ರಾಜ್ಯ

ಜನಕ ಮಹಾರಾಜನಿಂದ ಆರಂಭವಾದ ಆಯುಧ ಪೂಜೆ

ತ್ರೇತಾಯುಗದಲ್ಲಿ ಸೀತಾಮಾತೆಯ ಸಾಕುತಂದೆ ಮಿಥಿಲಾ ನಗರದ ರಾಜ ಜನಕ ಮಹಾರಾಜನು ದೇವರ ಆಶೀರ್ವಾದ ಪಡೆಯುವುದಕ್ಕಾಗಿ ಯಜ್ಞಕ್ಕೆ ಭೂಮಿ ಸಿದ್ಧಗೊಳಿಸಲು ನೇಗಿಲ ಮೂಲಕ ಉಳುಮೆ ಮಾಡಿಸಿ ಹದಗೊಳಿಸುವ ಪ್ರಕ್ರಿಯೆಯಲ್ಲಿದ್ದಾಗ, ನೇಗಿಲ ತುದಿಗೆ ಚಿನ್ನದ ಪೆಟ್ಟಿಗೆ ಸಿಲುಕಿ ತೆರೆದು ನೋಡುತ್ತಿದ್ದಂತೆ, ಅಶರೀರವಾಣಿಯೊಂದು ‘ಈ ದೈವೀ ಹೆಣ್ಣುಮಗುವು ಪಾವಿತ್ರ್ಯ ಹಾಗೂ ಸದ್ಗುಣಗಳನ್ನು ಹೊತ್ತು ಬಂದಿರುವ ಗಣಿಯಾಗಿದೆ, ಮಗುವನ್ನು ಸಾಕುವ ಹೊಣೆ ನಿನ್ನದು’ ಎಂದು ಹೇಳಿತು. ಇದರಿಂದ ಸಂತೋಷಗೊಂಡ ಜನಕನು ಆ ಮಗುವನ್ನು ಅರಮನೆಗೆ ತಂದು ಸಂಭ್ರಮಿಸಿದ.

ಸಾಯಿಚನ್ನಪ್ಪ ರಾಜು

ತ್ರೇತಾಯುಗದಲ್ಲಿ ಸೀತಾಮಾತೆಯ ಸಾಕುತಂದೆ ಮಿಥಿಲಾ ನಗರದ ರಾಜ ಜನಕ ಮಹಾರಾಜನು ದೇವರ ಆಶೀರ್ವಾದ ಪಡೆಯುವುದಕ್ಕಾಗಿ ಯಜ್ಞಕ್ಕೆ ಭೂಮಿ ಸಿದ್ಧಗೊಳಿಸಲು ನೇಗಿಲ ಮೂಲಕ ಉಳುಮೆ ಮಾಡಿಸಿ ಹದಗೊಳಿಸುವ ಪ್ರಕ್ರಿಯೆಯಲ್ಲಿದ್ದಾಗ, ನೇಗಿಲ ತುದಿಗೆ ಚಿನ್ನದ ಪೆಟ್ಟಿಗೆ ಸಿಲುಕಿ ತೆರೆದು ನೋಡುತ್ತಿದ್ದಂತೆ, ಅಶರೀರವಾಣಿಯೊಂದು ‘ಈ ದೈವೀ ಹೆಣ್ಣುಮಗುವು ಪಾವಿತ್ರ್ಯ ಹಾಗೂ ಸದ್ಗುಣಗಳನ್ನು ಹೊತ್ತು ಬಂದಿರುವ ಗಣಿಯಾಗಿದೆ, ಮಗುವನ್ನು ಸಾಕುವ ಹೊಣೆ ನಿನ್ನದು’ ಎಂದು ಹೇಳಿತು. ಇದರಿಂದ ಸಂತೋಷಗೊಂಡ ಜನಕನು ಆ ಮಗುವನ್ನು ಅರಮನೆಗೆ ತಂದು ಸಂಭ್ರಮಿಸಿದ.

