ಕಲಬುರಗಿ ಸಿಯುಕೆನಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​, ಪ್ರೊ.ಬಸವರಾಜ ಡೋಣೂರ್​, ಡಾ.ಪಾಂಡುರಂಗ, ಡಾ.ಗಣಪತಿ ಸಿನ್ನೂರ್​, ಪ್ರೊ.ಭರತ್​ಕುಮಾರ್​, ಡಾ.ಪ್ರಕಾಶ ಬಾಳಿಕಾಯಿ ಇತರರಿದ್ದರು. 
ರಾಜ್ಯ

ಬಸವಣ್ಣನವರು ಎಂದೆಂದಿಗೂ ಪ್ರಸ್ತುತ

ಪ್ರಮುಖ ಮುಖ್ಯಾಂಶಗಳು

  • ಇಂಗ್ಲಿಷ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಡೋಣುರ್​ ಹೇಳಿಕೆ
  • ಸಿಯುಕೆನಲ್ಲಿ ಬಸವೇಶ್ವರರ ಜಯಂತ್ಯುತ್ಸವ
ಕಲಬುರಗಿ: ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸೇರಿ ಅನೇಕ ಸಂಗತಿಗಳನ್ನು ವಚನಗಳ ಮೂಲಕ ಸಾರಿದ್ದಾರೆ. ಸುಮಾರು 1400ರಲ್ಲಿ 200ಕ್ಕೂ ಹೆಚ್ಚು ವಚನಗಳು ಕೇವಲ ಭಕ್ತಿ ಭಂಡಾರಿ ಕೂಡಲ ಸಂಗಮದೇವರ ಕುರಿತು ವರ್ಣಿಸಿದ್ದಾರೆ. ಬಸವಣ್ಣನವರು ತಮ್ಮನ್ನು ತಾವೇ ಮಾನಸಿಕ, ದೈಹಿಕ, ಅಧ್ಯಾತ್ಮಿಕವಾಗಿ ಈ ಕೂಡಲಸಂಗಮ ದೇವರು ಒಲಿಯುವವನೇ ಎಂಬ ಪ್ರಶ್ನೆ ಹುಡುಕಿಕೊಂಡು ಜೀವನದುದ್ದಕ್ಕೂ ಹೋಗಿರುವುದು ಇತಿಹಾಸ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲಿಷ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಡೋಣೂರ್​ ಹೇಳಿದರು.
ಕರ್ನಾಟಕ ಕೇಂದ್ರೀಯ ವಿವಿಯ ಆಡಳಿತ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಸವೇಶ್ವರರ 893ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಜೀವನವು ಅರ್ಥಪೂರ್ಣವಾಗುವುದು ಕೂಡಲಸಂಗಮದೇವನು ಒಲಿದಾಗ, ನೆಲೆಸಿದಾಗ ಮಾತ್ರ ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ಉಲ್ಲೆಖಿಸಿದರು.
ಅಂತರಂಗ-ಬಹಿರಂಗ ಶುದ್ಧಿ
ಇಂದಿನ ಜೀವನದಲ್ಲಿ ನಾವು ಬಯಸಿದ್ದು ಆಗಬಹುದು, ಆದರೆ ಭಕ್ತನಾಗುವುದು ಅಷ್ಟು ಸುಲಭದ ಮಾತಲ್ಲ, ಇದು ತುಂಬಾ ಕಷ್ಟದ ಕೆಲಸ. ಬಸವಣ್ಣನವರು ಕೂಡಲಸಂಗಮದೇವರನ್ನು ಒಲಿಸಿಕೊಳ್ಳಲು ತುಂಬಾ ಶ್ರಮಪಟ್ಟರು. ಬಸವಣ್ಣನವರ ಆದರ್ಶ, ಚಿಂತನೆ, ಸಿದ್ಧಾಂತ ಪಾಲಿಸಬೇಕಾದರೆ ನಾವು ಮೊದಲು ನಮ್ಮ ಅಂತರಂಗ &ಬಹಿರಂಗ ಶುದ್ದಿ ಮಾಡಿಕೊಂಡಾಗ ಮಾತ್ರ ಜೀವನ ಅರ್ಥ ಪೂರ್ಣವಾಗುತ್ತದೆ. ನಮ್ಮ ಜೀವನದಲ್ಲಿ ಪ್ರತಿದಿನ ಬಸವಣ್ಣನವರ ವಚನ ಓದಬೇಕು, ಅರ್ಥಮಾಡಿಕೊಂಡು ನಡೆದಾಗ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ಹೇಳಿದರು.
