10ರಿಂದ ನಿತ್ಯ ಸಂಜೆ 5ಕ್ಕೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮಹೋತ್ಸವ ನಡೆಯುತ್ತಿದೆ. ಸೋಮವಾರ ಬೆಳಗ್ಗೆ ವಿಶೇಷ ಅಭಿಷೇಕ, ಅಲಂಕಾರ, ಅರ್ಚನೆ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಬೆಳಗ್ಗೆ ದೇವಾಲಯದಿಂದ ಥೇರ ಮೈದಾನದವರೆಗೆ ಪ್ರಭಾವಳಿ ಮೆರವಣಿಗೆ ನಡೆಯಲಿದೆ. ಬಳಿಕ ಅಗ್ಗಿ ಪ್ರವೇಶ ನಡೆಯಲಿದೆ. ಸಂಜೆ 6ಕ್ಕೆ ಅಪಾರ ಭಕ್ತರ ಜೈೂಷ ಮಧ್ಯೆ ಮಹಾರಥೋತ್ಸವ ನಡೆಯಲಿದೆ. ಏ.21ರಂದು ಬೆಳಗ್ಗೆ 8ಕ್ಕೆ ಕುಸ್ತಿ ಪಂದ್ಯ ನಡೆಯಲಿವೆ.