ಬೆಂಗಳೂರು : ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಶಿಕ್ಷಣದ ಬಲವರ್ಧನೆ ಮಾಡುವಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮನವಿ ಮಾಡಿದ್ದಾರೆ.
ಉನ್ನತ ಶಿಕ್ಷಣ ಸಚಿವ ಬಸವರಾಯ ರಾಯರೆಡ್ಡಿಯವರನ್ನು ಭೇಟಿ ಮಾಡಿದ ಅವರು, ಪತ್ರಿಕೋದ್ಯಮದ ಪ್ರಸ್ತುತ ಸ್ಥಿತಿಗತಿ, ಪತ್ರಿಕೋದ್ಯಮ ವಿಭಾಗಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಅಗತ್ಯ ಮೂಲಸೌಕರ್ಯ ಮತ್ತು ಶೈಕ್ಷಣಿಕ ಬೆಂಬಲದ ಕುರಿತು ಸಚಿವರಿಗೆ ವಿವರಿಸಿದರು. ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನ ಹಾಗೂ ಕಾರ್ಯವಿಧಾನಗಳು ವೇಗವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ, ಪತ್ರಿಕೋದ್ಯಮ ಶಿಕ್ಷಣವನ್ನು ಕಾಲೋಚಿತಗೊಳಿಸುವುದು ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಸಚಿವರ ಗಮನಕ್ಕೆ ತಂದರು. ಈ ವೇಳೆ ಅಕಾಡೆಮಿ ಪ್ರಕಟಿಸಿರುವ ಹಿರಿಯ ಪತ್ರಕರ್ತ ಹಾಗೂ ಲೇಖಕ ಪ್ರೊ. ನಾಡಿಗ ಕೃಷ್ಣಮೂರ್ತಿ ಅವರ ಮಾಧ್ಯಮ ಪತ್ರಿಕೋದ್ಯಮ ಕೃತಿಯನ್ನು ಸಚಿವರಿಗೆ ನೀಡಲಾಯಿತು.
ಮನವಿಯನ್ನು ಆಲಿಸಿದ ಸಚಿವರು, ಪತ್ರಿಕೋದ್ಯಮ ಶಿಕ್ಷಣದ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ, ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಪಿ.ಎಂ.ಚಿದಂಬರ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಮಹೇಶ್ ಮತ್ತಿತರರಿದ್ದರು.