ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಒಂದಾಗಿ ಸೇರಿ ಬಕ್ರೀದ್ ಹಬ್ಬದ ವಿಶೇಷ ಸಾಮೂಹಿಕ ನಮಾಜ್ ಸಲ್ಲಿಸಿದರು.
- ಪವಿತ್ರ ಬಕ್ರೀದ್ ಹಬ್ಬ
- ಕುರ್ಬಾನಿ (ಪ್ರಾಣಿ ಬಲಿ) ನೆರವೇರಿಸಿದರು
ಸಕಲೇಶಪುರ: ತ್ಯಾಗ, ಭಕ್ತಿ, ಮಾನವೀಯತೆ ಹಾಗೂ ಸಹೋದರತ್ವದ ಸಂದೇಶ ಸಾರುವ ಪವಿತ್ರ ಬಕ್ರೀದ್ ಹಬ್ಬವನ್ನು ತಾಲೂಕಿನಾದ್ಯಂತ ಮುಸ್ಲಿಮರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಇಸ್ಲಾಂ ಧರ್ಮದ ಅತ್ಯಂತ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾದ ಹಬ್ಬವನ್ನು ವಿಶೇಷ ನಮಾಜ್, ಪ್ರಾರ್ಥನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಒಂದಾಗಿ ಸೇರಿ ಬಕ್ರೀದ್ ಹಬ್ಬದ ವಿಶೇಷ ಸಾಮೂಹಿಕ ನಮಾಜ್ ಸಲ್ಲಿಸಿದರು. ತಾಲೂಕಿನ ಕಾಡುಮನೆ, ಹಾನುಬಾಳು, ದೇಖ್ಲಾ, ಆನೆಮಹಲ್, ಮಾರನಹಳ್ಳಿ, ಕೊಲ್ಲಹಳ್ಳಿ, ಬಾಳುಪೇಟೆ, ಗುಲಗಳಲೆ, ಹೊಸೂರು ಸೇರಿದಂತೆ ವಿವಿಧ ಗ್ರಾಮಗಳ ಜಾಮಿಯಾ ಮಸೀದಿಗಳಲ್ಲಿಯೂ ವಿಶೇಷ ಪ್ರಾರ್ಥನೆಗಳು ನಡೆಯಿತು.
ನಮಾಜ್ ನಂತರ ಪರಸ್ಪರ ತಬ್ಬಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಕುರ್ಬಾನಿ (ಪ್ರಾಣಿ ಬಲಿ) ನೆರವೇರಿಸಿದರು.
ಈ ಸಂದರ್ಭದಲ್ಲಿ ಲಬಾಬಿನ್ ಮಸೀದಿಯ ಇಮಾಮರಾದ ಮುಫ್ತಿ ಮಹಮ್ಮದ್ ತಲ್ಹಾ ಮಾತನಾಡಿ, ಪ್ರಪಂಚದ ಎಲ್ಲ ಭಾಗಗಳಿಂದ ಬರುವ ಬಡ-ಶ್ರೀಮಂತ, ಕಪ್ಪು-ಬಿಳುಪು ಎಂಬ ಭೇದವಿಲ್ಲದೆ ಎಲ್ಲರೂ ಒಬ್ಬನೇ ಸೃಷ್ಟಿಕರ್ತನ ದಾಸರು ಎಂಬ ಸಂದೇಶವನ್ನು ಸಾರುವ ಪವಿತ್ರ ಸ್ಥಳ ಮೆಕ್ಕಾ. ಮಾನವರ ಸಮಾನತೆ ಹಾಗೂ ಭಕ್ತಿಯ ಮಹತ್ವವನ್ನು ಇಸ್ಲಾಂ ಸಾರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷ ಜಾಫರ್ ಅಲಿ, ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಫೀಸ್ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಇದ್ದರು.