ರಾಜ್ಯದ ವಿವಿಧೆಡೆಯಿಂದ ಭಾಗವಹಿಸಿದ ಕಾರ್ಯಕರ್ತರು 
ರಾಜ್ಯ

ಸಾರ್ವಭೌಮತ್ವಕ್ಕಾಗಿ ಜಾಗೃತಿ ಜಾಥಾ / ANEKAL

ಆನೇಕಲ್​ : ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆಯಿಂದ ಕನ್ನಡಿಗರ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ಭಾನುವಾರ ಹಮ್ಮಿಕೊಂಡಿದ್ದ ಬೃಹತ್​ ಕಾಲ್ನಡಿಗೆ ಜಾಥಾದಲ್ಲಿ ರಾಜ್ಯದ ವಿವಿಧೆಡೆಯಿಂದ ಅಧಿಕ ಮಹಿಳೆಯರು ಭಾಗವಹಿಸಿ ಗಮನ ಸೆಳೆದರು.
ಅತ್ತಿಬೆಲೆ ವೃತ್ತದಲ್ಲಿ ಪ್ರಾರಂಭವಾದ ಜಾಥಾ ಕನ್ನಡ ಪರ ಘೋಷಣೆ ಕೂಗುತ್ತಾ ಅತ್ತಿಬೆಲೆ ಗಡಿಯವರೆಗೂ ಸಾಗಿದರು. ತಮಟೆ ಸದ್ದಿಗೆ ಕನ್ನಡ ಪರ ಕಾರ್ಯಕರ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಬೆಳಗಾವಿ, ಕೋಲಾರ, ತುಮಕೂರು ಸೇರಿ ರಾಜ್ಯ ವಿವಿಧೆಡೆಯಿಂದ ಜಾಗೃತಿ ವೇದಿಕೆಯ ಕಾರ್ಯಕರ್ತರು ಆಗಮಿಸಿದ್ದರು.
ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಿ.ಶಿವಣ್ಣ, ರಾಜ್ಯದಲ್ಲಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸಬೇಕು. ಭಾಷೆ ಬಳಸುವುದರಿಂದ ಬೆಳೆಸಲು ಸಾಧ್ಯವಿದೆ. ಕನ್ನಡ ಜಾಗೃತಿ ವೇದಿಕೆಯು ಕನ್ನಡ ಪರ ಧ್ವನಿಯಾಗಿದ್ದು, ಹಲವು ಹೋರಾಟಗಳನ್ನು ರೂಪಿಸಿದೆ. ಕನ್ನಡಿಗರ ಏಕತೆಯನ್ನು ಸಾರಲು ಜಾಥಾ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್​ ದೇವ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದಾರೆ. ಆದರೆ ಇತ್ತೀಚೆಗೆ ನಗರೀಕರಣದ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಕನ್ನಡಿಗರೇ ಅನಾಥರಾಗುತ್ತಿದ್ದಾರೆ. ರಾಜ್ಯ ಇತರೆ ಗಡಿ ರಾಜ್ಯಗಳ ಪ್ರಭಾವಕ್ಕೆ ಒಳಗಾಗಿದೆ. ಆದರೆ ಆನೇಕಲ್​ ತಾಲೂಕಿನ ಅತ್ತಿಬೆಲೆ ಗಡಿಯು ತಮಿಳುನಾಡಿನ ಪ್ರಭಾವಕ್ಕೆ ಒಳಗಾಗಿಲ್ಲ. ಕಾವೇರಿ, ಭೂವಿವಾದ, ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ಗಡಿಭಾಗ ಅತ್ತಿಬೆಲೆಯಲ್ಲಿ ಹೋರಾಟಗಳು ನಿರಂತರವಾಗಿದೆ ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಹಲವು ಬಾರಿ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಪಟಾಪಟ್​ ಪ್ರಕಾಶ್​, ಜೆಡಿಎಸ್​ ತಾಲೂಕು ಅಧ್ಯಕ್ಷ ಎಚ್​.ಸಿ.ದೇವೇಗೌಡ, ನಾಗರಾಜು ಸೋನಿ, ಪಟಾಪಟ್​ ಶ್ರೀನಿವಾಸ್​, ಅತ್ತಿಬೆಲೆ ಮುರಳಿ, ಆರ್​.ಎಂ.ಎಸ್​.ರವಿ, ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ಅಧ್ಯಕ್ಷ ಎಸ್​.ಕೆ.ಗೌರೀಶ್​, ಮಹಿಳಾ ಘಟಕದ ಅಧ್ಯಕ್ಷೆ ವತ್ಸಲಾ, ಪ್ರಧಾನ ಕಾರ್ಯದರ್ಶಿ ಕವಿತಾ ಪೇಟೇಮಠ್​, ಉಪಾಧ್ಯಕ್ಷೆ ಲಕ್ಷ್ಮೀ ಹುದಲಿ, ಮುಖಂಡರಾದ ಅಗ್ನಿ ವೆಂಕಟೇಶ್​, ಬಳಗಾರನಹಳ್ಳಿ ಕುಮಾರ್​, ಕೆ.ನಾಗರಾಜ್​, ಮಂಜುನಾಥ್​, ಮಧುಕುಮಾರ್​, ಜಾವೇದ್​, ಸತೀಶ್​, ಸೌಭಾಗ್ಯಾ ಇದ್ದರು.
ಗಡಿಗೋಪುರವು ಅಸ್ಮಿತೆಯ ರೂಪಕ : ಅತ್ತಿಬೆಲೆ ಗಡಿಗೋಪುರವು ಅಸ್ಮಿತೆಯ ರೂಪಕ. ಮೈಸೂರು ಸಂಸ್ಥಾನದ ಹೆಗ್ಗುರುತಾಗಿದೆ. ಗಂಡಬೇರುಂಡ ಚಿಹ್ನೆ ಅತ್ತಿಬೆಲೆ ಗಡಿ ಗೋಪುರದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂತಹ ಕಟ್ಟಡಗಳು ಇರಬಾರದು ಎಂದು ಕೆಲ ಇಲಾಖೆಗಳು ತಿಳಿಸುತ್ತಿವೆ. ಗಡಿಗೋಪುರಕ್ಕೆ ಬಂದರೆ ಕನ್ನಡಿಗರು ದಂಗೆ ಏಳಬೇಕಾಗುತ್ತದೆ. 1993ರಲ್ಲಿ ಕನ್ನಡ ಗಡಿ ಗೋಪುರದ ಮೇಲೆ ಕನ್ನಡ ಜಾಗೃತಿ ವೇದಿಕೆಯು ಕನ್ನಡ ಬಾವುಟ ಹಾರಿಸಿದ್ದರು, 32 ವರ್ಷಗಳಿಂದ ನಿರಂತರವಾಗಿ ಧ್ವಜ ರಾರಾಜಿಸುತ್ತಿದೆ. ಸರ್ಕಾರಿ ಶಾಲೆಗಳ ಉಳಿವಿಗೆ ಆದ್ಯತೆ ನೀಡಬೇಕು. ಸಂಘಟನೆಗಳಲ್ಲಿ ಮಹಿಳೆಯರು ಹೆಚ್ಚು ಪ್ರಾತಿನಿಧ್ಯ ನೀಡಿದಾಗ ಮುಂಚೂಣಿಗೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಜಾಗೃತಿ ವೇದಿಕೆಯು ರಾಜ್ಯಾದ್ಯಂತ ಮಹಿಳಾ ಘಟಕ ಸ್ಥಾಪಿಸಲು ಆದ್ಯತೆ ನೀಡಲಾಗಿದೆ ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್​ ದೇವ ಹೇಳಿದರು.