ಗುಳೇದಗುಡ್ಡದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ ಎಸ್.ಎ್. ಬೊಮ್ಮಣ್ಣವರ ಅವರ ಅಧ್ಯಕ್ಷತೆಯಲ್ಲಿ ಅಂಗವಿಕಲರ ಕುಂದು-ಕೊರತೆ ಸಭೆ ನಡೆಯಿತು. ಅಂಗವಿಕಲರ ಸಂಘದ ಅಧ್ಯಕ್ಷ ಹುಚ್ಚೇಶ ಯಂಡಿಗೇರಿ, ತಾಲೂಕಾ ವಿವಿದೊದ್ಧೇಶ ಕಾರ್ಯಕರ್ತ ಮಹಾಂತೇಶ ಪಾಟೀಲ, ಸಂತೋಷ ಯರಗುಂಟಿ ಇತರರಿದ್ದರು. 
ರಾಜ್ಯ

ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಿ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಬೊಮ್ಮಣ್ಣವರ ಸೂಚನೆ
  • ಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್
ಗುಳೇದಗುಡ್ಡ: ಸರ್ಕಾರದ ಆದೇಶದಂತೆ ಎಲ್ಲ ಇಲಾಖೆಗಳಲ್ಲಿ ನಿಗದಿ ಪಡಿಸಿದ ಒಟ್ಟು ಅನುದಾನದಲ್ಲಿ ಶೇ. 5ರಷ್ಟು ಅನುದಾನವನ್ನು ಕಡ್ಡಾಯವಾಗಿ ಖರ್ಚು ಮಾಡಿ, ಅಗತ್ಯ ಮಾಹಿತಿಯೊಂದಿಗೆ ಮುಂದಿನ ಸಭೆಗೆ ಹಾಜರಾಗಬೇಕು ಎಂದು ತಹಸೀಲ್ದಾರ್ ಎಸ್. ಬೊಮ್ಮಣ್ಣವರ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಹಸೀಲ್ದಾರರ ಕಚೇರಿಯಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಅಂಗವಿಕಲರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು. ಅಗತ್ಯ ಮಾಹಿತಿ ಇಲ್ಲದೇ ಕಾಟಾಚಾರಕ್ಕೆ ಸಭೆಗೆ ಹಾಜರಾಗಬೇಡಿ ಎಂದು ಎಚ್ಚರಿಸಿದರು.
ಅಂಗವಿಕಲರು ಸಮಸ್ಯೆಗಳಿದ್ದಲ್ಲಿ ಲಿಖಿತ ಅಥವಾ ನೇರವಾಗಿ ಸಂಪರ್ಕಿಸಬೇಕು. ಇದುವರೆಗೆ ಮೂರು ತಿಂಗಳ ಅಂಗವಿಕಲರ ಪೋಷಣಾ ಭತ್ಯೆ ಅನುದಾನ ಜಮಾ ಆಗಿಲ್ಲ. ಹಂತ ಹಂತವಾಗಿ ಜಮಾ ಮಾಡಲಾಗುವುದು. ಕೃಷಿ, ಪಶು ಸಂಗೋಪನೆ, ಹೆಸ್ಕಾಂ ಇಲಾಖೆಯವರು ಲಾನುಭವಿ ಆಯ್ಕೆ ಮಾಡುವುದಾಗಿ ನಿಯಮಾನುಸಾರ ಅಂಗವಿಕಲರಿಗೆ ನೀಡಬೇಕು. ಬಸ್ ನಿಲ್ದಾಣದಲ್ಲಿ ವಿಶೇಷ ಶೌಚಗೃಹ ನಿರ್ಮಾಣ ಮಾಡಬೇಕು.
