Bangalore Airport  
ರಾಜ್ಯ

Bengaluru Airport: ದಾಖಲೆ ಬರೆದ ಬೆಂಗಳೂರು ವಿಮಾನ ನಿಲ್ದಾಣ: ಒಂದೇ ವರ್ಷದಲ್ಲಿ 2.8 ಲಕ್ಷ ವಿಮಾನ ಸಂಚಾರ!

ಬೆಂಗಳೂರು: ದೇಶದ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ Kempegowda International Airport(Bangalore Airport) ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದೆ. 2025-26ನೇ ಹಣಕಾಸು ವರ್ಷದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 2.8 ಲಕ್ಷಕ್ಕೂ ಹೆಚ್ಚು ವಿಮಾನಗಳ ಸಂಚಾರ ದಾಖಲಾಗಿದ್ದು, ಇದುವರೆಗೆ ಕಂಡಿರದ ಹೊಸ ದಾಖಲೆ ನಿರ್ಮಾಣವಾಗಿದೆ. ಪ್ರಯಾಣಿಕರ ಸಂಖ್ಯೆ, ಅಂತರರಾಷ್ಟ್ರೀಯ ಸಂಪರ್ಕ ಮತ್ತು ಕಾರ್ಗೋ ಸೇವೆಗಳಲ್ಲಿ ಕೂಡ ಭಾರೀ ಏರಿಕೆ ಕಂಡುಬಂದಿದೆ.
ಬೆಂಗಳೂರು ವಿಮಾನ ನಿಲ್ದಾಣ ನಿರ್ವಹಣೆ ನಡೆಸುವ Bangalore International Airport Limited (BIAL) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಒಟ್ಟು 2,80,800 ವಿಮಾನ ಸಂಚಾರಗಳು ನಡೆದಿವೆ. ಇದು ಹಿಂದಿನ ವರ್ಷದಿಗಿಂತ ಸುಮಾರು 4.5 ಶೇಕಡಾ ಹೆಚ್ಚಳವಾಗಿದೆ. ಸರಾಸರಿಯಾಗಿ ಪ್ರತಿದಿನ 769 ವಿಮಾನಗಳು ಟೇಕ್‌ಆಫ್‌ ಮತ್ತು ಲ್ಯಾಂಡಿಂಗ್‌ ನಡೆಸಿವೆ. ಒಂದು ದಿನದಲ್ಲೇ ಗರಿಷ್ಠ 837 ವಿಮಾನ ಸಂಚಾರ ದಾಖಲಾಗಿರುವುದು ವಿಶೇಷ.

ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆ!

ಪ್ರಯಾಣಿಕರ ಸಂಖ್ಯೆಯಲ್ಲೂ ಬೆಂಗಳೂರು ವಿಮಾನ ನಿಲ್ದಾಣ ಹೊಸ ಎತ್ತರ ತಲುಪಿದೆ. 2025-26ರಲ್ಲಿ ಒಟ್ಟು 4.44 ಕೋಟಿ ಪ್ರಯಾಣಿಕರು ಈ ವಿಮಾನ ನಿಲ್ದಾಣವನ್ನು ಬಳಸಿದ್ದಾರೆ. ಇದರಲ್ಲಿ 3.72 ಕೋಟಿ ಮಂದಿ ದೇಶೀಯ ಪ್ರಯಾಣಿಕರಾಗಿದ್ದರೆ, 72 ಲಕ್ಷಕ್ಕೂ ಹೆಚ್ಚು ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ 24 ಶೇಕಡಾ ಏರಿಕೆ ಕಂಡುಬಂದಿರುವುದು ಗಮನಾರ್ಹವಾಗಿದೆ.
ವಿಮಾನ ನಿಲ್ದಾಣದ ಬೆಳವಣಿಗೆಯ ಹಿಂದೆ ಬೆಂಗಳೂರಿನ ಜಾಗತಿಕ ಮಹತ್ವವೂ ಪ್ರಮುಖ ಕಾರಣವಾಗಿದೆ. ಐಟಿ, ಸ್ಟಾರ್ಟ್‌ಅಪ್‌, ಸಂಶೋಧನೆ, ಉತ್ಪಾದನೆ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳ ಕೇಂದ್ರವಾಗಿ ಬೆಂಗಳೂರು ಬೆಳೆಯುತ್ತಿರುವುದರಿಂದ ದೇಶ-ವಿದೇಶಗಳಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಮಾನಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಏರ್‌ ಹಬ್‌!

ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣವು 78 ದೇಶೀಯ ಮತ್ತು 34 ಅಂತರರಾಷ್ಟ್ರೀಯ ಗಮ್ಯಸ್ಥಾನಗಳಿಗೆ ನೇರ ವಿಮಾನ ಸಂಪರ್ಕ ಹೊಂದಿದೆ. ಏಷ್ಯಾ, ಯುರೋಪ್‌, ಮಧ್ಯಪ್ರಾಚ್ಯ ಮತ್ತು ಉತ್ತರ ಅಮೆರಿಕದ ಪ್ರಮುಖ ನಗರಗಳಿಗೆ ಇಲ್ಲಿಂದ ನೇರ ವಿಮಾನ ಸೇವೆ ಲಭ್ಯವಿದೆ. ಇದರೊಂದಿಗೆ ದಕ್ಷಿಣ ಭಾರತದ ಪ್ರಮುಖ ಜಾಗತಿಕ ಏರ್‌ ಹಬ್‌ ಆಗಿ ಬೆಂಗಳೂರು ಹೊರಹೊಮ್ಮುತ್ತಿದೆ.
ಕಾರ್ಗೋ ಸೇವೆಯಲ್ಲೂ ಬೆಂಗಳೂರು ವಿಮಾನ ನಿಲ್ದಾಣ ಉತ್ತಮ ಸಾಧನೆ ಮಾಡಿದೆ. ಕಳೆದ ವರ್ಷ 5.32 ಲಕ್ಷ ಟನ್‌ ಸರಕು ಸಾಗಣೆ ನಡೆದಿದ್ದು, ಇದು 6 ಶೇಕಡಾ ಏರಿಕೆಯಾಗಿದೆ. ಔಷಧಿ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್‌, ಕೃಷಿ ಉತ್ಪನ್ನಗಳು, ವಾಹನ ಬಿಡಿಭಾಗಗಳು ಮತ್ತು ಇ-ಕಾಮರ್ಸ್‌ ಸರಕು ಸಾಗಣೆ ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ.
ವಿಶೇಷವಾಗಿ ಹೂವು ಮತ್ತು ಮಾವಿನ ಹಣ್ಣು ರಫ್ತಿನಲ್ಲಿ ಬೆಂಗಳೂರು ವಿಮಾನ ನಿಲ್ದಾಣ ದೇಶದ ಪ್ರಮುಖ ಕೇಂದ್ರವಾಗಿ ಉಳಿದಿದೆ. ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಪ್ರಮಾಣದ ಮಾವಿನ ಹಣ್ಣು ರಫ್ತು ಈ ವರ್ಷ ನಡೆದಿದ್ದು, ಸುಮಾರು 60 ಮಿಲಿಯನ್‌ ಗುಲಾಬಿ ಹೂವಿನ ಕಾಂಡಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಇದೇ ವೇಳೆ, 2008ರಲ್ಲಿ ಕಾರ್ಯಾರಂಭ ಮಾಡಿದ ನಂತರದಿಂದ ಇದೀಗ ಬೆಂಗಳೂರು ವಿಮಾನ ನಿಲ್ದಾಣ 400 ಮಿಲಿಯನ್‌ ಪ್ರಯಾಣಿಕರ ಮೈಲುಗಲ್ಲನ್ನೂ ದಾಟಿದೆ. ಇದು ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.
ಪ್ರಯಾಣಿಕರಿಗೆ ಉತ್ತಮ ಸೇವೆ, ಆಧುನಿಕ ಮೂಲಸೌಕರ್ಯ, ಡಿಜಿಟಲ್‌ ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ಯೋಜನೆಗಳ ಕಾರಣಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಲವು ಅಂತರರಾಷ್ಟ್ರೀಯ ಪ್ರಶಸ್ತಿಗಳೂ ಲಭಿಸಿವೆ. Skytrax ವಿಶ್ವ ವಿಮಾನ ನಿಲ್ದಾಣ ರ‍್ಯಾಂಕಿಂಗ್‌ನಲ್ಲಿ ಕೂಡ ಬೆಂಗಳೂರು ವಿಮಾನ ನಿಲ್ದಾಣದ ಸ್ಥಾನ ಸುಧಾರಿಸಿದೆ ಎಂದು ವರದಿಗಳು ತಿಳಿಸಿವೆ.
ವಿಮಾನಯಾನ ಕ್ಷೇತ್ರದಲ್ಲಿ ಭಾರತದ ವೇಗವಾದ ಬೆಳವಣಿಗೆಯ ಸಂಕೇತವಾಗಿ ಬೆಂಗಳೂರು ವಿಮಾನ ನಿಲ್ದಾಣ ಹೊರಹೊಮ್ಮಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪ್ರಯಾಣಿಕರು ಮತ್ತು ವಿಮಾನ ಸಂಚಾರ ದಾಖಲಾಗುವ ನಿರೀಕ್ಷೆ ಇದೆ,(ಏಜೆನ್ಸೀಸ್​).