ಕನ್ಹೇರಿ ಶ್ರೀಗಳ ಬಸವಕಲ್ಯಾಣ ಪ್ರವೇಶಕ್ಕೆ ಅನುಮತಿಸಬಾರದು ಎಂದು ಆಗ್ರಹಿಸಿ ಬಸವಕಲ್ಯಾಣದಲ್ಲಿ ಭಾನುವಾರ ಬಸವಪರ ಸಂಟನೆಗಳು ಹಾಗೂ ಮಠಾಧೀಶರು ಕರೆದಿದ್ದ ಪ್ರತಿಭಟನಾ ಪೂರ್ವಸಿದ್ಧತಾ ಸಭೆಯಲ್ಲಿ ಬಸವರಾಜ ಧನ್ನೂರ ಮಾತನಾಡಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಡಾ.ಗಂಗಾಂಬಿಕಾ ಅಕ್ಕ ಇತರರಿದ್ದರು. 
ರಾಜ್ಯ

ಬಸವ ಭೂಮಿಗೆ ಕನ್ಹೇರಿ ಶ್ರೀ ಬರಲು ಬಿಡಲ್ಲ

ಪ್ರಮುಖ ಮುಖ್ಯಾಂಶಗಳು

  • ನಾನಾ ಮಠಾಧೀಶರ ಗುಡುಗು
  • ಕಲ್ಯಾಣದಲ್ಲಿ ಪ್ರತಿಭಟನಾ ಪೂರ್ವಸಿದ್ಧತಾ ಸಭೆ
ಬಸವಕಲ್ಯಾಣ: ಕನ್ಹೇರಿ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಬಸವಕಲ್ಯಾಣ ಪ್ರವೇಶ ವಿರೋಧಿಸಿ ಕರ್ನಾಟಕ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವಪರ ಸಂಘಟನೆಗಳು ಹಾಗೂ ನಾನಾ ಮಠಾಧೀಶರ ನೇತೃತ್ವದಲ್ಲಿ ಭಾನುವಾರ ಬೃಹತ್​ ಪ್ರತಿಭಟನಾ ಪೂರ್ವಸಿದ್ಧತಾ ಸಭೆ ನಡೆಯಿತು.
ನಗರದ ಬಸವ ಮಹಾಮನೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಎಂಥದ್ದೇ ಪರಿಸ್ಥಿತಿ ಎದುರಾದರೂ ಕನ್ಹೇರಿ ಶ್ರೀಗಳನ್ನು ಈ ಪವಿತ್ರ ನೆಲದಲ್ಲಿ ಕಾಲಿಡಲು ಬಿಡುವುದಿಲ್ಲ. ಇದಕ್ಕಾಗಿ ಹಂತ ಹಂತವಾಗಿ ಹೋರಾಟ ರೂಪಿಸಲು ಒಮ್ಮತದ ನಿರ್ಣಯ ಕೈಗೊಂಡರು.
ಬಸವಕಲ್ಯಾಣ ಕ್ರಾಂತಿ ಮತ್ತು ಶರಣರ ಪವಿತ್ರ ನೆಲ. ಇಲ್ಲಿನ ವೈಚಾರಿಕತೆ ಮತ್ತು ಶರಣರ ಸಿದ್ಧಾಂತಗಳಿಗೆ ಧಕ್ಕೆ ತರುವಂತಹ ಯಾವುದೇ ಶಕ್ತಿಗಳಿಗೆ ಅವಕಾಶವಿಲ್ಲ. ಕನ್ಹೇರಿ ಶ್ರೀಗಳ ಭೇಟಿ ಈ ಭಾಗದ ಸೌಹಾರ್ದ ಮತ್ತು ಬಸವ ತತ್ವಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ಹೇರಿ ಶ್ರೀಗಳ ಪ್ರವೇಶ ತಡೆಯುವುದರ ಜತೆಗೆ ರಸ್ತೆಗಳ ಗಡಿ ಕಾಯುವುದು. ಒಂದು ವೇಳೆ ಭೇಟಿಗೆ ಮುಂದಾದರೆ ಬಸವಾನುಯಾಯಿಗಳನ್ನು ಒಟ್ಟುಗೂಡಿಸಿ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗುಡುಗಿದರು.
ಅನುಭವ ಮಂಟಪ ಟ್ರಸ್ಟ್​ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರುಬಸವ ಪಟ್ಟದ್ದೇವರು, ಡಾ.ಗಂಗಾಂಬಿಕಾ ಅಕ್ಕ, ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಶ್ರೀ ಪಂಚಾರಿ ಸ್ವಾಮೀಜಿ, ಶ್ರೀ ರತ್ನಕಾಂತ ಶಿವಯೋಗಿಗಳು, ಶ್ರೀ ಪ್ರಭು ದೇವರು, ಚಿತ್ರಮ್ಮತಾಯಿ, ಶಿವಾನಂದ ಸ್ವಾಮಿ, ಶಿವಕುಮಾರ ಸ್ವಾಮಿ, ಮಹಾರಾಷ್ಟದ ಅವಿನಾಶ ಭೋಸೆಕರ್​, ಬಸವರಾಜ ತೊಂಡಾರೆ ಇತರರಿದ್ದರು.
"

ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಅವಮಾನಿಸಿದ ಕನ್ಹೇರಿ ಶ್ರೀಗಳ ಬಸವಕಲ್ಯಾಣ ಪ್ರವೇಶ ವಿರೋಧಿಸಿ ಪ್ರತಿಭಟನೆಯ ಪೂರ್ವಸಿದ್ಧತಾ ಸಭೆ ನಡೆಸಿದ್ದು, ರಾಜ್ಯ ಮತ್ತು ರಾಷ್ಟದ ಬಸವಭಕ್ತರ ಹೋರಾಟ ಇದಾಗಿದೆ. ಜೂ.28ರಂದು ಬಸವಕಲ್ಯಾಣ ಪ್ರವೇಶಿಸುವ ಗಡಿಯನ್ನು ಕಣ್ಣಲ್ಲಿ ಕಣ್ಣಿಟ್ಡು ಕಾಯಬೇಕು.>

— ಬಸವರಾಜ ಧನ್ನೂರ ಜಿಲ್ಲಾಧ್ಯಕ್ಷ, ಜಾಗತಿಕ ಲಿಂಗಾಯತ ಮಹಾಸಭಾ ಬೀದರ್​