ನಾಡು-ನುಡಿಗೆ ಆಟೋ ಚಾಲಕರ ಕೊಡುಗೆ ಅನನ್ಯ kannada
- ಸಾಮರಸ್ಯಕ್ಕೆ ಮತ್ತೊಂದು ಹೆಸರೇ ಕನ್ನಡಿಗರು
- ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿಕೆ
ರಾಮನಗರ: ಆಟೋಚಾಲಕರು ನಿತ್ಯ ಜೀವನದಲ್ಲಿ ಕನ್ನಡ ಬಳಸುತ್ತಾರೆ. ಕನ್ನಡ ನಾಡು-ನುಡಿ ರಕ್ಷಣೆ ಹಾಗೂ ಬಳಕೆಯಲ್ಲಿ ಆಟೋ ಚಾಲಕರ ಪಾತ್ರ ಪ್ರಮುಖವಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು. kannada
ರಾಮನಗರದ ಹಳೇ ಬಸ್ ನಿಲ್ದಾಣ ಕೋರ್ಟ್ ರಸ್ತೆಯಲ್ಲಿರುವ ವಿನಾಯಕ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡು, ನುಡಿ ಉಳಿವಿನ ಹಿಂದೆ ಆಟೋ ಚಾಲಕ ಮತ್ತು ಮಾಲೀಕರ ಶ್ರಮ ಹೆಚ್ಚಿದೆ. ಕರ್ನಾಟಕದಲ್ಲಿ ಹುಟ್ಟಿದ ನಾವೆಲ್ಲರೂ ಕನ್ನಡತಾಯಿ ಮಕ್ಕಳು. ಹಾಗಾಗಿ ನಾವೆಲ್ಲ ಒಂದೇ ಎಂಬ ಭಾವನೆ, ಸಾಮರಸ್ಯದಿಂದ ಬದುಕಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಮಾತನಾಡಿ, ನೆಲ, ಜಲ, ಭಾಷೆಯ ರಕ್ಷಣೆಗೆ ನಾವೆಲ್ಲರೂ ಪಣ ತೊಡಬೇಕಿದೆ. ನವೆಂಬರ್‌ನಲ್ಲಿ ಮಾತ್ರ ರಾಜ್ಯೋತ್ಸವವಾಗದೆ ವರ್ಷವಿಡೀ ನಿತ್ಯೋತ್ಸವವಾಗಬೇಕು. ಈ ನಿಟ್ಟಿನಲ್ಲಿ ಡಿ.22ರಂದು ನಗರಸಭೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ರೇಷ್ಮೆನಾಡಿನಲ್ಲಿ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಭೂತಿಕೆರೆ ಶಿವಲಿಂಗಯ್ಯ, ವಲಯ ಅರಣ್ಯಾಧಿಕಾರಿ ಮನ್ಸೂರ್ ಅಹ್ಮದ್, ಮುಖಂಡರಾದ ಜನತಾ ನಾಗೇಶ್, ಮಹದೇವಯ್ಯ, ಪೈಂಟ್ ರಾಜಣ್ಣ, ಹಾರ್ಡ್‌ವೇರ್ ಮಹದೇವಯ್ಯ, ಪುಟ್ಟಣ್ಣ, ರಾಜ್ಯೋತ್ಸವ ಸಮಿತಿ ರೇವಣ್ಣ, ಆಟೋ ಚಂದ್ರು, ರೇವಣಸಿದ್ದಯ್ಯ, ವೀರಭದಯ್ಯ, ಸುರೇಶ್, ನವೀನ್, ಜಯಶಂಕರ, ಯೋಗೇಶ್, ತಿಮ್ಮೇಗೌಡ, ಮಹದೇವ್, ಕಾಂತರಾಜು, ನಾಗೇಶ್ ಇದ್ದರು.