ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿ ರಂಗಮಂದಿರದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಗೆ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಚಾಲನೆ ನೀಡಿದರು. ಹಾಡೋನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮುದ್ದುಕೃಷ್ಣಪ್ಪ, ಪುರುಷೋತ್ತಮ್, ನಾರಾಯಣಪ್ಪ, ಜೆಡಿಎಸ್ ಯುವ ನಾಯಕ ಉದಯ ಆರಾಧ್ಯ ಇದ್ದರು.
ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಹಾಡೋನಹಳ್ಳಿ ರಂಗಮಂದಿರದಲ್ಲಿ ಮಂಗಳವಾರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಯುವಕರು ಶಿಕ್ಷಣದಲ್ಲಿ ಮುಂದುವರಿದು ನಿಷ್ಠೆಯಿಂದ ಮುಂದಿನ ದಿನಗಳಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಉನ್ನತ ಸ್ಥಾನಕ್ಕೆ ಏರಿಸಬೇಕಾಗಿದೆ. ಕ್ರೀಡಾಪಟುಗಳು ಸೋಲು&ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಎಲ್ಲರ ಜತೆ ಗೌರವ ಮತ್ತು ಪ್ರೀತಿಯಿಂದ ನಡೆದುಕೊಳ್ಳಿ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ಹಾಡೋನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎ.ನಾಗರಾಜ್ ಮಾತನಾಡಿ, 50 ವರ್ಷಗಳಿಂದ ಹಾಡೋನಹಳ್ಳಿಯಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಆಡುತ್ತಾ ಬಂದಿದ್ದು, ಗ್ರಾಮದಲ್ಲಿ ಕಬಡ್ಡಿಗೆ ಹೆಸರಿದೆ. ಗ್ರಾಮದ ಹೆಚ್ಚು ಯುವಕರು ಮುಂದೆ ಬಂದರೆ ಕ್ರೀಡೆಗಳನ್ನು ಗ್ರಾಮಗಳಲ್ಲಿ ನೋಡಬಹುದು ಹಾಗೂ ಇತ್ತೀಚೆಗೆ ಯುವ ಸಮುದಾಯದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಆರ್ಭಟದಲ್ಲಿ ಕ್ರೀಡಾ ಮನೋಭಾವ ಕುಂಠಿತಗೊಳುತ್ತಿದೆ. ಮೊಬೈಲ್ನಲ್ಲಿ ಮುಳುಗುತ್ತಿರುವ ಯುವ ಸಮುದಾಯ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗುತ್ತಿರುವ ಆತಂಕ ಎದುರಾಗಿದೆ. ಯುವಕರು ಕ್ರೀಡೆಯಲ್ಲಿ ತೊಡಗುವುದರಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಉಲ್ಲಾಸ ಪಡೆದುಕೊಳ್ಳಬಹುದು ಎಂದು ಹೇಳಿದರು.
ಪಂದ್ಯಾವಳಿಯಲ್ಲಿ 30 ತಂಡಗಳು ಭಾಗವಹಿಸಿದ್ದವು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮುರಳಿ, ರೈತ ವ್ಯವಸಾಯ ಸೇವಾ ಸಂಘದ ಮಾಜಿ ಅಧ್ಯಕ್ಷ ಮುನೇಗೌಡ, ಹಾಡೋನಹಳ್ಳಿ ಗ್ರಾಪಂ ಮಾಜಿ ಸದಸ್ಯ ಅಶೋಕ್, ಕ್ರೀಡಾಪಟುಗಳು ಇದ್ದರು.