ಡಿಸಿಎಂ ಡಿ.ಕೆ.ಶಿವಕುಮಾರ್ 
ರಾಜ್ಯ

ರಾಜ್ಯ ಸರ್ಕಾರದಿಂದ ಎಸ್‌ಐಆರ್ ಬಗ್ಗೆ ಜಾಗೃತಿ

ಬೆಂಗಳೂರು : ಜವಾಬ್ದಾರಿಯುತ ಸರ್ಕಾರವಾಗಿ ಕಾಂಗ್ರೆಸ್ ಜನರಿಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಬಗ್ಗೆ ಜಾಗೃತಿ ಮೂಡಿಸಬೇಕು. ಆ ಕೆಲಸ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಭಾನುವಾರ ಸದಾಶಿವನಗರ ನಿವಾಸ ಮತ್ತು ಖಾಸಗಿ ಹೊಟೇಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯದ ಎಲ್ಲಾ ಜನರ ಹಕ್ಕು ಉಳಿಸಲು ಪಕ್ಷದ ಮುಖಂಡರ ಸಭೆ ಕರೆಯಲಾಗಿದೆ. ಚುನಾವಣಾ ಆಯೋಗ ನೀಡುವ ಅರ್ಜಿ ತುಂಬಿಸಿ ದಾಖಲೆ ಸಮೇತ ವಾಪಸ್ ನೀಡಿದವರ ಮತ ಮಾತ್ರ ಉಳಿಯುತ್ತದೆ, ಅರ್ಜಿ ವಾಪಸ್ ನೀಡದವರ ಮತದಾನದ ಹಕ್ಕು ನಷ್ಟವಾಗಲಿದೆ. ಈ ಬಗ್ಗೆ ಬಿಎಲ್ಎಗಳ ಮೂಲಕ ನಾವು ಇವುಗಳನ್ನು ಖಾತರಿಪಡಿಸಬೇಕಾಗಿದೆ ಎಂದರು.
ಎಸ್‌ಐಆರ್‌ನಿಂದ ಈ ದೇಶದಲ್ಲಿ ಸಾಕಷ್ಟು ಅನಾಹುತಗಳು ನಡೆಯುತ್ತಿವೆ. ಈ ಬಗ್ಗೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಬಡ, ಸಾಮಾನ್ಯರಿಗೆ ಎಸ್‌ಐಆರ್ ಬಗ್ಗೆ ಪರಿಚಯ ಮಾಡಿಕೊಡಬೇಕಿದೆ. ಒಂದೊಂದು ರಾಜ್ಯದಲ್ಲಿ 50, 60 ಹಾಗೂ 90 ಲಕ್ಷದವರೆಗೆ ಮತಗಳನ್ನು ತೆಗೆದುಹಾಕಲಾಗುತ್ತಿದೆ. ಕರ್ನಾಟಕದಲ್ಲೂ ಎಸ್‌ಐಆರ್ ಪ್ರಾರಂಭವಾಗುತ್ತಿದೆ.
ಮತದಾನದ ಹಕ್ಕನ್ನು ಕಳೆದುಕೊಂಡರೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಗೃಹಲಕ್ಷ್ಮಿ ಯೋಜನೆ ಹಣ, ಪಿಂಚಣಿ, ಮನೆ, ಜಮೀನು ಸೇರಿದಂತೆ ಸರ್ಕಾರದ ಯೋಜನೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಸಲುವಾಗಿ ಸರ್ಕಾರ ಜನರಿಗೆ ಬೇಕಾದ ದಾಖಲೆಗಳನ್ನು ಒದಗಿಸಿಕೊಡಬೇಕು. ಇದು ಜವಾಬ್ದಾರಿಯುತ ಸರ್ಕಾರದ ಕೆಲಸ. ಕೇರಳದಲ್ಲಿ ಇದೇ ರೀತಿ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.