ಖಮೇನಿ ಹತ್ಯೆ ಖಂಡಿಸಿ ಅಲೀಪುರದಲ್ಲಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ರೋಧಿಸುತ್ತಿರುವ ಜನ 
ರಾಜ್ಯ

ಖಮೇನಿ ಹತ್ಯೆಗೆ ಬಿಕ್ಕಿ ಬಿಕ್ಕಿ ಅತ್ತ ಅಲೀಫುರ ಜನ, ನಾಯಕನ ಗುಣಗಾನ

ಚಿಕ್ಕಬಳ್ಳಾಪುರ: ಇರಾನಿನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಹಿನ್ನೆಲೆಯಲ್ಲಿ ಗೌರಿಬಿದನೂರು ತಾಲೂಕಿನ ಅಲ್ಲೀಪುರದ ಜನರು ಬೀದಿಗಿಳಿದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಖಮೇನಿ ಹತ್ಯೆಯಾಗಿಲ್ಲ, ಹುತಾತ್ಮರಾಗಿದ್ದಾರೆ. ಧರ್ಮಕ್ಕಾಗಿ ಬಲಿದಾನ ಮಾಡಿದ್ದಾರೆ ಎಂದೆಲ್ಲಾ ರೋಧಿಸಿದ್ದಾರೆ.
ಅಮೇರಿಕಾ, ಇಸ್ರೇಲ್ ಜಂಟಿ ದಾಳಿಗೆ
ಇರಾನ್ ನಲ್ಲಿನ ಖಮೇನಿ ಮೃತಪಟ್ಟಿರುವುದು ಖಚಿತವಾಗಿದೆ.‌ ಇದನ್ನು ಇಲ್ಲಿನ ಜನರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.‌ ದುಃಖದ ಮಡುವಿನಲ್ಲಿದ್ದಾರೆ. ಒಂದು ರೀತಿಯಲ್ಲಿ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು ಇಲ್ಲಿನ ಜನರು ಮೂರು ದಿನ ಶೋಕಾಚರಣೆಗೆ ಕರೆ ನೀಡಿದ್ದಾರೆ. ಬೆಳಿಗ್ಗೆಯಿಂದಲೇ ಅಂಗಡಿ ವಹಿವಾಟುಗಳನ್ನು ಬಂದ್ ಮಾಡಿದ್ದು ಹುತಾತ್ಮ ಖಮೇನಿಗೆ ಅಲ್ಲಾಹುವಿನ ಸ್ವರ್ಗ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಗ್ರಾಮದಲ್ಲಿನ ಮುಸ್ಲಿಮರು ಕಪ್ಪು ಬಟ್ಟೆ ಧರಿಸಿ, ರೋಧಿಸುತ್ತಿರುವುದರ ಜತೆಗೆ. ಧರ್ಮಗುರು ಹಾಗೂ ಪರಮೋಚ್ಚ ನಾಯಕನನ್ನು ಹತ್ಯೆ ಮಾಡಿದ ಅಮೇರಿಕಾ, ಇಸ್ರೇಲ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಖಮೇನಿ ಹತ್ಯೆ ನಿಜಕ್ಕೂ ದುರದೃಷ್ಟಕರ. ‌ಇದನ್ನು ನಾವು‌ ಊಹಿಸಿರಲಿಲ್ಲ. ಅವರ ಸಾವಿನಿಂದ ತುಂಬಾ ನೋವಾಗುತ್ತಿದೆ. ಅವರು ಹತ್ಯೆಯಾಗಿಲ್ಲ. ಹುತಾತ್ಮರಾಗಿದ್ದಾರೆ ಎಂದು ಸ್ಥಳೀಯ ಮುಖಂಡ ಮಹಮದ್ ಕಣ್ಣೀರು ಸುರಿಸುತ್ತ ಗುಣಗಾನ ಮಾಡಿದರು.
ಅಲ್ಲೀಪುರದಲ್ಲಿನ ಜನರಿಗೂ ಇರಾನಿಗೂ ಅವಿನವಭಾವ ಸಂಬಂಧ ಹೊಂದಿದ್ದು ಇಲ್ಲಿನ ಅನೇಕರು ದುಬೈ, ಇರಾನ್ ರಾಜಧಾನಿ ಟೆಹರಾನ್, ಕುಮ್, ಮಶಾದ್ ಸೇರಿದಂತೆ ಹಲವೆಡೆ ವಿವಿಧ ನಗರಗಳಲ್ಲಿ ನೆಲೆಸಿದ್ದಾರೆ. ಇನ್ನೂ ಹತ್ಯೆಯಾಗಿರುವ ಖಮೇನಿ ಈ ಹಿಂದೆ 1986 ರಲ್ಲಿ ಅಲ್ಲೀಪುರಕ್ಕೆ ಭೇಟಿ ನೀಡಿದ್ದು ಇವರ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ.