Kannada and Culture Department  
ರಾಜ್ಯ

ಸಿದ್ಧರಾಮ ಶರಣರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’

ಪ್ರಮುಖ ಮುಖ್ಯಾಂಶಗಳು

  • * ಸಾಹಿತಿ ದೇವನೂರು ಮಹದೇವಗೆ ‘ಪಂಪ ಪ್ರಶಸ್ತಿ’ಗರಿ
  • * 2025-26ನೇ ಸಾಲಿನ ವಿವಿಧ ಪ್ರಶಸ್ತಿ ಪ್ರಕಟಿಸಿದ ಕನ್ನಡ-ಸಂಸ್ಕೃತಿ ಇಲಾಖೆ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2025-26ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಪ್ರತಿಷ್ಠಿತ ‘ಬಸವ ರಾಷ್ಟ್ರೀಯ ಪುರಸ್ಕಾರ’ಕ್ಕೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ಧರಾಮ ಶರಣರು ಬೆಲ್ದಾಳ ಹಾಗೂ ‘ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ’ಗೆ ಮಂಡ್ಯದ ಕಂಬದಹಳ್ಳಿಯ ಜೈನ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾಜನರಾಗಿದ್ದಾರೆ.
ಸಚಿವ ಶಿವರಾಜ ತಂಡಗಡಿ ಬುಧವಾರ ಪ್ರಶಸ್ತಿಗಳ ಪಟ್ಟಿ ಪ್ರಕಟಿಸಿದ್ದು, ರಾಷ್ಟ್ರೀಯ ವಿಭಾಗದ ಈ ಎರಡು ಪ್ರಶಸ್ತಿಗಳು ತಲಾ 10 ಲಕ್ಷ ನಗದು ಪುರಸ್ಕಾರ ಒಳಗೊಂಡಿರುವುದಾಗಿ ತಿಳಿಸಿದ್ದಾರೆ.
ಸಾಹಿತ್ಯ ವಿಭಾಗದಲ್ಲಿ ‘ಪಂಪ ಪ್ರಶಸ್ತಿ’ಗೆ ಹಿರಿಯ ಸಾಹಿತಿ ದೇವನೂರು ಮಹಾದೇವ (ಮೈಸೂರು), ‘ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ಗೆ ಲೇಖಕ ಅಲ್ಲಾಬಕ್ಷ ಮೀರಾಸಾಹೇಬ ಮಿರ್ಜಿ (ವಿಜಯಪುರ), ‘ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ’ಗೆ ಲೇಖಕಿ ಸುಕನ್ಯಾ ಮಾರುತಿ (ಬಳ್ಳಾರಿ) ಹಾಗೂ ‘ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ’ಗೆ ಸಾಹಿತಿ ಗಂಗಾರಾಂ ಚಂಡಾಳ (ಕೋಲಾರ) ಆಯ್ಕೆಯಾಗಿದ್ದಾರೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದಲ್ಲಿ ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ಗೆ ಪ್ರಗತಿಪರ ಚಿಂತಕ ಸಿದ್ಧನಗೌಡ ಪಾಟೀಲ (ಧಾರವಾಡ), ‘ಅಕ್ಕಮಹಾದೇವಿ ಪ್ರಶಸ್ತಿ’ಗೆ ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ (ಕಲಬುರಗಿ), ‘ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಪ್ರಶಸ್ತಿ’ಗೆ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ (ತುಮಕೂರು) ಭಾಜನರಾಗಿದ್ದಾರೆ.
ನಾಟಕ ಮತ್ತು ಕಲಾ ಪ್ರಶಸ್ತಿ ವಿಭಾಗದಲ್ಲಿ ‘ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ’ಗೆ ಕಲಾವಿದೆ ಜಿ.ವಿ.ಶಾರದಾ (ತುಮಕೂರು), ‘ಬಿ.ವಿ. ಕಾರಂತ ಪ್ರಶಸ್ತಿ’ಗೆ ರಂಗಕರ್ಮಿ ಪ್ರಸನ್ನ (ಶಿವಮೊಗ್ಗ), ಕಲಾ ಪ್ರಶಸ್ತಿ ವಿಭಾಗದಲ್ಲಿ ‘ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ’ಗೆ ಕಲಾವಿದ ವಿ.ಹರಿರಾಮ್ (ಬೆಂಗಳೂರು), ‘ಜಕಣಾಚಾರಿ ಪ್ರಶಸ್ತಿ’ಗೆ ಅಶೋಕ್ ಗುಡಿಗಾರ್ (ಶಿವಮೊಗ್ಗ), ‘ಜಾನಪದ ಶ್ರೀ ಪ್ರಶಸ್ತಿ’ಗೆ ಕಲಾವಿದರಾದ ಎಂ.ಮಹದೇವಸ್ವಾಮಿ (ಮಂಡ್ಯ) ಹಾಗೂ ಬಿ.ಲಕ್ಷ್ಮಣ (ಯಾದಗಿರಿ) ಆಯ್ಕೆಯಾಗಿದ್ದಾರೆ.
ಸಂಗೀತ ಮತ್ತು ನೃತ್ಯ ಪ್ರಶಸ್ತಿ ವಿಭಾಗದಲ್ಲಿ ‘ಕುಮಾರವ್ಯಾಸ ಪ್ರಶಸ್ತಿ’ಗೆ ಕಲ್ಲಿನಾಥ ಶಾಸ್ತ್ರಿ (ಗದಗ) ಹಾಗೂ ‘ಶಾಂತಲಾ ನಾಟ್ಯರಾಣಿ ಪ್ರಶಸ್ತಿ’ಗೆ ಪ್ರತಿಭಾ ಪ್ರಹ್ಲಾದ್ (ಮೈಸೂರು) ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿವೆ. ಶೀಘ್ರದಲ್ಲಿಯೇ ಸಿಎಂ ಸಿದ್ದರಾಮಯ್ಯ ಅವರ ದಿನಾಂಕ ಪಡೆದು, ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.