ಅಗ್ನಿ ಅವಘಡದಿಂದ ಪಾರಾಗುವ’ ಬಗ್ಗೆ ಅರಿವು  
ರಾಜ್ಯ

ಅಗ್ನಿ ಅವಘಡದಿಂದ ಪಾರಾಗುವ ಬಗ್ಗೆ ಸನ್ನದುದಾರರಿಗೆ ಅರಿವು-fire safety

ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸಹಯೋಗದಲ್ಲಿ ಅಬಕಾರಿ ಇಲಾಖೆ, ರೆಸಿಡೆನ್ಸಿ ರಸ್ತೆಯ ಮೆಯೋಹಾಲ್ ಅಗ್ನಿಶಾಮಕ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅಗ್ನಿ ಅವಘಡದಿಂದ ಪಾರಾಗುವ’ ಬಗ್ಗೆ ಸನ್ನದುದಾರರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಬೆಂಗಳೂರು ನಗರ ಜಿಲ್ಲೆ-4(ಬಿಯುಡಿ) ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಮದ್ಯದಂಗಡಿ ಮತ್ತು ಪಬ್‌ನಲ್ಲಿ ತಕ್ಷಣ ಅಗ್ನಿ ಅವಘಡ ಸಂಭವಿಸಿದರೆ ಏನು ಕ್ರಮಕೈಗೊಳ್ಳಬೇಕು, ಮೊದಲೇ ಬೆಂಕಿ ಅನಾಹುತ ಪತ್ತೆ ಹಚ್ಚುವ ತಡೆಯುವ ವಿಧಾನಗಳು, ರಕ್ಷಣಾ ಕ್ರಮಗಳು ಮತ್ತು ಸರ್ಕಾರ ನಿಗದಿಪಡಿಸಿರುವ ಕಡ್ಡಾಯ ಸುರಕ್ಷತಾ ಮಾನದಂಡಗಳ ಪಾಲನೆ ಕುರಿತು ಮಾಹಿತಿ ಒದಗಿಸಿದರು.
ಅಬಕಾರಿ ಉಪಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಮಾತನಾಡಿ, ರಾಜ್ಯಾದ್ಯಂತ ಪಬ್ ಮತ್ತು ಬಾರ್‌ಗಳಲ್ಲಿ ಅಗ್ನಿ ಅನಾಹುತ ತಡೆಯುವ ಬಗ್ಗೆ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಹಾಗಾಗಿ, ಬೆಂಗಳೂರು ನಗರ ಜಿಲ್ಲೆ-4 ವ್ಯಾಪ್ತಿಯಲ್ಲಿ ಸನ್ನದುದಾರರಿಗೆ ಅಗ್ನಿ ಅವಘಡ ಕುರಿತು ಅರಿವು ಮೂಡಿಸಲಾಗುತ್ತಿದೆ. ಎಲ್ಲ ಮಾದರಿಯ ಮದ್ಯದಂಗಡಿಗಳು ಅಗ್ನಿ ಸುರಕ್ಷತೆ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಪಾಲಿಸದಿರುವ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸುನೀಲ್ ಕುಮಾರ್, ಬಿಯುಡಿ-4 ಅಬಕಾರಿ ಅಧೀಕ್ಷಕ ಮುಜಾವರ್, ಉಪ ಅಧೀಕ್ಷಕಿ ಕಾಂತಕುಮಾರ್, ನಿರೀಕ್ಷಕ ಸೋಮಶೇಖರ್ ಮತ್ತಿತರರಿದ್ದರು.