ಬೆಂಗಳೂರು: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಅರ್ಜಿ ವಿಚಾರಕ್ಕಾಗಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಡೆವಲಪ್‌ಮೆಂಟ್ ಸೂಪರಿಡೆಂಟ್ ಹಾಗೂ ಡಿ.ಜಿ.ಹಳ್ಳಿ 11 ಬೂತ್‌ಗಳ ಮೇಲ್ವಿಚಾರಕ ಅಧಿಕಾರಿಯಾಗಿದ್ದ ಫಕೀರಪ್ಪ ಎಂಬುವರ ಮೇಲೆ ಯಾರಬ್ ಮತ್ತು ದಸ್ತಗೀರ್ ಎಂಬುವರು ಹಲ್ಲೆ ನಡೆಸಿದ್ದರು. ದೂರು ಆಧರಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್‌ಐಆರ್ ಅರ್ಜಿಗಳ ವಿತರಣೆ ವೇಳೆ ನಿನ್ನೆ (ಬುಧವಾರ) ಮಧ್ಯಾಹ್ನ ರೋಷನ್ ನಗರದ ಕೌಸರ್ ಮಸೀದಿ ಬಳಿ ಫಕೀರಪ್ಪ ಅವರು ಬಂದಿದ್ದರು. ಈ ವೇಳೆ, ಯಾರಬ್ ಮತ್ತು ದಸ್ತಗೀರ್ ಬಿಎಲ್ಒಗಳ ಬಳಿ ಬಂದು ತಾವು ಜಯನಗರ ನಿವಾಸಿಗಳಾಗಿದ್ದು, ಎಸ್‌ಐಆರ್ ಅರ್ಜಿ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಎಲ್ಒಗಳು, ವಾಸಸ್ಥಳ ಬದಲಾವಣೆಯಾಗಿರುವ ಪರಿಣಾಮ ಜಯನಗರದಲ್ಲೇ ಎಸ್‌ಐಆರ್ ಅರ್ಜಿ ಪಡೆಯುವಂತೆ ಹೇಳಿದ್ದಾರೆ.
ಇದಕ್ಕೆ ಬಿಎಲ್ಒಗಳೊಂದಿಗೆ ಆರೋಪಿಗಳು ಮಾತಿನ ಚಕಮಕಿ ನಡೆಸುವಾಗ ಮಧ್ಯ ಪ್ರವೇಶಿಸಿದ ಫಕೀರಪ್ಪ ಅವರ ಮುಖಕ್ಕೆ ಕೈಯಿಂದ ಗುದ್ದಿ ಗಾಯಗೊಳಿಸಿದ್ದಾರೆ. ಅಧಿಕಾರಿಗಳ ಮೇಲಿನ ಹಲ್ಲೆ ಗಮನಿಸಿದ ಸ್ಥಳೀಯರು ಗಲಾಟೆ ಬಿಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.
ನಂತರ ಗಾಯಾಳು ಕೀರಪ್ಪ ಅವರು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಾಯಗೊಂಡ ಕೀರಪ್ಪ ಅವರ ದೂರಿನ ಮೇರೆಗೆ, ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನ ಬಂಧಿಸಲಾಗಿದೆ ಪೂರ್ವ ವಿಭಾಗ ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.