ಬನಶಂಕರಿ ದೇವಿಗೆ ಪಲ್ಯದ ನೈವೇದ್ಯ
- ಬೃಹತ್ ರಥದಲ್ಲಿ ಅಮ್ಮನವರ ಮೆರವಣಿಗೆ
- ಶಾಕಾಂಬರಿ ದೇವಿಗೆ ಮುತ್ತಿನ ಪಲ್ಲಕ್ಕಿ ಉತ್ಸವ
- ಅಮ್ಮನಿಗೆ ವಿವಿಧ ತರಕಾರಿಗಳ ಪಲ್ಯದ ನೈವೇದ್ಯ
ಬೆಂಗಳೂರು: ನಗರದ ಬನಶಂಕರಿ ದೇವಾಲಯದಲ್ಲಿ ಬನಶಂಕರಿ ಅಮ್ಮನವರ 110ನೇ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಪುಷ್ಯ ಶುದ್ಧ ಪೌರ್ಣಮಿ ಬನದ ಹುಣ್ಣಿಮೆ ದಿನವಾದ ಶನಿವಾರ ಅಮ್ಮನವರ ರಥೋತ್ಸವ ಜರುಗಲಿದೆ.
ಇದಕ್ಕಾಗಿ ದೇವಾಲಯದ ಆವರಣದಲ್ಲಿ ಸುಮಾರು 22 ಅಡಿ ಎತ್ತರ ಹಾಗೂ 9 ಅಡಿ ಅಗಲದ ಬೃಹತ್ ರಥ ತಳಿರುತೋರಣಗಳೊಂದಿಗೆ ಸಿಂಗಾರಗೊಂಡು ಅಮ್ಮನವರ ಅದ್ದೂರಿ ಮೆರವಣಿಗೆ ಸಜ್ಜಾಗಿದೆ. ರಥೋತ್ಸವ ಪ್ರಯುಕ್ತ ಶನಿವಾರ ಬೆಳಗ್ಗೆ ದೇವಾಲಯದಲ್ಲಿ ಮೃತ್ಯುಂಜಯ ಪುರಸ್ಸರ, ನವಗ್ರಹ ಶಾಂತಿ, ದೇವಿ ಮೂಲಮಂತ್ರ ಹೋಮ, ರಥಾಂಗ ಹೋವ, ರಥಬಲಿ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಮಧ್ಯಾಹ್ನ 1.10ರಿಂದ 1.40ರೊಳಗೆ ಸಲ್ಲುವ ಶುಭ ಮೇಷ ಲಗ್ನದಲ್ಲಿ ರಥೋತ್ಸವ ಜರುಗಲಿದ್ದು, ಸಂಜೆ 4ಕ್ಕೆ ರಥಾವರೋಹಣ. 4.30ಕ್ಕೆ ಅಮ್ಮನವರಿಗೆ ಧೂಳೋತ್ಸವ. ಸಂಜೆ 6ಕ್ಕೆ ಶಾಕಾಂಬರಿ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ.
ದೇವಿಗೆ ಪಲ್ಯಗಳ ನೈವೇದ್ಯ:
ಜಾತ್ರಾಮಹೋತ್ಸವ ಪ್ರಯುಕ್ತ ಶುಕ್ರವಾರ ದೇವಾಲಯದಲ್ಲಿ ಪಲ್ಯದ ಹಬ್ಬ ನಡೆಯಿತು. ಬೆಳಗ್ಗೆ ನವಚಂಡಿಕಾ ಹೋಮ ಮಾಡಲಾಯಿತು. ಇದೇ ವೇಳೆ ಬನಶಂಕರಿ ಅಮ್ಮನವರಿಗೆ ವಿವಿಧ ತರಕಾರಿಗಳಿಂದ ತಯಾರಿಸಿದ ಹಲವು ಬಗೆಯ ಪಲ್ಯಗಳ ನೈವೇದ್ಯ ಸಮರ್ಪಿಸಲಾಯಿತು.