ಬೆಳಗಾವಿ: ನಗರದ ಮಾರುಕಟ್ಟೆಯಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಅಂತಾರಾಜ್ಯದ ನಾಲ್ವರು ಆರೋಪಿಗಳನ್ನು ಸೋಮವಾರ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋವಾ ಮೂಲದ ಮೊಹಮ್ಮದ್ ಅರ್ಬಾಜ್ ಅದಮ್, ರೂಪೇಶ ವಾಕೋಡೆ, ಮೊಹಮ್ಮದ್ ಹುಸೇನ್ ಬಕ್ಷಿ, ಬಿಹಾರ ಮೂಲದ ಶ್ರವಣಕುಮಾರ ಟುನ್‌ಟುನ್‌ಮಲ್ಲಿ ಬಂಧಿತರು. ಖಡೇಬಜಾರ್ ಮಾರುಕಟ್ಟೆಯಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದನ್ನು ಗಮನಿಸಿದ ವ್ಯಾಪಾರಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಠಾಣೆ ಪಿಐ ಜೆ.ಎಂ.ಕಾಲಿಮಿರ್ಚಿ ಮತ್ತು ತಂಡ, ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 500 ರೂ. ಮುಖಬೆಲೆಯ 495 ನಕಲಿ ನೋಟು, 40 ಸಾವಿರ ರೂ. ಮೌಲ್ಯದ 4 ಮೊಬೈಲ್, 3 ಲಕ್ಷ ರೂ. ಮೌಲ್ಯದ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತರನ್ನು ಮಾ.27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.