- ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲು
- ಟಿಒಡಿ ಲೋನ್ ಹೆಸರಲ್ಲಿ ವಂಚನೆ
- ಉದ್ಯಮಿ ಖಾತೆಯಿಂದ ಹಣ ವರ್ಗಾವಣೆ
ರಾಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕಿನ ಗ್ರಾಹಕರ ಖಾತೆಗಳಿಂದ ಸೈಬರ್ ವಂಚಕರು ಕೋಟ್ಯಂತರ ರೂ. ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ನಗರದ ಖಾಸಗಿ ಬ್ಯಾಂಕ್‌ವೊಂದರ ವ್ಯವಸ್ಥಾಪಕ ಬರೋಬ್ಬರಿ 18.41 ಕೋಟಿ ರೂ. ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 5 ರಂದು ಬ್ಯಾಂಕ್ ವ್ಯವಸ್ಥಾಪಕ ವಿ. ಕೃಷ್ಣಮೂರ್ತಿ, ಅಪರಿಚಿತರಾದ ಹರೀಶ್, ಸಚಿನ್ ಸೇರಿ ವಿವಿಧ ಸಹಕಾರಿ ಬ್ಯಾಂಕುಗಳ ವ್ಯವಸ್ಥಾಪಕರು ಹಾಗೂ ಇತರೆ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಬ್ಯಾಂಕಿನ ಗ್ರಾಹಕರಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಕೆ ನವೀನ್ ಗಮನಕ್ಕೆ ಬರದಂಗೆ ಹಂತ ಹಂತವಾಗಿ ಕೋಟ್ಯಂತರ ರೂ.ವನ್ನು ಬ್ಯಾಂಕಿನ ವ್ಯವಸ್ಥಾಪಕ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೇಗೆ ವಂಚನೆ?:
ಬ್ಯಾಂಕಿನ ವ್ಯವಸ್ಥಾಪಕರು, ಗ್ರಾಹಕ ನವೀನ್‌ಗೆ ‘ನಿಮ್ಮ ಖಾತೆಗೆ ತಾತ್ಕಾಲಿಕ ಓವರ್‌ಡ್ರಾಫ್ಟ್ೃ (ಟಿಒಡಿ) ಲೋನ್ ಬಿಡುಗಡೆಗೊಳಿಸುತ್ತೇವೆ. ಆದರೆ ನಾವು ಸೂಚಿಸುವ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಬೇಕು’ ಎಂದಿದ್ದರು. ಇದಕ್ಕೆ ಒಪ್ಪಿದಾಗ ಸಾಲ ಬಿಡುಗಡೆಗೊಳಿಸಿದ್ದರು. ಬಳಿಕ ಸಾಲವಾಗಿ ಪಡೆದ ಹಣವನ್ನು ಕೆಲವು ಖಾತೆಗಳಿಗೆ ಗ್ರಾಹಕ ವರ್ಗಾಯಿಸಿರುತ್ತಾರೆ. ಬಳಿಕ ಅನುಮಾನ ಬಂದು ಈ ರೀತಿ ಮಾಡುವುದಿಲ್ಲವೆಂದು ವಿರೋಧ ವ್ಯಕ್ತಪಡಿಸಿದ್ದರು. ಆಗ ಬ್ಯಾಂಕಿನವರು ಖಾತೆ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿ ಗಮನಕ್ಕೂ ಬರದಂತೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ದೂರುದಾರ ರಿಯಲ್ ಎಸ್ಟೆಟ್ ಉದ್ಯಮಿ ತಮ್ಮ ವ್ಯವಹಾರಕ್ಕಾಗಿ 2017-2018ರಲ್ಲಿ ಬನಶಂಕರಿಯಲ್ಲಿರುವ ಬ್ಯಾಂಕ್‌ವೊಂದರಲ್ಲಿ 7 ಪ್ರಮುಖ ಕರೆಂಟ್ ಖಾತೆಗಳನ್ನು ತೆರೆದು ಉತ್ತಮ ವಹಿವಾಟು ಮಾಡಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಬ್ಯಾಂಕ್‌ನ ವ್ಯವಸ್ಥಾಪಕ, ಗ್ರಾಹಕನಿಗೆ ತಾತ್ಕಾಲಿಕ ಓವರ್‌ಡ್ರಾಫ್ಟ್ೃ (ಟಿಒಡಿ) ಲೋನ್ ನೀಡುವ ನಾಟಕವಾಡಿ ಕೋಟ್ಯಂತರ ರೂ. ವಂಚಿಸಿದ್ದಾರೆಂದು ದೂರಿನಲ್ಲಿದೆ ಹೇಳಲಾಗಿದೆ.
ಖಾತೆಯಿಂದ ಅಕ್ರಮ ಹಣ ವರ್ಗಾವಣೆ
ದೂರುದಾರ ನವೀನ್‌ಗೆ ಸಂಬಂಧಿಸಿದ ಒಟ್ಟು 7 ಬ್ಯಾಂಕ್ ಕರೆಂಟ್ ಖಾತೆಗಳಿಗೆ ವಿವಿಧ ದಿನಾಂಕಗಳಂದು ಒಟ್ಟು 7.69 ಕೋಟಿ ರೂ.ಗಳನ್ನು ಲೋನ್ ಹಣವಾಗಿ ವರ್ಗಾವಣೆ ಮಾಡಿದ್ದಾರೆ. ಬಳಿಕ ಅವರ ಖಾತೆಯಿಂದ ಒಟ್ಟು 12.67 ಕೋಟಿ ರೂ. ಹಣವನ್ನು ಅಪರಿಚಿತ ವ್ಯಕ್ತಿಗಳಾದ ಹರೀಶ್, ಸಚಿನ್ ಹಾಗೂ ವಿವಿಧ ಸೌಹಾರ್ದ ಬ್ಯಾಂಕ್‌ಗಳು ಸೇರಿ ಇತರೆ ಸಂಸ್ಥೆಗಳ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ನವೀನ್ ಆರೋಪಿಸಿದ್ದಾರೆ.
ಲೋನ್ ಹಣವನ್ನೂ ಕಸಿದುಕೊಂಡು
ಗ್ರಾಹಕನ ಆಸ್ತಿಯನ್ನೇ ಅಡವಿಟ್ಟರು..!
ಟಿಒಡಿ ಸಾಲದ ಖಾತೆಗಳನ್ನು ಮುಕ್ತಾಯಗೊಳಿಸುವ ನೆಪದಲ್ಲಿ ಉದ್ಯಮಿಗೆ ಬೆದರಿಕೆ ಹಾಕಿ, ಅವರ ಸ್ಥಿರಾಸ್ತಿಗಳನ್ನು ಅಡಮಾನ ಮಾಡಿಸಿ, ಆ ಮೂಲಕವೂ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಸ್ಥಿರಾಸ್ತಿಗಳ ಅಡಮಾನದ ಮೇಲೆ ರಿಕವರಿ ಪ್ರೊಸಿಡಿಂಗ್‌ಗಳನ್ನು ಚಾಲ್ತಿಗೊಳಿಸುವ ಜತೆಗೆ ಸಾಲದ ಮೇಲೆ 4 ಕೋಟಿ ರೂ. ಬಡ್ಡಿಯನ್ನೂ ಪಾವತಿಸಿಕೊಂಡು ಕೋಟ್ಯಂತರ ರೂ. ಆರ್ಥಿಕ ನಷ್ಟ ಮಾಡಿದ್ದಾರೆ ಎಂದು ಎ್ಐಆರ್‌ನಲ್ಲಿ ತಿಳಿಸಲಾಗಿದೆ.