ಮಳವಳ್ಳಿ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ರಾತ್ರಿ ಲಂಚ ಪಡೆಯುವ ವೇಳೆ ಎಎಸ್‌ಐ ಶಿವಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. ಡಿವೈಎಸ್ಪಿ ಸುನಿಲ್ ಕುಮಾರ್, ಇನ್‌ಸ್ಪೆಕ್ಟರ್ ಲೇಪಾಕ್ಷಮೂರ್ತಿ, ಬ್ಯಾಟರಾಯಗೌಡ ಮತ್ತು ಸಿಬ್ಬಂದಿ ಇದ್ದರು.
ಮಳವಳ್ಳಿ: ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕಣವೊಂದರ ಇತ್ಯರ್ಥಕ್ಕಾಗಿ ಬುಧವಾರ ರಾತ್ರಿ ದೂರುದಾರನಿಂದ ಹತ್ತು ಸಾವಿರ ರೂ. ಲಂಚ ಪಡೆಯುವ ವೇಳೆ ಠಾಣೆಯ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಶಿವಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ನಿಡಘಟ್ಟ ಗ್ರಾಮದ ರಾಜೇಗೌಡ ಅವರ ಮೇಲೆ ಗಲಾಟೆ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣೆಯಲ್ಲೇ ಜಾಮೀನು ನೀಡುವ ಮೂಲಕ ಪ್ರಕರಣ ಇತ್ಯರ್ಥಪಡಿಸಲು 10 ಸಾವಿರ ರೂ. ಕೊಡುವಂತೆ ಆರೋಪಿಗೆ ಎಎಸ್‌ಐ ಶಿವಕುಮಾರ್ ದೂರವಾಣಿ ಕರೆ ಮಾಡಿ ತಿಳಿಸಿದ್ದರು.
ಎಎಸ್‌ಐ ಮಾತನಾಡಿದ್ದ ಕರೆಯನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ರಾಜೇಗೌಡ ಲೋಕಾಯುಕ್ತ ಪೊಲೀಸರಿಗೆ ಸಾಕ್ಷೃ ಸಮೇತ ದೂರು ಸಲ್ಲಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು ಬುಧವಾರ ರಾತ್ರಿ ಪೊಲೀಸ್ ಠಾಣೆಯಲ್ಲೇ ಲಂಚ ಪಡೆಯುವ ವೇಳೆ ಎಎಸ್‌ಐ ಅವರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಎಸ್.ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನಿಲ್ ಕುಮಾರ್, ಇನ್‌ಸ್ಪೆಕ್ಟರ್ ಲೇಪಾಕ್ಷಮೂರ್ತಿ, ಬ್ಯಾಟರಾಯಗೌಡ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಎರಡನೇ ದಾಳಿ: ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರ ಮೇಲೆ ನಿನ್ನೆಯ ದಾಳಿ ಸೇರಿ ಎರಡು ದಾಳಿ ನಡೆದಿದೆ. ನಾಲ್ಕು ತಿಂಗಳ ಹಿಂದೆ ಇದೇ ಠಾಣೆಯ ಮುಖ್ಯಪೇದೆಯೊಬ್ಬರು ಪ್ರಕರಣ ಇತ್ಯರ್ಥ ಸಂಬಂಧ ದೂರುದಾರನಿಂದ ಠಾಣೆಯ ಎದುರಿನ ಕಾಫಿ ಶಾಪ್‌ನಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಇದೀಗ ಎಎಸ್‌ಐ ಸಿಕ್ಕಿಬಿದ್ದಿದ್ದಾರೆ.