ನೇಗಿಲ ತುದಿಯನ್ನು ಸಂಸ್ಕೃತದಲ್ಲಿ ‘ಸೀರಜಾತ’ ಎಂದು ಕರೆಯುತ್ತಾರೆ. ಆ ಹೆಸರನ್ನು ಸಂಕ್ಷಿಪ್ತಗೊಳಿಸಿ ಮಗಳಿಗೆ ‘ಸೀತಾ’ ಎಂದು ನಾಮಕರಣ ಮಾಡಿದರು. ಮಕ್ಕಳಿಲ್ಲದ ಜನಕ ಮಹಾರಾಜನು, ಭೂಮಿಯಲ್ಲಿ ಹೆಣ್ಣುಮಗು ಸಿಕ್ಕ ಖುಷಿಯಲ್ಲಿ ಅನೇಕ ಕೃಷಿಕರಿಗೆ ನೇಗಿಲುಗಳನ್ನು ಹಂಚಿದನಲ್ಲದೆ, ತನ್ನ ಪರಿವಾರದ ಜತೆ ಸೇರಿ ಪ್ರಥಮ ಬಾರಿ ನೇಗಿಲಿಗೆ ಪೂಜೆ ಮಾಡಿದ. ಆ ನೇಗಿಲಿನಿಂದಾಗಿ ಮಗಳು ದೊರೆತ ಕಾರಣಕ್ಕೆ ಅದನ್ನು ಗೌರವಿಸುವುದು, ಪೂಜಿಸುವುದು ಆರಂಭವಾಯಿತು ಎಂದು ರಾಮಾಯಣ ಕೃತಿಯೊಂದರಲ್ಲಿ ಹೇಳಲಾಗಿದೆ.

ದ್ವಾಪರಯುಗದಲ್ಲಿ ಪಾಂಡವರಿಂದ ಆಯುಧಪೂಜೆ: : ಪಾಂಡವರು ದ್ಯೂತದಲ್ಲಿ (ಜೂಜು) ಸೋತು ಹನ್ನೆರಡು ವರ್ಷ ವನವಾಸ ಮುಗಿಸಿದ ಬಳಿಕ ಒಂದು ವರ್ಷ ಯಾರ ಕಣ್ಣಿಗೂ ಕಾಣಿಸದ ಹಾಗೆ ಅಜ್ಞಾತವಾಸಕ್ಕೆ ಹೋಗುವ ಮುನ್ನ ಬನ್ನಿ ಮರದಲ್ಲಿ (ಶಮೀವೃಕ್ಷ) ತಮ್ಮ ಆಯುಧಗಳನ್ನು ಮಡಿ ಬಟ್ಟೆಯಲ್ಲಿ ಸುತ್ತಿ ಇಟ್ಟು, ವೇಷ ಮರೆಸಿಕೊಂಡು, ಹೆಸರು ಬದಲಿಸಿಕೊಂಡು ಜೀವನ ನಡೆಸಿದರು.

ಅಜ್ಞಾತವಾಸವೂ ಮುಗಿದು ನಾಡಿಗೆ ಬರುವ ಮುನ್ನ ಬನ್ನಿ ಮರದಲ್ಲಿ ಕಟ್ಟಿ ಇಟ್ಟಿದ್ದ ಆಯುಧಗಳನ್ನು ಇಳಿಸಿ ಪೂಜಿಸಿದರು. ಈ ದಿನವನ್ನೇ ಆಯುಧ ಪೂಜೆಯ ದಿವಸವನ್ನಾಗಿ ಆಚರಿಸಲಾಗುತ್ತದೆ. ದ್ರೌಪದಿಯು ಧೃತರಾಷ್ಟ್ರನಲ್ಲಿ ತನ್ನ ಐವರು ಗಂಡಂದಿರಿಗೆ ದಾಸ್ಯತ್ವದಿಂದ ಬಿಡುಗಡೆ ಮಾಡುವುದು ಹಾಗೂ ಆಯುಧಗಳನ್ನು ಧರಿಸುವ ಕೋರಿಕೆ ಸಲ್ಲಿಸುತ್ತಾಳೆ. ಅದಕ್ಕೆ ಆತ ಒಪ್ಪುತ್ತಾನೆ. ದ್ರೌಪದಿ ಮೂಲತಃ ಜ್ಞಾನಿ. ಈ ಕಾರಣದಿಂದ ಅವಳಿಗೆ ಆಯುಧಗಳ ಮಹತ್ವ ತಿಳಿದಿತ್ತು. ಅವುಗಳಿಂದ ಮಾತ್ರ ಧರ್ಮವನ್ನು, ಶಾಂತಿಯನ್ನು ಉಳಿಸಿ ಅಧರ್ಮವನ್ನು ಅಳಿಸಲು ಸಾಧ್ಯವಾಗುತ್ತದೆ. ರಾಜ್ಯದ ರಕ್ಷಣೆಯಾಗುತ್ತದೆ ಎಂಬ ಅರಿವು ಇರುತ್ತದೆ.

