ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ಸಿ) ನಡೆದಿದ್ದ ನೇಮಕಾತಿ ಅಕ್ರಮದ ತನಿಖೆ ಪೂರ್ಣಗೊಳಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ಇದೀಗ ಆಯೋಗದ ಮಾಜಿ ಅಧ್ಯಕ್ಷ ಸೇರಿ 3 ಪ್ರಮುಖ ಆರೋಪಿಗಳಿಗೆ ಸೇರಿದ ಒಟ್ಟು 1.22 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.
ಹಗರಣದಲ್ಲಿ ಭಾಗಿಯಾಗಿದ್ದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ ಹಾಗೂ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾಗಿದೆ. ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಲವು ಎಫ್ಐಆರ್ಗಳ ಆಧಾರದ ಮೇಲೆ ಇ.ಡಿ. ತನಿಖೆ ಆರಂಭಿಸಿತ್ತು.
ತನಿಖೆಯಲ್ಲಿ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ ಹಾಗೂ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಇತರರೊಂದಿಗೆ ಸೇರಿ ಅಧಿಕಾರ ದುರುಪಯೋಗಪಡಿಸಿಕೊಂಡು, ಅಭ್ಯರ್ಥಿಗಳಿಗೆ ಹುದ್ದೆ ಮಾರಾಟ ಮಾಡಲು ಆಮಿಷವೊಡ್ಡಿ ಅಕ್ರಮವಾಗಿ ಹಣ ಪಡೆದಿರುವುದನ್ನು ಇ.ಡಿ ಪತ್ತೆ ಮಾಡಿದೆ. ಶಿವಶಂಕರಪ್ಪ ಸಾಹುಕಾರ್ ಅವರ ಸೂಚನೆಯಂತೆ, ಜ್ಞಾನೇಂದ್ರ ಕುಮಾರ್ 6 ಅಭ್ಯರ್ಥಿಗಳಿಗೆ 80 ಪ್ರಶ್ನೆಗಳ ಸರಿಯಾದ ಉತ್ತರ ಸಿದ್ಧಪಡಿಸಿದ್ದರು ಎನ್ನಲಾಗಿದೆ. ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಸೋರಿಕೆ, ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಕೀ ಉತ್ತರಗಳನ್ನು ಒದಗಿಸುವುದು ಹಾಗೂ 1:3 ಅರ್ಹತಾ ಪಟ್ಟಿಯ ಹಂತದಲ್ಲಿ ಗೌಪ್ಯ ಅಂಕಗಳನ್ನು ದುರುಪಯೋಗಪಡಿಸಿಕೊಂಡಿರುವುದು ಇ.ಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಹಂಚಿಕೆ!: 2026ರ ಜ.7ರಂದು ಅಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಪ್ರಶ್ನೆಪತ್ರಿಕೆಗಳನ್ನು ಸರಿಯಾದ ಉತ್ತರಗಳೊಂದಿಗೆ ತಮ್ಮ ಆಪ್ತ ಬಸವರಾಜ್ ಕನ್ನಾಳೆಗೆ ಸೋರಿಕೆ ಮಾಡಿದ್ದರು. ಜ.8ರಂದು ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಬೆಂಗಳೂರಿನ ಹೊರವಲಯದ ವಿಲ್ಲಾಗಳಲ್ಲಿ 10 ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಗಳನ್ನು ಹಂಚಿಕೆ ಮಾಡಿದ್ದರು. ಇದಕ್ಕಾಗಿ ಅಭ್ಯರ್ಥಿಗಳಿಂದ ಒಪ್ಪಂದದಂತೆ ತಲಾ 20 ರಿಂದ 40 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಮುಂಗಡವಾಗಿ ಹಣ ಸ್ವೀಕರಿಸಿ, ಉಳಿದ ಮೊತ್ತಕ್ಕೆ ಸಹಿ ಮಾಡಿದ ಖಾಲಿ ಚೆಕ್ಗಳು ಮತ್ತು ಪ್ರಾಮಿಸರಿ ನೋಟ್ಗಳನ್ನು ಪಡೆದುಕೊಳ್ಳಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಈ ಅಭ್ಯರ್ಥಿಗಳ ಒಎಂಆರ್ ಉತ್ತರ ಪತ್ರಿಕೆಗಳು ಕೆಪಿಎಸ್ಸಿ ಪ್ರಕಟಿಸಿದ್ದ ಆರಂಭಿಕ ಕೀ ಉತ್ತರ ಹೊಂದಿಕೆಯಾಗಿದ್ದವು. ಪರಿಷ್ಕೃತ ಕೀ ಉತ್ತರಗಳಲ್ಲಿ ತಪ್ಪು ಎಂದು ಗುರುತಿಸಲಾದ ಉತ್ತರಗಳೂ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳಲ್ಲಿ ಕಂಡುಬಂದಿದ್ದವು ಎಂದು ಇ.ಡಿ. ಪ್ರಕಟಣೆ ತಿಳಿಸಿದೆ.
