ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಮೆರವಣಿಗೆ 
ರಾಜ್ಯ

ಗುಂಡ್ಲುಪೇಟೆಯಲ್ಲಿ ಬಸವ ಜಯಂತಿ ಉತ್ಸವ

ಗುಂಡ್ಲುಪೇಟೆ: ಅಖಿಲ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಮತ್ತು ಯುವ ಘಟಕ, ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಗುಂಡ್ಲುಪೇಟೆ ಬಸವ ಜಯಂತಿ ಉತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ಅಲಂಕೃತ ವಾಹನದ ಮೇಲೆ ಮಂಟಪದ ಮೇಲಿರಿಸಿದ್ದ ಬಸವೇಶ್ವರರ ಕಂಚಿನ ಮೂರ್ತಿಗೆ ಮಹಾಸಭಾದ ಗೌರವಾಧ್ಯಕ್ಷ ಸಿದ್ದಮಲ್ಲ ಸ್ವಾಮೀಜಿ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಸಿಎಸ್.ನಿರಂಜನಕುಮಾರ್, ತಾಲೂಕಿನ ಪಡಗೂರು ಮಠದ ಶಿವಲಿಂಗೇಂದ್ರ ಸ್ವಾಮೀಜಿ, ಹಂಗಳದ ಜಡೇಸ್ವಾಮೀಜಿ, ಮೂಡಗೂರಿನ ಇಮ್ಮಡಿ ಉದ್ದಾ ಸ್ವಾಮೀಜಿ, ಗೋಪಾಲಪುರದ ಗಂಗಾಧರಸ್ವಾಮೀಜಿ, ಹಂಗಳದ ಷಡಕ್ಷರಸ್ವಾಮೀಜಿ, ಇಮ್ಮಡಿ ಮಹಾಂತಸ್ವಾಮೀಜಿ, ನಂಜುಂಡಸ್ವಾಮೀಜಿ, ಮಾದಾಪಟ್ಟಣದ ತೋಂಟದಾರ್ಯಸ್ವಾಮೀಜಿ, ಕಬ್ಬಹಳ್ಳಿಯ ಗುರುಸಿದ್ದಸ್ವಾಮೀಜಿ, ಚನ್ನವೀರಸ್ವಾಮೀಜಿ, ಇಮ್ಮಡಿ ಶಾಂತಮಲ್ಲಸ್ವಾಮೀಜಿ, ಬಸವಣ್ಣ ಸ್ವಾಮೀಜಿ, ಸಿದ್ದೇಶ್ವರಸ್ವಾಮಿ ಮುಂತಾದ ಶ್ರೀಗಳು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ನಾನಾ ಕ್ಷೇತ್ರಗಳ ಸಾಧಕರಿಗೆ ಪುರಸ್ಕಾರ, ಅಂತಾರಾಷ್ಟ್ರೀಯ ಪ್ರಿಸ್ಟಿ ಕ್ರೀಡಾ ಸ್ಪರ್ಧಿ ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು.

ಕಳೆಗಟ್ಟಿದ ಮೆರವಣಿಗೆ:
ಮಡಹಳ್ಳಿ ರಸ್ತೆಯಿಂದ ಮುಖ್ಯ ರಸ್ತೆಗೆ ಆಗಮಿಸಿದ ಮೆರವಣಿಗೆ ಅಶ್ವಾರೂಢ ಬಸವೇಶ್ವರರ ಕಂಚಿನ ಮೂರ್ತಿ ಜತೆಗೆ ನಂದಿಧ್ವಜ, ವೀರಗಾಸೆ, ಡೊಳ್ಳು, ನಗಾರಿ, ಮಂಗಳವಾದ್ಯ, ಕಂಸಾಳೆ ಮೊದಲಾದ ಜನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಹಳ್ಳಿಕಾರ್ ಸೇರಿದಂತೆ ನಾನಾ ತಳಿಯ ಹೋರಿಗಳನ್ನು ಅಲಂಕರಿಸಿ ಮೆರವಣಿಗೆ ಮಾಡಲಾಯಿತು. ಮೆರವಣಿಯೊಂದಿಗೆ ಸಾಗಿದ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಸಾವಿರಾರು ಯುವಕರು ವಾದ್ಯಗಳ ಶಬ್ದಕ್ಕೆ ತಕ್ಕಂತೆ ಕುಣಿದರು.