ವಜ್ರಾಯುಧದಿಂದ ವೃತ್ರಾಸುರನ ಸಂಹಾರ: ಪುರಾಣಗಳ ಪ್ರಕಾರ, ಒಂದು ಕಾಲದಲ್ಲಿ ವೃತ್ರಾಸುರ ಎಂಬ ಪ್ರಬಲ ರಾಕ್ಷಸನು ದೇವತೆಗಳಿಗೆ ತೀವ್ರ ತೊಂದರೆ ನೀಡುತ್ತಿದ್ದ. ಅವನನ್ನು ಸೋಲಿಸುವುದು ದೇವೇಂದ್ರನಿಗೂ ಕಷ್ಟವಾಗಿತ್ತು. ಆಗ ದೇವತೆಗಳು ಬ್ರಹ್ಮದೇವರ ಮೊರೆ ಹೋದರು. ವೃತ್ರಾಸುರನನ್ನು ಸಂಹರಿಸಲು ದಧೀಚಿ ಮಹರ್ಷಿಗಳ ದೇಹದ ಮೂಳೆಗಳಿಂದ ತಯಾರಿಸಿದ ವಜ್ರಾಯುಧವೇ ಬೇಕು ಎಂದು ತಿಳಿಸಲಾಯಿತು. ದೇವತೆಗಳು ದಧೀಚಿ ಮಹರ್ಷಿಗಳ ಬಳಿ ಬಂದು ಲೋಕದ ರಕ್ಷಣೆಗಾಗಿ ತಮ್ಮ ದೇಹವನ್ನು ತ್ಯಾಗ ಮಾಡುವಂತೆ ಕೋರಿದರು.

ದಧೀಚಿ ಮಹರ್ಷಿ ತಮ್ಮ ವೈಯಕ್ತಿಕ ಜೀವನಕ್ಕಿಂತ ಲೋಕಕಲ್ಯಾಣವೇ ದೊಡ್ಡದು ಎಂದು ಭಾವಿಸಿ, ತಮ್ಮ ದೇಹವನ್ನು ತ್ಯಜಿಸಿ ಮೂಳೆ ಕೊಡಲು ಒಪ್ಪಿಕೊಂಡರು. ಅವರ ಎಲುಬುಗಳಿಂದ ವಿಶ್ವಕರ್ಮನು ವಜ್ರಾಯುಧವನ್ನು ರೂಪಿಸಿದನೆಂದು ಪ್ರಸಿದ್ಧ ಪುರಾಣ ಕಥೆ ಹೇಳುತ್ತದೆ. ಆ ವಜ್ರಾಯುಧದಿಂದ ಇಂದ್ರನು ವೃತ್ರಾಸುರನನ್ನು ಸಂಹರಿಸಿದ. ಅಂದರೆ ದಧೀಚಿ ಮಹರ್ಷಿಗಳ ತ್ಯಾಗ ಬಲಿದಾನದಿಂದ ಮಾತ್ರ ಆ ದುಷ್ಟಶಕ್ತಿಯ ಸಂಹಾರ ಮಾಡಲು ಸಾಧ್ಯವಾಯಿತು. ಲೋಕರಕ್ಷಣೆಗೆ ಆಯುಧಗಳು ಹೇಗೆ ರಕ್ಷಾಕವಚವಾಗಿವೆ ಎಂಬುದನ್ನು ಇದು ಸಾರಿ ಹೇಳುತ್ತದೆ.