ವಿವಿ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ ಮಾತನಾಡಿ, ಇಡೀ ವಿಶ್ವಕ್ಕೆ ಬಸವಣ್ಣನವರ ಕೊಡುಗೆ ಅಪಾರ. ನಮ್ಮ ದೇಶಕ್ಕೆ, ಇಡೀ ವಿಶ್ವಕ್ಕೆ ವಿಶ್ವಗುರು ಬಸವಣ್ಣ, ಡಾ.ಬಿ.ಆರ್​.ಅಂಬೇಡ್ಕರ್​, ಮಹಾತ್ಮಾ ಗಾಂಧೀಜಿ ಅವರ ಆದರ್ಶ, ಸಿದ್ದಾಂತ ಸದಾ ಪ್ರಸ್ತುತ. ವಿಕಸಿತ ಭಾರತ &2047ಕನಸು ನನಸು ಮಾಡಲು ಈ ಮೂರು ಮಹಾನ್​ ವ್ಯಕ್ತಿಗಳ ಕೊಡುಗೆ ತುಂಬಾ ಸಹಕಾರಿ ಎಂದು ಬಣ್ಣಿಸಿದರು.
ಬಸವಣ್ಣ ಸಮಾಜ ಸುಧಾರಕ
ಬಸವಣ್ಣನವರು 12ನೇ ಶತಮಾನದಲ್ಲಿಯೇ ಏಳು ಪ್ರಮುಖ ಅಂಶಗಳ ಬಗ್ಗೆ ಮಹಾನ್​ ಕಾರ್ಯ ಮಾಡಿ ಅದರಲ್ಲಿ ಸುಧಾರಾಣೆ ತಂದಿದ್ದು ಇತಿಹಾಸ ಹಾಗೂ ಸದಾ ಅಮರ. ಕಾಯಕವೇ ಕೈಲಾಸ, ಸಮಾನತೆ&ಸಮಾಜ ಸುಧಾರಣೆ, ಜಾತಿ ವ್ಯವಸ್ಥೆ ನಿಮೂರ್ಲನೆ , ಲಿಂಗ ತಾರತಮ್ಯ ನಿಮೂರ್ಲನೆ, ಅನ್ನ ದಾಸೋಹ, ಅನುಭವ ಮಂಟಪ ಸ್ಥಾಪನೆ, ಮಹಿಳಾ ಸಬಲೀಕರಣ, ವಚನ ಸಾಹಿತ್ಯ ಹೀಗೆ ಅನೇಕ ವಿಷಯಗಳ ಬಗ್ಗೆ 12ನೇ ಶತಮಾನದಲ್ಲೆ ಮಾಡಿ ಸಮಾಜ ಸುಧಾರಣೆ ಮಾಡಿದ್ದು ನಮೆಗೆಲ್ಲರಿಗೂ ಮಾದರಿ ಎಂದರು.
ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಬಸವಣ್ಣನವರು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರಲಿಲ್ಲ, ಇಡೀ ವಿಶ್ವಕ್ಕೆ ಗುರು, ಬಸವಣ್ಣ ಒಬ್ಬ ದೊಡ್ಡ ಮಹಾನ್​ ಸಮಾಜ ಸುಧಾರಕ, ಸಮಾನತೆ, ಜಾತಿ ತಾರತಮ್ಯ ಹೊಗಲಾಡಿಸಲು ತುಂಬಾ ಶ್ರಮವಹಿಸಿದ್ದರು. ಅವರ ಬಗ್ಗೆ ಹೇಳುವುದು ಸುಲಭ, ಆದರೆ ಅವರ ಆದರ್ಶ ಪಾಲಿಸುವುದು ತುಂಬಾ ಕಷ್ಟ, ಆದ್ದರಿಂದ ಪ್ರತಿದಿನ ಬಸವಣ್ಣನವರ ವಚನಗಳನ್ನು ಓದೋಣ, ತಿಳಿದುಕೊಳ್ಳೋಣ, ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಹೇಳಿದರು.
ವಿವಿ ಬಸವಪೀಠದ ಸಂಯೋಜಕ ಪ್ರೊ.ಗಣಪತಿ ಸಿನ್ನೂರು ಮಾತನಾಡಿ, ನಮ್ಮ ಸಿಯುಕೆ ಹಾಗೂ ಬೆಂಗಳೂರಿನ ಬಸವ ಸಮಿತಿಯು ಎಂಒಯು ಮಾಡಿಕೊಂಡು ಬಸವಣ್ಣನವರ ಸುಮಾರು 2500ಕ್ಕೂ ಹೆಚ್ಚು ವಚನಗಳನ್ನು ಇತರೆ ಭಾಷೆಯಲ್ಲಿ ಉಚಿತ ತುರ್ಜುಮೆ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಬಸವಣ್ಣನವರ ಭಾವಚಿತ್ರಕ್ಕೆ ಗಣ್ಯರು ಪುಷ್ಪರ್ಚನೆ ಮಾಡಿದರು. ಡಾ.ಪ್ರಕಾಶ ಬಾಳಿಕಾಯಿ ನಿರೂಪಿಸಿದರು. ಪ್ರೊ.ಪಾಂಡುರಂಗ ವಂದಿಸಿದರು. ಸಂಗೀತ ವಿಭಾಗದ ಕಲಾವಿದರು ರಾಷ್ಟ್ರಗೀತೆ ಹಾಡಿದರು. ಪರೀಾ ನಿಯಂತ್ರಕ ಪ್ರೊ.ಭರತ್​ಕುಮಾರ್​, ಪ್ರೊ.ಕಟ್ಟಿಮನಿ, ಪ್ರೊ.ಅಂಗಡಿ, ಪ್ರೊ.ದೇವರಾಜಪ್ಪ ಇತರರಿದ್ದರು.

ಇಡೀ ವಿಶ್ವಕ್ಕೆ ಬಸವಣ್ಣನವರ ಕೊಡುಗೆ ಅಪಾರ. ನಮ್ಮ ದೇಶಕ್ಕೆ, ಇಡೀ ವಿಶ್ವಕ್ಕೆ ವಿಶ್ವಗುರು ಬಸವಣ್ಣ, ಡಾ.ಬಿ.ಆರ್​.ಅಂಬೇಡ್ಕರ್​, ಮಹಾತ್ಮಾ ಗಾಂಧೀಜಿ ಅವರ ಆದರ್ಶ, ತತ್ವ, ಸಿದ್ದಾಂತ ಸದಾ ಪ್ರಸ್ತುತ. ವಿಕಸಿತ ಭಾರತ -2047ಕನಸು ನನಸು ಮಾಡಲು ಈ ಮೂರು ಮಹಾನ್​ ವ್ಯಕ್ತಿಗಳ ಕೊಡುಗೆ ತುಂಬಾ ಸಹಕಾರಿ.