accused 
ರಾಜ್ಯ

ಪತ್ನಿ ಮೇಲೆ ಆಸ್ಯಿಡ್ ಎರಚಿ ಮಾರಕಾಸಗಳಿಂದ ಹಲ್ಲೆ, ಕೊಲೆಗೆ ಯತ್ನ

ರವಿ ನಾಯಕ್

ಪ್ರಮುಖ ಮುಖ್ಯಾಂಶಗಳು

  • ಸಂಚಾರ ಠಾಣೆ ಪಿಎಸ್‌ಐನಿಂದ ಆರೋಪಿ ಬಂಧನ
  • ತಮಿಳುನಾಡು ಮೂಲದ ಆರೋಪಿ ವೆಂಕಟೇಶನ್
ಬೆಂಗಳೂರು: ವೈಯಕ್ತಿಕ ಕಾರಣದಿಂದ ದೂರವಾಗಿದ್ದ ಪತ್ನಿ ಮೇಲೆ ಪತಿಯೇ ಆ್ಯಸಿಡ್ ದಾಳಿ ನಡೆಸಿದ್ದಾನೆ, ಬಳಿಕ ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವುದು ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತು.
ಜೆ.ಪಿ.ನಗರ ನಿವಾಸಿ ಮಧುಮಿತಾ(23) ಹಲ್ಲೆಗೊಳಗಾದ ಮಹಿಳೆ. ತಮಿಳುನಾಡು ಮೂಲದ ವೆಂಕಟೇಶನ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಜೆ.ಪಿ.ನಗರದಲ್ಲಿರುವ ನಾರಾಯಣ ಆಸ್ಪತ್ರೆ ಮುಂದೆ ಈ ದುರಂತ ನಡೆದಿದೆ. ಸ್ಥಳದಲ್ಲೇ ಕರ್ತವ್ಯದಲ್ಲಿದ್ದ ಸಂಚಾರ ಠಾಣೆ ಪಿಎಸ್‌ಐ ಆರೋಪಿಯನ್ನು ಬಂಧಿಸಿದ್ದಾರೆ.
ವೆಂಕಟೇಶ್ ಚೆನ್ನೈ ಆಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಪಶ್ಚಿಮ ಬಂಗಾಳ ಮೂಲದ ಮಧುಮಿತಾಳನ್ನು ಡೇಟಿಂಗ್ ಆ್ಯಪ್ ಮೂಲಕ ಪರಿಚಯಿಸಿಕೊಂಡಿದ್ದನು. ನಂತರ ಪರಸ್ಪರ ಪ್ರೀತಿಸಿ 2023ರಲ್ಲಿ ಮದುವೆಯಾಗಿದ್ದರು. ದಂಪತಿ ಮಧುರೈನಲ್ಲಿ ವಾಸವಾಗಿದ್ದರು. ವರ್ಷದ ಬಳಿಕ ಆರೋಪಿ ಪತ್ನಿಯ ಶೀಲ ಶಂಕಿಸಿ ಆಕೆ ಜತೆ ನಿತ್ಯ ಜಗಳ ಮಾಡುತ್ತಿದ್ದ. ಇದರಿಂದ ಬೆಸತ್ತ ಮಧುಮಿತಾ, ಒಂದೂವರೆ ವರ್ಷದ ಹಿಂದೆ ಪತಿಯಿಂದ ಬೇರೆಯಾಗಿ ಬೆಂಗಳೂರಿಗೆ ಬಂದು ಜೆ.ಪಿ.ನಗರದ ಪಿಜಿಯಲ್ಲಿ ವಾಸವಾಗಿದ್ದಳು. ನಾರಾಯಣ ಕ್ಲಿನಿಕ್‌ನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೂ ಆರೋಪಿ ಆಗಾಗ್ಗೆ ಕರೆ ಮಾಡಿ ಆಕೆಗೆ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನಿಂದ ಬೈಕ್‌ನಲ್ಲಿ ಬಂದಿದ್ದ ಆರೋಪಿ:

ಪತ್ನಿಯ ಮೇಲಿನ ದ್ವೇಷಕ್ಕೆ ತಮಿಳುನಾಡಿನಿಂದ ಬೈಕ್‌ನಲ್ಲೇ ಬಂದ ಆರೋಪಿ ವೆಂಕಟೇಶನ್, ಆ್ಯಸಿಡ್, ಚಾಕು ಮತ್ತು ಮಾರಕಾಸ್ತ್ರ ತೆಗೆದುಕೊಂಡು ಬಂದಿದ್ದನು. ಮಧುಮಿತಾ, ಮೊದಲ ಪಾಳಿಯ ಕೆಲಸಕ್ಕೆ ಬೆಳಗ್ಗೆಯೇ ಕ್ಲಿನಿಕ್‌ಗೆ ಬಂದು 9ಗಂಟೆ ಸುಮಾರಿಗೆ ಆಸ್ಪತ್ರೆ ಸಮೀಪದಲ್ಲೇ ಉಪಾಹಾರಕ್ಕೆ ಹೋಗುತ್ತಿದ್ದರು. ಆಗ ಆರೋಪಿ ಹೆಲ್ಮೆಟ್ ಧರಿಸಿಕೊಂಡೆ ಆಕೆ ಮೇಲೆ ದಾಳಿಗೆ ಮುಂದಾಗಿದ್ದಾನೆ. ಮಧುಮಿತಾ ತಪ್ಪಿಸಿಕೊಂಡು ಆಸ್ಪತ್ರೆಯ ಪಾರ್ಕಿಂಗ್ ಸ್ಥಳ್ಕಕೆ ಓಡಿಹೋಗಿದ್ದಾಳೆ. ಹಿಂಬಾಲಿಸಿಕೊಂಡು ಹೋಗಿದ್ದ ಆರೋಪಿ ಆ್ಯಸಿಡ್ ಎರಚಿದ್ದಾನೆ. ನಂತರ ಮಾರಕಾಸ್ತ್ರದಿಂದ ಆಕೆಯ ಕುತ್ತಿಗೆ ಹಾಗೂ ದೇಹದ ಇತರೆಡೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆಕೆಯ ರಕ್ಷಣೆಗೆ ಧಾವಿಸಿದ ಸ್ಥಳೀಯರ ಮೇಲೂ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ. ಈ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೇರೆಯಾಗಿವೆ.
ಆರೋಪಿಯ ಮಹಿಳೆ ಮೇಲೆ ಮಾರಕಾಸಗಳಿಂದ ಹಲ್ಲೆ ನಡೆಸುತ್ತಿರುವುದನ್ನು ಕಂಡ ಸ್ಥಳೀಯರು ಆತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲಿಯೇ ಇದ್ದ ಸಿಗ್ನಲ್ ಬಳಿ ಕರ್ತವ್ಯದಲ್ಲಿದ್ದ ಜೆ.ಪಿ.ನಗರ ಠಾಣೆಯ ಪಿಎಸ್‌ಐ ವೆಂಕಟೇಶ್, ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತೀವ್ರ ಗಾಯಗೊಂಡಿದ್ದ ಮಧುಮಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಧುಮಿತಾ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ವಂಶಿಕೃಷ್ಣ ತಿಳಿಸಿದ್ದಾರೆ.