 ಬಸ್‌ನಲ್ಲಿ ವಾಸ ಸ್ಥಳದಿಂದ 100 ಕಿ.ಮೀ. ಪ್ರಯಾಣಿಸಲು ಅವಕಾಶ ಇದ್ದು, ಮಾನವೀಯತೆಯಿಂದ ವರ್ತಿಸಲು, ನಿಗದಿಪಡಿಸಿದ ಆಸನ ಕೂಡಲು ಅವಕಾಶ ಮಾಡಿಕೊಡಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ವಾರದಲ್ಲಿ ಒಂದು ದಿನ ಗುಳೇದಗುಡ್ಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯುಡಿಐಡಿ ಮೆಡಿಕಲ್ ಕ್ಯಾಂಪ್ ನಡೆಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಬಹುತೇಕ ಇಲಾಖೆ ಅಧಿಕಾರಿಗಳು ಗೈರು: ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ತಾ.ಪಂ, ಅರಣ್ಯ, ಖಜಾನೆ, ಪೊಲೀಸ್, ತೋಟಗಾರಿಕೆ, ಸಮಾಜ ಕಲ್ಯಾಣ, ಸೇರಿ ಹಲವಾರು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿದ್ದರು. ಎಲ್ಲ ಇಲಾಖೆಯ ಅಧಿಕಾರಿಗಳು ಮುಂದಿನ ಸಭೆಗೆ ಹಾಜರಾಗದಿದ್ದರೆ ಸಭೆಯನ್ನು ಬಹಿಷ್ಕರಿಸುವುದಾಗಿ ಅಂಗವಿಕಲರು ಎಚ್ಚರಿಕೆ ನೀಡಿದರು.
ಕರವೇ ತಾಲೂಕು ಅಧ್ಯಕ್ಷ ರವಿ ಅಂಗಡಿ, ತಾಲೂಕು  ಅಂಗವಿಕಲರ ಸಂಘದ ಅಧ್ಯಕ್ಷ ಹುಚ್ಚೇಶ ಯಂಡಿಗೇರಿ, ತಾಲೂಕು ವಿವಿಧೋದ್ಧೇಶ ಕಾರ್ಯಕರ್ತ ಮಹಾಂತೇಶ ಪಾಟೀಲ, ಸಂತೋಷ ಯರಗುಂಟಿ, ಎಸ್.ವೈ. ಹೊಸಮನಿ, ಎಂ.ಎಂ. ದೋಟೇಗಾರ, ಯಮನಪ್ಪ ಕಂಬಾರ, ಪರಶುರಾಮ ಕಲಾಲ, ಹುಚ್ಚಮ್ಮ ಭಂಗಿ, ಮಂಜುಳಾ ಹಡಪದ, ಕೋನವ್ವ ಭಗವತಿ, ಪ್ರವೀಣ ಅರುಹುಣಶಿ, ಸಾಗರ ಬಡಿಗೇರ, ಬೀರಪ್ಪ ಕುರಿ, ಎ.ವೈ. ಅಳ್ಳೆಪ್ಪನವರ, ರಂಗಪ್ಪ ಓಣಿ, ಭೀಮಪ್ಪ ನೀಲನ್ನವರ ಸೇರಿ ಇತರರಿದ್ದರು.
"

ಅಂಗವಿಕಲರ ಕುಂದು-ಕೊರತೆ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು. ಕಾಟಾಚಾರದ ಸಭೆ ಆಗಬಾರದು. ಸಭೆಗೆ ಹಾಜರಾಗುವವರು ಸರಿಯಾದ ಮಾಹಿತಿಯೊಂದಿಗೆ ಹಾಜರಾಗಿ. ಗೈರಾದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಿ. ಗುಳೇದಗುಡ್ಡದಲ್ಲಿ ಅಂಗವಿಕಲರ ಸಮುದಾಯ ಭವನ ನಿರ್ಮಾಣ ಮಾಡಬೇಕು. 

 ಹುಚ್ಚೇಶ ಯಂಡಿಗೇರಿ ತಾಲೂಕಾಧ್ಯಕ್ಷ ಅಂಗವಿಕಲರ ಸಂಘ, ಗುಳೇದಗುಡ್ಡ.