ಬೆಂಗಳೂರು ಟ್ರಾಫಿಕ್​ ದೃಶ್ಯ  
ರಾಜ್ಯ

ಸಂಚಾರ ಸಿಕ್ಕಿನಲ್ಲಿ ಬೆಂಗಳೂರು ನಂ.1: 10 ಕಿ.ಮೀ. ಕ್ರಮಿಸಲು ಬೇಕು 36.9 ನಿಮಿಷ

| ರವಿ ನಾಯಕ್, ಬೆಂಗಳೂರು

ಐಟಿ ಸಿಟಿ ಖ್ಯಾತಿಯ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವೂ ಹೌದು! ಟಾಮ್ಸ್​​ ಟ್ರಾಫಿಕ್ ಇಂಡೆಕ್ಸ್ 2025ರ ವರದಿ ಪ್ರಕಾರ, ನಗರದಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ ಸರಾಸರಿ 36 ನಿಮಿಷ 9 ಸೆಕೆಂಡ್ ಬೇಕಾಗುತ್ತಿದೆ. ಭಾರತದಲ್ಲೇ ಅತಿ ನಿಧಾನಗತಿಯಲ್ಲಿ ವಾಹನಗಳು ಸಂಚರಿಸುವ ನಗರ ಎಂಬ ದಾಖಲೆಯನ್ನೂ ರಾಜಧಾನಿ ನಿರ್ವಿುಸಿದೆ.

ನಗರದಲ್ಲಿ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು, ರಸ್ತೆ ಮೂಲಸೌಕರ್ಯದ ಮೇಲಿನ ಒತ್ತಡ ಹಾಗೂ ಸಂಚಾರ ದಟ್ಟಣೆ ಹೆಚ್ಚುತ್ತಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ಬೆಂಗಳೂರಿನ ಸಂಚಾರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದಾಗಿ ವರದಿ ತಿಳಿಸಿದೆ. ಟ್ರಾಫಿಕ್ ದಟ್ಟಣೆಯಲ್ಲಿ ಕೋಲ್ಕತ ಎರಡನೇ ಸ್ಥಾನದಲ್ಲಿದ್ದು, 10 ಕಿ.ಮೀ ಸಂಚಾರಕ್ಕೆ 35.18 ನಿಮಿಷ, ಮೂರನೇ ಸ್ಥಾನದಲ್ಲಿರುವ ಪುಣೆಯಲ್ಲಿ 33.20 ನಿಮಿಷ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಹೈದರಾಬಾದ್​ನಲ್ಲಿ 32.37 ನಿಮಿಷ ಸಮಯ ತೆಗೆದುಕೊಳ್ಳುತ್ತಿದೆ. ದೀರ್ಘಕಾಲ ಸಂಚಾರ ದಟ್ಟಣೆಯಲ್ಲಿ ಮುಂಚೂಣಿಯಲ್ಲಿದ್ದ ದೆಹಲಿ ಈ ಬಾರಿ 10ನೇ ಸ್ಥಾನದಲ್ಲಿದೆ.

ಟ್ರಾಫಿಕ್ ಇಂಡೆಕ್ಸ್ ವರದಿ

ನೆದರ್ಲ್ಯಾಂಡ್ ಮೂಲದ ನ್ಯಾವಿಗೇಷನ್ ತಂತ್ರಜ್ಞಾನ ಸಂಸ್ಥೆ ಟಾಮ್ಸ್​ ವಿಶ್ವದ ವಿವಿಧ ನಗರಗಳ ಸಂಚಾರ ಪರಿಸ್ಥಿತಿಯನ್ನು ವಿಶ್ಲೇಷಿಸಿ ಪ್ರತಿ ವರ್ಷ ಟ್ರಾಫಿಕ್ ಇಂಡೆಕ್ಸ್ ಪ್ರಕಟಿಸುತ್ತದೆ. 2025ರ ವರದಿಯಲ್ಲಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವಾಗಿ ಗುರುತಿಸಲ್ಪಟ್ಟಿದ್ದು, ಜಾಗತಿಕ ಮಟ್ಟದಲ್ಲಿಯೂ ಅತ್ಯಂತ ಕೆಟ್ಟ, ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರಗಳ ಪೈಕಿ ಮುಂಚೂಣಿಯಲ್ಲಿದೆ.

10 ಕಿಲೋಮೀಟರ್ ಪ್ರಯಾಣದ ಅವಧಿ (ನಿಮಿಷಗಳಲ್ಲಿ)

ಬೆಂಗಳೂರು ನಗರ -36.09

ಕೋಲ್ಕತ - 35.18

ಪುಣೆ - 33.20

ಹೈದರಾಬಾದ್ - 32.37

ಚೆನ್ನೈ - 31.15

ಎರ್ನಾಕುಲಂ - 29.51

ಜೈಪುರ - 29.16

ಅಹ್ಮದಾಬಾದ್ - 28.59

ಮುಂಬೈ - 28.51

ದೆಹಲಿ - 24.00

ದಶಕದಿಂದ ಹೆಚ್ಚಳ...

ನಗರದಲ್ಲಿ ಕಳೆದ ಒಂದು ದಶಕದಲ್ಲಿ ವಾಹನಗಳ ಸಂಖ್ಯೆ ಅತಿವೇಗವಾಗಿ ಏರಿಕೆಯಾಗಿದೆ. ಐಟಿ, ಬಿಟಿ, ಉತ್ಪಾದನಾ ಹಾಗೂ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶದ ಅನೇಕ ಭಾಗಗಳಿಂದ ಜನರು ಬೆಂಗಳೂರಿನತ್ತ ವಲಸೆ ಬರುತ್ತಿದ್ದಾರೆ. ಇದರಿಂದ ಜನಸಂಖ್ಯೆಯ ಜತೆಗೆ ಖಾಸಗಿ ವಾಹನಗಳ ಬಳಕೆ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ವಾಹನಗಳ ಹೆಚ್ಚಳಕ್ಕೆ ಅನುಗುಣವಾಗಿ ನಗರದ ರಸ್ತೆ ಜಾಲ ವಿಸ್ತರಣೆ, ಸಂಚಾರ ವ್ಯವಸ್ಥೆ ಮಾರ್ಪಟ್ಟಿಲ್ಲ. ಪ್ರಮುಖ ರಸ್ತೆಗಳು ಇನ್ನೂ ಕಿರಿದಾಗಿದ್ದು, ಜಂಕ್ಷನ್ಗಳ ವಿನ್ಯಾಸವೂ ಆಧುನಿಕ ಸಂಚಾರದ ಅಗತ್ಯಗಳಿಗೆ ಹೊಂದಿಕೆಯಾಗಿಲ್ಲ. ರಸ್ತೆ ಕಾಮಗಾರಿಗಳು, ಮೆಟ್ರೊ ನಿರ್ವಣ, ಅಗೆದು ಬಿಟ್ಟ ರಸ್ತೆಗಳು ಮತ್ತು ಮಳೆಗಾಲದಲ್ಲಿ ಉಂಟಾಗುವ ನೀರು ನಿಲ್ಲುವ ರಸ್ತೆ ಗುಂಡಿ ಸಮಸ್ಯೆಗಳು ಸಂಚಾರವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿವೆ ಎಂಬ ಆರೋಪವಿದೆ.