ಜಗತ್ಕಲ್ಯಾಣಕ್ಕೆ ದೇವತೆಗಳಿಂದ ಆಯುಧಗಳ ಬಳಕೆ

ವಜ್ರಾಯುಧ: ಭಗವದ್ಗೀತೆಯ 10ನೇ ಅಧ್ಯಾಯವಾದ ವಿಭೂತಿ ಯೋಗದಲ್ಲಿ ಶ್ರೀಕೃಷ್ಣ ಪರಮಾತ್ಮನು ‘ಆಯುಧನಾಮಹಂ ವಜ್ರಂ’ ಅಂದರೆ ‘ನಾನು ಆಯುಧದಲ್ಲಿ ವಜ್ರಾಯುಧ’ ಎಂದು ಹೇಳಿದ್ದಾನೆ. ವಜ್ರಾಯುಧವು ಸಾಮಾನ್ಯ ಆಯುಧವಲ್ಲ; ಅದು ದಧೀಚಿ ಮಹರ್ಷಿಗಳ ದೇಹತ್ಯಾಗದಿಂದ ಹುಟ್ಟಿದ ಧರ್ಮರಕ್ಷಣೆಯ ಸಾಧನ. ಶ್ರೀಮನ್ನಾರಾಯಣನು ಶಂಖ, ಚಕ್ರ, ಗದೆ, ಪುಷ್ಪ ಎಂಬ ಆಯುಧಗಳಿಂದ ಲೋಕಪಾಲನೆ ಮಾಡುತ್ತಿದ್ದಾನೆ.

ಸುದರ್ಶನ ಚಕ್ರ: ಮಹಾವಿಷ್ಣುವಿನ ಪ್ರಮುಖ ದಿವ್ಯಾಯುಧ ಸುದರ್ಶನ ಚಕ್ರ. ಇದು ಧರ್ಮದ ರಕ್ಷಣೆ, ಅಧರ್ಮದ ನಾಶ, ದೈವಿಕ ಶಕ್ತಿ ಮತ್ತು ಕಾಲದ ಸಂಕೇತ ಅರ್ಥಾತ್ ಚಲನಶೀಲತೆಯ ದ್ಯೋತಕ. ಜಗತ್ತಿನ ಚಲನೆ ಈ ಚಕ್ರದಿಂದಾಗುತ್ತಿದೆ. ನಾರಾಯಣನು ತನ್ನ ಬಲಗೈ ತೋರು ಬೆರಳನ್ನು ಎತ್ತಿ ಚಕ್ರಕ್ಕೆ ಆದೇಶ ನೀಡಿದರೆ, ಅದು ಬರುವ ರಭಸಕ್ಕೆ ಸಪ್ತ ಸಾಗರಗಳು ಒಣಗಿ ಹೋಗುತ್ತವೆ. ಅಷ್ಟು ರಭಸ, ವೇಗ, ತೀವ್ರತೆ ಅದಕ್ಕಿದೆ. ಪುರಾಣದ ಪ್ರಕಾರ ಅದರ ಉಗಮ ಹೀಗಿದೆ. ಲೋಕಕಲ್ಯಾಣಕ್ಕಾಗಿ ವಿಷ್ಣುವು ಶಿವನನ್ನು ಆರಾಧಿಸಿ ಅವನ ಪಾದಗಳಿಗೆ 1007 ಚಿನ್ನದ ಕಮಲ ಪುಷ್ಪಗಳನ್ನು ಅರ್ಪಿಸಿ ಆ ಪುಷ್ಪಗಳು ಖಾಲಿಯಾದಾಗ ತನ್ನ ಕಣ್ಣನ್ನೇ ಕಿತ್ತು ಶಿವನ ಪಾದಕ್ಕಿಟ್ಟು ದೈವೀ ಸಂಖ್ಯೆಯಾದ 1008 ಅನ್ನು ಪೂರೈಸುತ್ತಾನೆ. ಇದರಿಂದ ಸಂತುಷ್ಟನಾದ ಶಿವನು, ಬ್ರಹ್ಮಾಂಡದ ಶಕ್ತಿಯನ್ನೆಲ್ಲ ತುಂಬಿ ಸುದರ್ಶನ ಚಕ್ರವನ್ನು ನಾರಾಯಣನಿಗೆ ನೀಡಿ ‘ನೀನು ಯಾವ ಗಳಿಗೆಯಲ್ಲಿ ಯಾರನ್ನಾದರೂ ವಧೆ ಮಾಡಿ ಧರ್ಮರಕ್ಷಣೆ ಮಾಡಬಹುದು’ ಎಂದು ಅನುಗ್ರಹಿಸಿದ. ಅದರಂತೆ ಮಹಾಭಾರತದ ಸಭಾಪರ್ವದಲ್ಲಿ, ರಾಜಸೂಯ ಯಾಗದ ಸಂದರ್ಭದಲ್ಲಿ ಶ್ರೀಕೃಷ್ಣನು ಲೋಕಕಂಟಕನಾದ ಶಿಶುಪಾಲನನ್ನು ಇದೇ ಸುದರ್ಶನ ಚಕ್ರದಿಂದ ಸಂಹರಿಸಿದ.