ಲಕ್ಷಾಂತರ ರೂ. ಸಂಗ್ರಹ!: ಈ ಅಕ್ರಮದಲ್ಲಿ ಶಿವಶಂಕರಪ್ಪ ಸಾಹುಕಾರ್ ಒಬ್ಬ ಅಭ್ಯರ್ಥಿಯಿಂದ 20 ಲಕ್ಷ ರೂ. ಒಪ್ಪಂದದಲ್ಲಿ 10 ಲಕ್ಷ ನಗದು ಪಡೆದಿದ್ದರೆ, ಗೀತಾ ಬಿ.ವಿ. ಮತ್ತೊಬ್ಬ ಅಭ್ಯರ್ಥಿಯಿಂದ 40 ಲಕ್ಷ ರೂ. ಒಪ್ಪಂದದಲ್ಲಿ 20 ಲಕ್ಷ ನಗದು ಪಡೆದಿದ್ದಾರೆ ಎಂದು ಇ.ಡಿ. ತಿಳಿಸಿದೆ. ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿರುವ "ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಸಂ ನಿಯಮಿತ' ಸೇರಿ ವಿವಿಧ ಬ್ಯಾಂಕ್ ಖಾತೆಗಳು ಮತ್ತು 3ನೇ ವ್ಯಕ್ತಿಗಳ ಖಾತೆಗಳನ್ನು ಬಳಸಿಕೊಂಡು ವಹಿವಾಟು ನಡೆಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಕ್ರಮ ಹಣದಲ್ಲಿ 52.30 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು 3ನೇ ವ್ಯಕ್ತಿಯ ಹೆಸರಿನಲ್ಲಿ ಖರೀದಿಸಲಾಗಿತ್ತು. ಅಲ್ಲದೆ, ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ವಿಮಾನ ಪ್ರಯಾಣಕ್ಕಾಗಿ 13.31 ಲಕ್ಷ ರೂ.ಗಳನ್ನು ಬಸವರಾಜ್ ಕನ್ನಾಳೆ 3ನೇ ವ್ಯಕ್ತಿಗಳ ಖಾತೆಗಳ ಮೂಲಕ ಪಾವತಿಸಿದ್ದರು ಎಂದು ಇಡಿ ತಿಳಿಸಿದೆ.
ಕೆಪಿಎಸ್ಸಿ ಅಕ್ರಮದಲ್ಲಿ ಇ.ಡಿ ಅಧಿಕಾರಿಗಳು, ತನಿಖೆ ಪೂರ್ಣಗೊಳಿಸಿ ಚಾರ್ಚ್ಶೀಟ್ ಸಲ್ಲಿಸಿದ ಬೆನ್ನಲ್ಲೇ ಇದೀಗ ವಿಶೇಷ ತನಿಖಾ ತಂಡವು (ಎಸ್ಐಟಿ) ಶಿವಶಂಕರಪ್ಪ ಸಾಹುಕಾರ್ರನ್ನು 7 ದಿನ ವಶಕ್ಕೆ ಪಡೆದಿದೆ. ತನಿಖಾಧಿಕಾರಿಗಳು ಆರೋಪಿಯನ್ನು ವಶಕ್ಕೆ ನೀಡುವಂತೆ 1ನೇ ಎಸಿಎಂಎಂ ಕೋರ್ಟ್ಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯವು ನ.19ರ ವರೆಗೂ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದೆ. ಸದ್ಯ ಪರಪ್ಪನ ಆಗ್ರಹಾರ ಜೈಲಿನಲ್ಲಿರುವ ಶಿವಶಂಕರಪ್ಪರನ್ನು ಎಸ್ಐಟಿ ವಶಕ್ಕೆ ಪಡೆದಿದ್ದು, ತನಿಖೆ ತೀವ್ರಗೊಳಿಸಿದೆ.