ವಿಜಯಪುರ ನಗರದಲ್ಲಿ ಸಚಿವ ಎಂ.ಬಿ. ಪಾಟೀಲರ ಮನೆ ಎದುರಿನ ರಸ್ತೆ ಮಧ್ಯೆ ಧರಣಿ ನಿರತ ಹುಣಶ್ಯಾಳ ಪಿಬಿ ಮಠದ ಸಂಗನಬಸವೇಶ್ವರ ಸ್ವಾಮೀಜಿ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.
- ಪಿಪಿಪಿ ವಿರುದ್ಧ ಭುಗಿಲೆದ್ಧ ಆಕ್ರೋಶ
- ಸರ್ಕಾರಿ ವೈದ್ಯಕೀಯ ಕಾಲೇಜ್‌ಗೆ ಹೆಚ್ಚಿದ ಬೇಡಿಕೆ
- ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು
ವಿಜಯಪುರ: ‘ಮಂತ್ರಿಗಳ ಮನೆ ಮುಂದೆ ಧರಣಿಗೆ ಯತ್ನ, ಹೋರಾಟ ಹತ್ತಿಕ್ಕಿದ ಪೊಲೀಸರು, ಖಾವಿ ಧಾರಿಯನ್ನು ತಳ್ಳಾಡಿದ ಖಾಕಿಪಡೆ, ಸಿಟ್ಟಿಗೆದ್ದ ಸ್ವಾಮೀಜಿಯಿಂದ ಪೊಲೀಸಪ್ಪನಿಗೆ ಕಪಾಳಮೋಕ್ಷ, ಹೋರಾಟಗಾರರನ್ನು ವಶಕ್ಕೆ ಪಡೆದು ವ್ಯಾನ್‌ನಲ್ಲಿ ಕರೆದೊಯ್ದ ರಕ್ಷಣಾ ಸಿಬ್ಬಂದಿ....’
ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿ ಕೈ ಬಿಟ್ಟು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಆಗ್ರಹಿಸಿ ಕಳೆದ 106 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ ಮುಂದುವರಿದ ಭಾಗವಾಗಿ ಗುರುವಾರ ಹಮ್ಮಿಕೊಂಡಿದ್ದ ‘ಮಂತ್ರಿಗಳ ಮನೆ ಮುಂದೆ ಧರಣಿ’ ಹೋರಾಟದಲ್ಲಿ ಕಂಡು ಬಂದ ಸನ್ನಿವೇಶಗಳಿವು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಮನೆ ಮುಂದೆ ‘ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ’ ನೇತೃತ್ವದಲ್ಲಿ ಧರಣಿಗೆ ಮುಂದಾಗುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದರು. ಪ್ರತಿಭಟನಾಕಾರರು ಮನೆ ಮುಂದಿನ ರಸ್ತೆ ಮಧ್ಯದಲ್ಲಿಯೇ ಕುಳಿತ ಘೋಷಣೆ ಮೊಳಗಿಸಿದರು. ಈ ವೇಳೆ ಅವರನ್ನು ಹತ್ತಿಕ್ಕಲು ನೋಡಿದಾಗ ಆಕ್ರೋಶ ಭುಗಿಲೆದ್ದಿತು. ಹೋರಾಟದಲ್ಲಿ ಪಾಲ್ಗೊಂಡಿದ್ದ ಬಸವನಬಾಗೇವಾಡಿಯ ಹುಣಶ್ಯಾಳ ಪಿಬಿ ಮಠದ ಸಂಗನಬಸವೇಶ್ವರ ಸ್ವಾಮೀಜಿಯನ್ನು ತಳ್ಳಾಡಿದ ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಯಿತಲ್ಲದೇ ಸಿಟ್ಟಿಗೆದ್ದ ಸ್ವಾಮೀಜಿ ಸಮವಸ್ತ್ರದಲ್ಲಿರದ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿಬಿಟ್ಟರು.
ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಚ್ಚೆತ್ತ ಖಾಕಿಪಡೆ ಮಹಿಳಾ ಪೊಲೀಸರನ್ನು ಬಿಟ್ಟು ಮಹಿಳಾ ಹೋರಾಟಗಾರರನ್ನು ಹಾಗೂ ಇನ್ನಿತರ ಹೋರಾಟಗಾರರನ್ನು ಬಲವಂತವಾಗಿ ಎಬ್ಬಿಸಿ ವ್ಯಾನ್‌ನಲ್ಲಿ ಕರೆದೊಯ್ದರು. ಈ ವೇಳೆ ಮಹಿಳಾ ಹೋರಾಟಗಾರರ ಜುಟ್ಟು ಹಿಡಿದು ಎಳೆದಾಡಿದ ದೃಶ್ಯ ಅಮಾನವೀಯವಾಗಿತ್ತು. ಸ್ವಾಮೀಜಿಯನ್ನು ಹಿಡಿದು ವ್ಯಾನ್‌ನಲ್ಲಿ ದಬ್ಬಲಾಯಿತು. ಈ ವೇಳೆ ‘ನಾವೇನು ವೈಯಕ್ತಿಕ ಹಿತಾಸಕ್ತಿಗಾಗಿ ಧರಣಿ ನಡೆಸುತ್ತಿಲ್ಲ, ಸರ್ಕಾರಿ ವ್ಯವಸ್ಥೆಯ ಉಳಿವಿಗಾಗಿ ಧರಣಿ ನಡೆಸುತ್ತಿದ್ದೇವೆ, ಬಿಟ್ಟು ಬಿಡಿ’ ಎಂದು ಹೋರಾಟಗಾರರು ಅಂಗಲಾಚಿದರಾದರೂ ಧರಣಿಗೆ ಅವಕಾಶ ಸಿಗಲಿಲ್ಲ. ಮುಂದಿನ ಹಂತದಲ್ಲಿ ಸಚಿವ ಶಿವಾನಂದ ಪಾಟೀಲರ ಮನೆ ಎದುರು ಧರಣಿ ಹಮ್ಮಿಕೊಳ್ಳುತ್ತಿರುವುದಾಗಿ ‘ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ’ ಮುಖಂಡರು ತಿಳಿಸಿದ್ದಾರೆ.