ಕೌಮೋದಕೀ ಗದೆ: ಭಾರವಾದ ದಂಡ ಮತ್ತು ತಲೆಯ ಭಾಗವನ್ನು ಹೊಂದಿರುವ ಗದೆ ಇದಾಗಿದ್ದು, ಇದರಿಂದ ಯಾವಾಗಲೂ ಶಕ್ತಿ ಬಿಡುಗಡೆ ಆಗುತ್ತಿರುತ್ತದೆ. ಧೈರ್ಯ, ದೃಢತೆ ಮತ್ತು ಅಧರ್ಮವನ್ನು ಎದುರಿಸುವ ಸಾಮರ್ಥ್ಯವಿದ್ದು ಇದರ ಶಕ್ತಿ ಎಂಥದ್ದೆಂದರೆ ಗದೆ ಎತ್ತಿ ಹೊಡೆದರೆ ಇಡೀ ಬ್ರಹ್ಮಾಂಡವೇ ಪುಡಿ ಪುಡಿಯಾಗುತ್ತದಂತೆ.

ಪಾಂಚಜನ್ಯ ಶಂಖ: ಪಾಂಚಜನ್ಯವು ಮಹಾವಿಷ್ಣುವಿನ ಹಾಗೂ ಅವನ ಅವತಾರವಾದ ಕೃಷ್ಣನಿಗೆ ಸಂಬಂಧಿಸಿದ ಪ್ರಸಿದ್ಧ ದಿವ್ಯ ಶಂಖ. ಬ್ರಹ್ಮಾಂಡದಲ್ಲಿ ಶಬ್ದ ಉತ್ಪತ್ತಿಯಾಗಿ ಶಕ್ತಿ ಸಂಚಯವಾಗುವುದು ಈ ಶಂಖದಿಂದ. ಹಾಗೆಯೇ ಶಂಖನಾದವು ಧರ್ಮಯುದ್ಧದ ಆರಂಭ, ಧೈರ್ಯ ಮತ್ತು ಸಂಕಲ್ಪವನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಅರ್ಥದಲ್ಲಿ ಧರ್ಮದ ಕರೆ, ಸತ್ಯದ ಘೊಷಣೆ ಮತ್ತು ಅಧರ್ಮದ ವಿರುದ್ಧ ನಿಲ್ಲುವ ಸಂಕಲ್ಪವಾಗಿದೆ. ಶಂಖನಾದವು ಜಾಗೃತಿಯನ್ನು ಮತ್ತು ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುವುದನ್ನು ಸೂಚಿಸುತ್ತದೆ. ಹಿಂದೂ ಸಂಪ್ರದಾಯದಲ್ಲಿ ಪೂಜೆ, ಆರತಿ ಮತ್ತು ಮಂಗಳಕಾರ್ಯಗಳಲ್ಲಿ ಶಂಖವನ್ನು ಬಳಸಲಾಗುತ್ತದೆ.

ಕಮಲದ ಮೇಲೆ ನಿಂತಿದೆ ಜಗತ್ತು: ಶ್ರೀಮನ್ನಾರಾಯಣನು ಶಂಖ, ಚಕ್ರ, ಗದೆ, ಪುಷ್ಪ(ಕಮಲ)ಧಾರಿ ಆಗಿ ನಿಂತಿರುವ ಭಂಗಿಯಲ್ಲಿ ಇರುತ್ತಾನೆ. ಬ್ರಹ್ಮಾಂಡವು ಕಮಲ ಪುಷ್ಪದ ಮೇಲೆ ನಿಂತಿದೆ. ಹೇಗೆಂದರೆ, ಬ್ರಹ್ಮದೇವರು ವಿಷ್ಣುವಿನ ನಾಭಿಯಿಂದ ಉದ್ಭವಿಸಿದ ಕಮಲದ ಮೇಲೆ ಆಸೀನನಾಗಿದ್ದಾನೆ. ಅಂದರೆ ಸೃಷ್ಟಿಯು ಕಮಲದ ಮೇಲೆ ಸ್ಥಾಪಿತವಾಗಿದೆ. ಭಗವದ್ಗೀತೆಯ 5ನೇ ಅಧ್ಯಾಯದ 10ನೇ ಶ್ಲೋಕದಲ್ಲಿ ಕೃಷ್ಣನು ಕಮಲದ ಎಲೆಯ ಉದಾಹರಣೆಯನ್ನು ನೀಡುತ್ತಾನೆ.

