ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಮ್ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.
ಗುಂಡ್ಲುಪೇಟೆ: ಡಾ.ಬಾಬು ಜಗಜೀವನ ರಾಮ್ ಹಸಿರು ಕ್ರಾಂತಿ ಜತೆಗೆ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ ಎಂದು ತಹಸೀಲ್ದಾರ್ ಎಂ.ಎಸ್. ತನ್ಮಯ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಮ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಬಾಬೂಜಿ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ನೆರವೇರಿಸಿ ಮಾತನಾಡಿದರು.
ತಳ ಸಮುದಾಯದಿಂದ ಬಂದು ತಮಗೆ ನೀಡಿದ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಬಾಬೂಜಿ ಉತ್ತಮ ಆಡಳಿತ ನೀಡಿದ್ದಾರೆ. ಬಾಬೂಜಿ ಹಸಿರು ಕ್ರಾಂತಿ ಮೂಲಕ ದೇಶದ ಆಹಾರದ ಕೊರತೆ ನೀಗಿಸಿ ಆಹಾರ ಭದ್ರತೆಗೆ ಭದ್ರ ಬುನಾದಿ ಹಾಕಿದರು. ಯುವ ಸಮೂಹ ಹಾಗೂ ರೈತಾಪಿ ವರ್ಗದವರು ಇಂತಹ ಮಹಾನ್ ನಾಯಕರ ಕೊಡುಗೆ, ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜತೆಗೆ ವಿಭಿನ್ನ ಆಲೋಚನೆಗಳ ಮೂಲಕ ದೇಶವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.
ಮುಖ್ಯ ಭಾಷಣಕಾರ ರಾಚಯ್ಯ ಮಾತನಾಡಿ, ಡಾ.ಬಾಬು ಜಗಜೀವನ ರಾಮ್ ವಿದ್ಯಾರ್ಥಿ ದಿಸೆಯಲ್ಲೇ ಹೋರಾಟಕ್ಕಿಳಿದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಸೆರೆ ವಾಸ ಅನುಭವಿಸಿದರು. ಸ್ವಾತಂತ್ರ್ಯ ಬರುವುದಕ್ಕೆ ಮೊದಲು ನಡೆದ ಮಧ್ಯಂತರ ಚುನಾವಣೆಯಲ್ಲಿ ಚುನಾಯಿತರಾದ ದಲಿತ ಸಮುದಾಯದ ಏಕೈಕ ವ್ಯಕ್ತಿ ಡಾ.ಬಾಬು ಜಗಜೀವನ ರಾಮ್ ಕಾರ್ಮಿಕ ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಬಾಬೂಜಿ ಉಳುವವನೆ ಗೇಣಿದಾರ, ಜೀತ ಪದ್ಧತಿ ನಿರ್ಮೂಲನೆ ಸೇರಿದಂತೆ ಕಾರ್ಮಿಕರಿಗೆ ಅನುಕೂಲವಾದ ಕಾನೂನುಗಳು ಜಾರಿಗೆ ತಂದು ನೆಹರೂ, ಇಂದಿರಾ ಗಾಂಧಿ ಸಚಿವ ಸಂಪುಟದಲ್ಲಿ ಸಮರ್ಥವಾಗಿ ಆಡಳಿತ ನೀಡಿದರು. ಅದ್ದರಿಂದಲೇ ದೇಶ ಇಂದು ಉತ್ತಮವಾಗಿ ನೆಲೆಯೂರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಪುರಸಭಾ ಮಾಜಿ ಸದಸ್ಯ ಹಸಗೂಲಿ ಸಿದ್ದಯ್ಯ ಮಾತನಾಡಿ, ದೇಶಕ್ಕೆ ಹಸಿರು ಕ್ರಾಂತಿ ಮೂಲಕ ಆಹಾರ ಭದ್ರತೆಯನ್ನು ಬಲಗೊಳಿಸಿದ ಡಾ.ಬಾಬು ಜಗಜೀವನರಾಮ್ ಪುಣ್ಯ ಸ್ಮರಣೆಗೆ ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಗೈರಾಗಿರುವ ನಡೆ ಖಂಡನೀಯ. ಅಧಿಕಾರಿಗಳು ಮೊದಲು ಮಹನೀಯರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಕಾಟಾಚಾರಕ್ಕೆ ಆಚರಣೆ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಷಣ್ಮುಗಂ, ತಾಲೂಕು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಶರವಣ, ಮುಖಂಡರಾದ ಪುರಸಭೆ ಮಾಜಿ ಉಪಾಧ್ಯಕ್ಷ ಟಿ.ರಂಗಸ್ವಾಮಿ, ನಿಟ್ರೆ ಮಹದೇವಯ್ಯ, ಶಂಕರ್, ಹುಲಸಗುಂದಿ ಮುತ್ತಣ್ಣ, ಮಾಡ್ರಹಳ್ಳಿ ರಂಗಸ್ವಾಮಿ, ರಮೇಶ್, ಆರ್.ಡಿ.ಉಲ್ಲಾಸ್, ದೇವರಾಜು, ಈಶ್ವರ್, ಅಬ್ದುಲ್ ಮಾಲೀಕ್ ಇತರರು ಇದ್ದರು.