B Y Vijayendra | ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧಿಸಿದ ಸರ್ಕಾರದ ನಡೆಗೆ ಬಿ ವೈ ವಿಜಯೇಂದ್ರ ಗರಂ 
ರಾಜ್ಯ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ.. ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧಿಸಿದ ಸರ್ಕಾರದ ನಡೆಗೆ ಬಿ ವೈ ವಿಜಯೇಂದ್ರ ಗರಂ | B Y Vijayendra

ಬೆಂಗಳೂರು: ಭದ್ರತೆಯ ಹೆಸರಿನಲ್ಲಿ ಮಾಧ್ಯಮದವರನ್ನು ವಿಧಾನಸೌಧಕ್ಕೆ ಪ್ರವೇಶಿಸದಂತೆ ನಿರ್ಭಂದ ಹೇರಿರುವ ಕಾಂಗ್ರೆಸ್​​ ಸರ್ಕಾರದ ಅವಿವೇಕಿ ನಿರ್ಧಾರ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿ ಕಾರಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ವಿಜಯೇಂದ್ರ, ಈಗಾಗಲೇ ಪಾರದರ್ಶಕ ಆಡಳಿತ ಎಂದರೆ ಏನು ಎಂಬುದನ್ನೇ ಮರೆತಿರುವ, ಹತ್ತ-ಹಲವು ಹಗರಣಗಳಲ್ಲಿ ಸಿಲುಕಿಕೊಂಡಿರುವ ಕಾಂಗ್ರೆಸ್‌ ಸರ್ಕಾರದ ದುರಾಲೋಚನೆಯ ನಿರ್ಧಾರವೇ ಹೊರತು ಮತ್ತೇನು ಅಲ್ಲ.
ಇದು ಪ್ರಜಾಪ್ರಭುತ್ವ ವ್ಯವಸ್ಥೆಯ್ನನು ಅವಮಾನಿಸುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಮಾಧ್ಯಮ ಕ್ಷೇತ್ರವನ್ನು ಅಪಮಾನಿಸುವ ದುರುದ್ದೇಶದಿಂದ ಕೂಡಿದ ನಡುವಳಿಕೆಯಾಗಿದೆ. ಈ ಸಂಬಂಧ ಪ್ರತಿಭಟನೆಗಿಳಿದಿರುವ ಮಾಧ್ಯಮ ಬಂಧುಗಳ ಹೋರಾಟ ಮಾಧ್ಯಮ ಸ್ವತಂತ್ರ ಉಳಿಸುವ ನ್ಯಾಯೋಚಿತವಾಗಿದ್ದು ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವೆ ಎಂದರು.
ಜನರಿಂದ ಆಯ್ಕೆಯಾದ ಸರ್ಕಾರ ಜನರಿಗೆ ಉತ್ತರದಾಯಿಯಾಗಿರಬೇಕೇ ಹೊರತು, ಸತ್ಯವನ್ನು ಹೂಳಲು ಪ್ರಯತ್ನಿಸಬಾರದು. ಜನರ ಮತ್ತು ವ್ಯವಸ್ಥೆಯ ನಡುವೆ ಸತ್ಯದ ಸೇತುವೆಯಂತಿರುವ ಮಾಧ್ಯಮಗಳನ್ನು ಕೀಳಾಗಿ ಕಾಣುವುದು, ಭದ್ರತೆಯ ನೆಪವೊಡ್ಡಿ ಪತ್ರಕರ್ತರನ್ನು ದೂರವಿಡುವುದು, ಪ್ರಜಾತಾಂತ್ರಿಕ ಆಡಳಿತಕ್ಕೆ ಮಾಡಿದ ಅವಮಾನ.
ಈ ತಕ್ಷಣವೇ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ, ಮುಕ್ತ ವರದಿಗಾರಿಕೆಗೆ ಅವಕಾಶ ನೀಡಬೇಕು ಎಂದು ಈ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ವಿಜಯೇಂದ್ರ ಬರೆದುಕೊಂಡಿದ್ದಾರೆ.