ಬ್ರಹ್ಮಣ್ಯಾಧಾಯ ಕರ್ವಣಿ ಸಂಗಂ ತ್ಯಕ್ತಾ ್ವ ಕರೋತಿ ಯಃ |

ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಂಭಸಾ |

ಅಂದರೆ, ಫಲಾಪೇಕ್ಷೆ ಮತ್ತು ಅಹಂಕಾರವನ್ನು ತ್ಯಜಿಸಿ ಭಗವಂತನಿಗೆ ಅರ್ಪಣಾಭಾವದಿಂದ ಕರ್ಮ ಮಾಡುವವನಿಗೆ ನೀರಿನಲ್ಲಿ ಇರುವ ಕಮಲದ ಎಲೆಗೆ ನೀರು ಅಂಟದಂತೆ ಪಾಪವು ಅಂಟುವುದಿಲ್ಲ.

ಜ್ಞಾನ ಮತ್ತು ಆತ್ಮಜಾಗೃತಿ: ಕಮಲವು ಅರಳುವಂತೆ ಮನುಷ್ಯನಲ್ಲಿರುವ ಜ್ಞಾನವೂ ವಿಕಸಿಸಬೇಕು. ಅಜ್ಞಾನದಿಂದ ಜ್ಞಾನದ ಕಡೆಗೆ ಸಾಗುವುದನ್ನು ಇದು ಸಂಕೇತಿಸುತ್ತದೆ. ಸಮೃದ್ಧಿ ಮತ್ತು ಮಂಗಳ ಮಹಾಲಕ್ಷಿ ್ಮುು ಕಮಲದ ಮೇಲೆ ಆಸೀನಳಾಗಿರುವುದರಿಂದ ಕಮಲವು ಐಶ್ವರ್ಯ, ಸೌಭಾಗ್ಯ, ಮಂಗಳ ಮತ್ತು ಸಮೃದ್ಧಿಯ ಸಂಕೇತವಾಗಿದೆ.

ಶಿವನ ಆಯುಧ ತ್ರಿಶೂಲ: ತ್ರಿಶೂಲವು ಶಿವನ ಪ್ರಮುಖ ಆಯುಧವಾಗಿದ್ದು ಶಿವಪುರಾಣದ ಪ್ರಕಾರ, ಶಿವನು ತನ್ನ ತ್ರಿಶೂಲದಿಂದ ಅಂಧಕಾಸುರನನ್ನು ಸಂಹರಿಸಿದ. ತ್ರಿಶೂಲದ ಮೂರು ಮೊನೆಗಳು- ಸೃಷ್ಟಿ, ಸ್ಥಿತಿ, ಲಯ; ಭೂತಕಾಲ, ವರ್ತಮಾನ, ಭವಿಷ್ಯತ್ಕಾಲ; ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳು.

ಕೋದಂಡ ಬಿಲ್ಲು: ಕೋದಂಡ ಬಿಲ್ಲು ಇಲ್ಲದೆ ಶ್ರೀರಾಮನನ್ನು ನೆನೆಯಲು ಸಾಧ್ಯವಿಲ್ಲ. ಶ್ರೀರಾಮನೊಂದಿಗೆ ಬಿಲ್ಲು ಯಾವಾಗಲೂ ಜತೆಯಲ್ಲಿರುವುದನ್ನು ನೋಡುತ್ತೇವೆ. ಇದು ಧರ್ಮರಕ್ಷಣೆ ಮತ್ತು ದುಷ್ಟಶಕ್ತಿಗಳ ವಿರುದ್ಧದ ಹೋರಾಟದ ಸಂಕೇತ.

ದೇವಿಯ ಆಯುಧಗಳು: ದುರ್ಗಾದೇವಿಯು ತ್ರಿಶೂಲ, ಖಡ್ಗ, ಚಕ್ರ, ಬಿಲ್ಲು, ಬಾಣ ಮುಂತಾದ ಆಯುಧಗಳನ್ನು ಧರಿಸಿರುವಂತೆ ಚಿತ್ರಿಸಲಾಗಿದೆ. ಇವು ಮಹಿಷಾಸುರನಂತಹ ದುಷ್ಟಶಕ್ತಿಗಳ ವಿರುದ್ಧದ ವಿಜಯವನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅರ್ಜುನನು ಬಳಸಿದ ಗಾಂಡೀವ ಬಿಲ್ಲು, ಪರಶುರಾಮರ ಪರಶು (ಕೊಡಲಿ), ಯಮನ ದಂಡ ಮತ್ತು ಪಾಶಗಳು- ಈ ಎಲ್ಲ ದೈವೀ ಆಯುಧಗಳನ್ನು ಲೋಕಕಲ್ಯಾಣಕ್ಕಾಗಿ ಮಾತ್ರ ಬಳಸಲಾಗಿದೆ.

