Avoid shortage of seeds and fertilizers
ಮುಳಬಾಗಿಲು: ಮುಂಗಾರು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಹಾಗಾಗಿ ರೈತರಿಗೆ ತೊಂದರೆಯಾಗದಂತೆ ಬಿತ್ತನೆ ಬೀಜ, ನೆಲಗಡಲೆ (ಶೇಂಗಾ) ಹಾಗೂ ರಸಗೊಬ್ಬರ ಅಭಾವವನ್ನು ತಪ್ಪಿಸಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣದ ಮುಖಂಡರು ತಾಪಂ ಇಒ ಎನ್.ವಿ.ಬಾಬು ಅವರ ಮೂಲಕ ಸರ್ಕಾರಿಕ್ಕೆ ಮನವಿ ಸಲ್ಲಿಸಿದರು.
ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕೊತ್ತಮೀರಿ ಮಂಜುನಾಥ್ ಮಾತನಾಡಿ, ಈಗ ಸಚಿವರಾಗಿರುವ ಶಾಸಕರಿಗೆ ಹಣ ಸಂಪಾದಿಸುವ ಇಲಾಖೆಗಳೇ ಬೇಕು. ಆದರೆ, ಕೃಷಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಹಕಾರ, ಕನ್ನಡ ಮತ್ತು ಸಂಸತಿ ಇಲಾಖೆ, ಸಕ್ಕರೆ ಸಚಿವ ಸ್ಥಾನ ಯಾರಿಗೂ ಬೇಡವಾಗಿದೆ ಎಂದು ಛೇಡಿಸಿದರು.
ಮೊದಲು ರಾಜ್ಯದ ಅಭಿವೃದ್ಧಿಗಾಗಿ ಈ ಖಾತೆಗಳನ್ನು ಮೊದಲು ಹಂಚಿಕೆ ಮಾಡಿ ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಉಳಿವಿಗಾಗಿ ರಾಜ್ಯಾದ್ಯಂತ ಎಲ್ಕೆಜಿ, ಯುಕೆಜಿ ಪ್ರಾರಂಭಿಸಿ ರೈತರ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದರು.
ಜಿಲ್ಲಾ ಮುಖಂಡರಾದ ಎಲ್. ಎನ್. ಬಾಬು, ಧನರಾಜ್, ವಿಶ್ವನಾಥ್ ರೆಡ್ಡಿ, ಸತೀಶ್, ಮುಳಬಾಗಿಲು ತಾಲೂಕು ಅಧ್ಯಕ್ಷ ಕಾಡುಕಚ್ಚನಹಳ್ಳಿ ವಿಶ್ವನಾಥ್ ಗೌಡ, ತಾಲೂಕು ಮುಖಂಡರಾದ ಪ್ರಭು, ಸುರೇಂದ್ರ ಇದ್ದರು.