ಮಳೆಯ ಸಿಂಚನ, ನೀರು ಮಜ್ಜಿಗೆ ವಿತರಣೆ:
ಮೆರವಣಿಗೆ ಸಾಗುತ್ತಿದ್ದಂತೆ ಸಣ್ಣದಾಗಿ ಬಿದ್ದ ಮಳೆಯ ಸಿಂಚನ ಬಿಸಿಲಿನ ತಾಪಕ್ಕೆ ಸ್ವಲ್ಪಮಟ್ಟಿಗೆ ತಂಪೆರೆಯಿತು. ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಅಂಗಡಿ ಬೀದಿಯಲ್ಲಿ ವ್ಯಾಪಾರಿಗಳು ಮಜ್ಜಿಗೆ, ನೀರು ವಿತರಣೆ ಮಾಡಿದರು.
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಂದೋಬಸ್ತ್ ಆಯೋಜಿಸಲಾಗಿತ್ತು. ಮಹಾಸಭಾ ವತಿಯಿಂದ ಪಟ್ಟಣದ ಸೋಮೇಶ್ವರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಸಾವಿರಾರು ಜನರಿಗೆ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಅಖಿಲ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಮತ್ತು ಯುವ ಘಟಕ, ವಿವಿಧ ವೀರಶೈವ ಲಿಂಗಾಯತ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಗುಂಡ್ಲುಪೇಟೆ ಬಸವ ಜಯಂತಿ ಉತ್ಸವ 2026 ಹಿನ್ನೆಲೆಯಲ್ಲಿ ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ಇತರ ಸಂಪರ್ಕ ರಸ್ತೆಗಳಲ್ಲಿ ಬಸವೇಶ್ವರ ಭಾವಚಿತ್ರವುಳ್ಳ ಮಹಾದ್ವಾರ ಮತ್ತು ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ರಸ್ತೆ ವಿಭಜಕಗಳಿಗೆ ಕೇಸರಿ ತೋರಣ ಮತ್ತು ಬಸವೇಶ್ವರ ದೊಡ್ಡ ಕಟೌಟ್‌ಗಳನ್ನು ಕಟ್ಟಲಾಗಿತ್ತು.
ಸಾರಿಗೆ ಬಸ್ ನಿಲ್ದಾಣದ ಎದುರು, ಬಸವೇಶ್ವರ ವೃತ್ತ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಬಸವೇಶ್ವರರು ಮತ್ತು ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ದೀಪಾಲಂಕಾರದ ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಕಂಗೊಳಿಸುವ ಸಾಲು ವಿದ್ಯುತ್ ದೀಪಗಳನ್ನು ಹಾಕಿದ್ದರಿಂದ ಕಳೆದ ಮೂರು ದಿನಗಳಿಂದ ಪಟ್ಟಣದ ರಸ್ತೆಗಳು ಝಗಮಗಿಸುತ್ತಿದ್ದವು. ಇತ್ತ ಚಾ.ನಗರ ಜೋಡಿ ರಸ್ತೆಯಿಂದ ಪ್ರವಾಸಿ ಮಂದಿರದವರೆಗೆ ಹಾಗೂ ಊಟಿ ಸರ್ಕಲ್‌ನಿಂದ ಮೈಸೂರು ರಸ್ತೆಯವರೆಗೆ ಇರುವ ಎಲ್ಲ ವಿದ್ಯುತ್ ಕಂಬಗಳಿಗೂ ಫ್ಲೆಕ್ಸ್ ಅಳವಡಿಸಿದ್ದರಿಂದ ಹಬ್ಬದ ವಾತಾರಣ ನಿರ್ಮಾಣವಾಗಿತ್ತು.

ಹರಿದು ಬಂದ ಜನ ಸಾಗರ:
ಉತ್ಸವದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿತ್ತು. ಮಹಾಸಭಾ ಸದಸ್ಯರು ಪ್ರತಿ ಗ್ರಾಮಗಳ ಮನೆ ಮನೆಗೂ ಕರಪತ್ರಗಳನ್ನು ತಲುಪಿಸಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಅಲ್ಲದೆ ಈ ಬಾರಿ ಪಕ್ಷಾತೀತವಾಗಿ ಜಯಂತಿ ಆಚರಣೆಗೆ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದರು. ತಾಲೂಕಿನ ಎಲ್ಲ ಗ್ರಾಮಗಳಿಂದ ಬಸವ ಭಕ್ತರು ಸಾವಿರ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೀಗಾಗಿ ಪಟ್ಟಣದಲ್ಲಿ ಎತ್ತ ನೋಡಿದರೂ ಜನವೋ ಜನ ಎಂಬಂತೆ ಇತ್ತು.

ಬಾರ್, ವೈನ್ ಸ್ಟೋರ್ ಬಂದ್:
ಆಚರಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಜಿಲ್ಲಾಡಳಿತ ಪಟ್ಟಣದ ಎಲ್ಲ ಬಾರ್ ಹಾಗೂ ವೈನ್ ಸ್ಟೋರ್‌ಗಳನ್ನು ಬಂದ್ ಮಾಡಿಸಿತ್ತು. ಈ ಬಾರಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಂದ ಹೆಚ್ಚಿನ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಗೊಳ್ಳಲಾಗಿತ್ತು.

ಶಾಂತಿಯುತ ಪ್ರಸಾದ ವಿನಿಯೋಗ:
ಜಯಂತಿ ಆಚರಣೆಗೆ ಬಂದಿದ್ದ ಭಕ್ತರಿಗೆ ಸೋಮೇಶ್ವರ ಹಾಸ್ಟೆಲ್‌ನಲ್ಲಿ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ಸಾಲಾಗಿ ಶಾಂತಿಯುತವಾಗಿ ಸಾಗಿದ ಭಕ್ತರು ಸ್ವಸಹಾಯ ಪದ್ಧತಿಯಲ್ಲಿ ಸಮಾಧಾನದಿಂದ ಪ್ರಸಾದ ಸ್ವೀಕರಿಸಿದರು.