ದೈವೀ ವಾಹನಗಳೂ ಲೋಕಪೂಜ್ಯ: ಗಣೇಶನಿಗೆ ಮೂಷಿಕ, ಈಶ್ವರನಿಗೆ ನಂದಿ, ದುರ್ಗೆಗೆ ಸಿಂಹ, ವಿಷ್ಣುವಿಗೆ ಗರುಡ, ಮಹಾಲಕ್ಷ್ಮೀ ಗೂಬೆ, ಷಣ್ಮುಖನಿಗೆ ನವಿಲು, ಸರಸ್ವತಿಗೆ ಹಂಸ, ಇಂದ್ರನಿಗೆ ಐರಾವತ, ಯಮನಿಗೆ ಎಮ್ಮೆ ಹೀಗೆ ಹಲವು ದೈವೀ ವಾಹನಗಳಿದ್ದು, ಕೆಲವು ವಾಹನಗಳು ಲೋಕಪೂಜ್ಯವಾಗಿವೆ. ನವಗ್ರಹಗಳಿಗೂ ಆಯುಧ ಮತ್ತು ವಾಹನಗಳಿವೆ. ಜಗತ್ತಿನಲ್ಲಿ ವಾಹನ ಆರಂಭವಾದುದೇ ಬ್ರಹ್ಮದೇವನು ಕುಬೇರನಿಗೆ ಪ್ರಥಮ ಬಾರಿಗೆ ಪುಷ್ಪಕ ವಿಮಾನ ನೀಡಿದ ನಂತರ. ಕುಬೇರನ ಪಾರ್ಥನೆಯ ಮೇರೆಗೆ ಬ್ರಹ್ಮ ದೇವರು ತಾನೇ ಸೃಷ್ಟಿಸಿ ಪುಷ್ಪಕ ವಿಮಾನವನ್ನ ನೀಡಿದ. ಈ ವಾಹನ ನೀಡಿದ ನಂತರ ಲೋಕದಲ್ಲಿ ರಥಗಳು, ಟಾಂಗಾ, ಮೇನೆ, ಚಕ್ಕಡಿ, ದೋಣಿ, ಹಡಗು ಸೃಷ್ಟಿಯಾದವು. ಆಧುನಿಕ ಯುಗದಲ್ಲಿ ಸೈಕಲ್ ಮೋಟರ್​ಸೈಕಲ್, ಬೈಕ್, ಸ್ಕೂಟರ್, ಕಾರ್, ಬಸ್ಸು, ರೈಲು, ವಿಮಾನ, ಹಡಗು, ದೋಣಿ ಸೇರಿದಂತೆ ಅನೇಕ ವೈವಿಧ್ಯಮಯ ವಾಹನಗಳು ತಯಾರಾಗಿ ಬಳಕೆಯಲ್ಲಿದ್ದು, ಮಾನವನ ಪ್ರಗತಿಗೆ ಸಹಕಾರಿಯಾಗಿವೆ. ಆಯುಧಗಳಂತೆ ವಾಹನಗಳೂ ಧರ್ಮರಕ್ಷಣೆಯ ಜತೆಗೆ ಮನುಜನ ಕಲ್ಯಾಣಕ್ಕೆ ಕಾರಣೀಭೂತವಾಗಿವೆ. ಆಯುಧ ಪೂಜೆಯ ಸಂದೇಶವೇ ಆಯುಧಗಳು ಮತ್ತು ವಾಹನಗಳ ಮಹತ್ವವನ್ನು ಸಾರುವುದಾಗಿದೆ. ಅವುಗಳನ್ನು ಗೌರವಿಸಿ ಪ್ರೀತಿಸಿ ಸ್ವಚ್ಛವಾಗಿ ಇಟ್ಟುಕೊಂಡು ಸಂರಕ್ಷಣೆ ಮಾಡುವುದಾಗಿದೆ.