Kannada and culture minister Shivaraja tangadagi
- * ಸಚಿವ ಶಿವರಾಜ್ ಎಸ್. ತಂಗಡಗಿ ತಾಕೀತು
- * ಕರ್ನಾಟಕದಲ್ಲಿ ಉದ್ಯೋಗ ನೀಡುವಾಗ ಕನ್ನಡಕ್ಕೆ ಆದ್ಯತೆ ಇರಬೇಕು
ಬೆಂಗಳೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಬ್ಯಾಂಕ್ ಕನ್ನಡಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು. ಅದು ಕನ್ನಡಿಗರ ಭಾಷಾ ಹಕ್ಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದ್ದಾರೆ.
ಸ್ಥಳೀಯ ಭಾಷೆ ಮಾತನಾಡಬಲ್ಲ ಅಧಿಕಾರಿಗಳನ್ನು ನೇಮಿಸಲು ಮುಂದಾಗಿರುವ ಬ್ಯಾಂಕ್ ಆಫ್ ಬರೋಡಾದ ಕ್ರಮ ಸ್ವಾಗತಿಸಿರುವ ಸಚಿವರು, ಇದಕ್ಕಾಗಿ ಹೋರಾಟ ನಡೆಸಿದ್ದ ಕನ್ನಡಪರ ಸಂಘಟನೆಗಳಿಗೆ ಹಾಗೂ ಧ್ವನಿ ಎತ್ತಿದ್ದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಬ್ಯಾಂಕುಗಳು ಕನ್ನಡ ಬಲ್ಲ ಅಭ್ಯರ್ಥಿಗಳ ನೇಮಕಕ್ಕೆ ಮೊದಲ ಆದ್ಯತೆ ನೀಡಬೇಕು. ಈ ಕುರಿತು ಕೇಂದ್ರ ಹಣಕಾಸು ಇಲಾಖೆ ಸೂಕ್ತ ನಿಯಮ ರೂಪಿಸಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.
ಕನ್ನಡಿಗರು ತಮ್ಮದೇ ನೆಲದಲ್ಲಿ ಬ್ಯಾಂಕಿಂಗ್ ಸೇರಿ ಯಾವುದೇ ಸೇವೆ ಪಡೆಯುವಾಗ ಭಾಷೆಯ ಅಡೆತಡೆ ಎದುರಿಸಬಾರದು. ಅದನ್ನು ಖಾತ್ರಿಪಡಿಸುವುದು ಪ್ರತಿಯೊಂದು ಸಂಸ್ಥೆಯ ಕರ್ತವ್ಯ. ಇದು ಕೇವಲ ಉದ್ಯೋಗದ ಪ್ರಶ್ನೆಯಲ್ಲ, ಕನ್ನಡಿಗರ ಭಾಷಾ ಹಕ್ಕು ಮತ್ತು ಆತ್ಮಗೌರವದ ಪ್ರಶ್ನೆ. ಕರ್ನಾಟಕದಲ್ಲಿ ಸೇವೆ ನೀಡುವ ಸಂಸ್ಥೆಗಳಿಗೆ ಕನ್ನಡ ಗೊತ್ತಿರಬೇಕು. ಕರ್ನಾಟಕದಲ್ಲಿ ಉದ್ಯೋಗ ನೀಡುವಾಗ ಕನ್ನಡಕ್ಕೆ ಆದ್ಯತೆ ಇರಬೇಕು ಎಂದು ಆಗ್ರಹಿಸಿದ್ದಾರೆ.