ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿಯಲ್ಲಿ ಸಚಿವ ಎಂ.ಬಿ. ಪಾಟೀಲರು ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮುಖಂಡರಾದ ಸಿದ್ದು ಗೌಡನವರ, ಸೋಮನಾಥ ಬಾಗಲಕೋಟ ಇತರರಿದ್ದಾರೆ.
- ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿಕೆ
- ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ
ವಿಜಯಪುರ: ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಬಬಲೇಶ್ವರ ಮತಕ್ಷೇತ್ರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ತಿಕೋಟಾ ತಾಲೂಕಿನ ಮಲಕನದೇವರಹಟ್ಟಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ರೂ. 100 ಲಕ್ಷ ವೆಚ್ಚದಲ್ಲಿ ಸೋಮದೇವರಹಟ್ಟಿ- ಮಲಕನದೇವರಹಟ್ಟಿವರೆಗಿನ ಮೂಲಸೌಕರ್ಯ ಅಭಿವೃದ್ಧಿ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಎಲ್ಲ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ಅವರು ಹೇಳಿದರು.
ನೀರಾವರಿ ಮತ್ತು ಕೋಟಿ ವೃಕ್ಷ ಅಭಿಯಾನದ ಪರಿಣಾಮ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಉಷ್ಣಾಂಶ 40 ಡಿ.ಸೆ. ದಾಟಿಲ್ಲ. ಮಲಕನದೇವರಹಟ್ಟಿ ಗ್ರಾಮದ ಎರಡು ಕೆರೆಗಳ ಕಾಮಗಾರಿ ಪೂರ್ಣಗೊಂಡಿದೆ. ಮುಂಬರುವ ದಿನಗಳಲ್ಲಿ ನೀರು ತುಂಬಿಸಲಾಗುವುದು.
ಬಾಬಾನಗರ ಬಳಿ ಸುಮಾರು ಒಂದು ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಿಸಲಾಗುತ್ತಿದ್ದು, ಮೂರ್ನಾಲ್ಕು ತಿಂಗಳಲ್ಲಿ ಡಿಪಿಆರ್ ಮತ್ತು ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಅದರ ನಂತರ ಡ್ಯಾಂ ಕಾಮಗಾರಿ ಪ್ರಾರಂಭವಾಗಿ ನಿಗದಿತ ಸಮಯದಲ್ಲಿ ಪೂರ್ಣವಾಗಲಿದೆ. ಇದರಿಂದ ಬೇಸಿಗೆಯಲ್ಲಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.
ಈಗ ಭೂಮಿಪೂಜೆ ನೆರವೇರಿಸಲಾದ ರಸ್ತೆಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ಸಮುದಾಯ ಭವನಕ್ಕೆ ಅನುದಾನ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಮಾತನಾಡಿ, ಸಚಿವ ಎಂ.ಬಿ. ಪಾಟೀಲ ಅವರು ಈ ಭಾಗದಲ್ಲಿ ರಸ್ತೆ ಮತ್ತು ನೀರಾವರಿ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ವಿದ್ಯಾಧರ ಶರಣಯ್ಯ ಹಿರೇಮಠ, ದಯಾನಂದ ಹಿರೇಮಠ, ಸಿದ್ದು ಗೌಡನವರ, ಜಗದೀಶ ವಳಸಂಗ, ಚನ್ನಪ್ಪ ದಯಗೊಂಡ, ರಮೇಶ ಜಂಬಗಿ, ಮಲ್ಲಪ್ಪ ರಾಮೋಜಿ, ರವಿ ಹಿರೇಮಠ, ನಿಂಗವ್ವ ನಿಡೋಣಿ, ಭೀಮವ್ವ ಜಂಬಗಿ, ನೀರಾವರಿ ನಿಗಮದ ಎಇಇ ಅಂಬಣ್ಣ ಹರಳಯ್ಯ, ಲೋಕೋಪಯೋಗಿ ಇಲಾಖೆ ಎಇಇ ಪ್ರಮೋದ ಹಟ್ಟಿ ಇತರರಿದ್ದರು.