ಸಚಿವ ಈಶ್ವರ ಖಂಡ್ರೆ 
ರಾಜ್ಯ

ರಾಜಧಾನಿಯಲ್ಲಿ ತಲೆ ಎತ್ತಲಿದೆ ಬಸವಣ್ಣ ಬೃಹತ್ ಜೈವಿಕ ಉದ್ಯಾನವನ: ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಬೆಂಗಳೂರು: ಜಾಗತಿಕ ತಾಪಮಾನ ಹೆಚ್ಚಳ ಮತ್ತು ಹವಾಮಾನ ಬದಲಾವಣೆ ಪರಿಣಾಮ ತಗ್ಗಿಸಲು ಕ್ರಿಯಾ ಯೋಜನೆಯನ್ನು ಅನುಷ್ಠಾನಕ್ಕೆ ತರುವುದಾಗಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
‘ಬೆಂಗಳೂರಿನಲ್ಲಿ ತಾಪಮಾನ ವೈಪರೀತ್ಯ ಮತ್ತು ಅದರ ಪರಿಣಾಮ’ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ, ಮಂಗಳವಾರ ನಗರದ ಹೋಟೆಲ್‌ನಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಹವಾಮಾನ ವೈಪರೀತ್ಯದಿಂದ ಋತುಮಾನಗಳೇ ಬದಲಾಗುತ್ತಿವೆ. ಇದನ್ನು ಮನಗಂಡು ರಾಜ್ಯದೆಲ್ಲೆಡೆ, ಅದರಲ್ಲೂ ಬೆಂಗಳೂರು ನಗರದಲ್ಲಿ ಹಸಿರುಹೊದಿಕೆ ಹೆಚ್ಚಿಸಲು ಶ್ರಮಿಸುತ್ತಿದ್ದೇವೆ. ಕಳೆದ 3 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಅಂದಾಜು 11 ಕೋಟಿ ಸಸಿ ನೆಡಲಾಗಿದೆ. ಈ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಮಾಹಿತಿಯನ್ನು ನಮ್ಮ ಇಲಾಖೆಯ ವೆಬ್​​​ಸೈಟ್‌ನಲ್ಲಿ ಹಾಕಲಾಗುವುದು ಎಂದರು.
ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನಿರ್ದೇಶಕ ಎಂ.ಎಸ್. ದಿವಾಕರ್, ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಅಸರ್ ಸೋಷಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಸಂಸ್ಥೆಯ ಬ್ರಿಕೇಶ್ ಸಿಂಗ್ ಮತ್ತಿತರರಿದ್ದರು.
ಬಸವಣ್ಣ ಜೈವಿಕ ಉದ್ಯಾನವನ:
ಕೊತ್ತನೂರು, ಕಾಡುಗುಡಿ, ಬಿ.ಎಂ. ಕಾವಲ್ ಮತ್ತು ತುರಹಳ್ಳಿ ಸೇರಿ ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ 250 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ಆ ಜಾಗದಲ್ಲಿ ನೆಡುತೋಪು ನಿರ್ಮಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ‘ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನವನ’ ತಲೆ ಎತ್ತಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಅರಣ್ಯ ಜಮೀನು ಮರುವಶ?
ಈ ಹಿಂದೆ ಕೈಗಾರಿಕೆಯ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿಗೆ ಅಂದಾಜು 400 ಎಕರೆಗೂ ಅಧಿಕ ಅರಣ್ಯ ಜಮೀನು ನೀಡಲಾಗಿತ್ತು. ಆದರೆ, 160 ಎಕರೆ ಜಮೀನನ್ನು ಆ ಸಂಸ್ಥೆ ಮಾರಾಟ ಮಾಡಿಕೊಂಡಿದೆ. ಉಳಿದ 280 ಎಕರೆ ಜಮೀನನ್ನು ಮರಳಿ ಇಲಾಖೆಗೆ ಪಡೆಯಲಾಗುವುದು. ಇದಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದೆ. ಜಾರಕ್‌ಬಂಡೆ ಪ್ರದೇಶದಲ್ಲಿ ಭಾರತೀಯ ವಾಯುಪಡೆಗೆ 444 ಎಕರೆ ಜಮೀನು ನೀಡಲಾಗಿತ್ತು. 1980ರ ಕಾಯ್ದೆ ಅನ್ವಯ ಯಾರಿಗೂ ಅರಣ್ಯ ಜಮೀನು ನೀಡಲು ಅವಕಾಶವಿಲ್ಲ. ಹೀಗಾಗಿ, 2017ರಲ್ಲಿ ಅಂದಿನ ಜಿಲ್ಲಾಧಿಕಾರಿ ಭೂ ಮಂಜೂರಾತಿಯನ್ನು ರದ್ದು ಮಾಡಿದ್ದು, ಅದನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ನಡೆಯುವ ಯಲಹಂಕ ವಾಯುನೆಲೆ ಅರಣ್ಯ ಭೂಮಿಯಾಗಿದೆ. ಈ ಗ್ರಾಮದ 159 ಎಕರೆ ಪ್ರದೇಶವು ಸರ್ಕಾರಿ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ. ಭಾರತೀಯ ವಾಯುಪಡೆ ಈ ಪ್ರದೇಶವನ್ನು ಪ್ರಸ್ತುತ ರನ್‌ವೇ ಅಗಿ ಉಪಯೋಗಿಸುತ್ತಿದೆ. ಆದರೆ, ಆರ್‌ಟಿಸಿ ಮತ್ತು ಮ್ಯುಟೇಶನ್ ಅರಣ್ಯ ಇಲಾಖೆಯ ಹೆಸರಿನಲ್ಲಿದೆ. ಈ ಜಮೀನು ಭೂ ಪರಿವರ್ತನೆಯಾಗಿಲ್ಲ. ಹೀಗಾಗಿ, ಆ ಜಮೀನನ್ನು ತೆರವು ಮಾಡಿಸಲಾಗುವುದು.
- ಈಶ್ವರ್ ಖಂಡ್ರೆ, ಅರಣ್ಯ ಸಚಿವ