ಕಂಪ್ಲಿಯ ಪೇಟೆ ಬಸವೇಶ್ವರ ರಥದ ಗೊಂಬೆಗಳ ದುರಸ್ತಿ ಕಾರ್ಯದಲ್ಲಿ ನಿರತರಾಗಿರುವ ಚಿತ್ರಗಾರ ಪರಶುರಾಮಪ್ಪ ಕುಟುಂಬದ ಸುಮಿತ್ರಮ್ಮ ಚಿತ್ರಗಾರ, ರಾಮಕೃಷ್ಣ, ಲಕ್ಷ್ಮೀ, ಸಂಗೀತಾ, ಸ್ವಪ್ನಾ, ಶ್ರುತಿ ಇತರರು.
- ಜೋಡಿ ತೇರುಗಳಿಗೆ ಕಾಷ್ಠಶಿಲ್ಪದ ಮೆರುಗು
- ಚಿತ್ರಗಾರ ಕುಟುಂಬದ ಅಪರೂಪದ ಕಲಾಸೇವೆ
- ಸಾಂಪ್ರದಾಯಿಕ ಶೈಲಿಯಲ್ಲಿ ಗೊಂಬೆಗಳ ದುರಸ್ತಿ
- ಆರು ತಿಂಗಳ ಶ್ರಮದ ಕಲಾಕಾಯಕ
ಕಂಪ್ಲಿ: ವಿಜಯನಗರ ಸಾಮ್ರಾಜ್ಯದ ಭವ್ಯ ಕಲಾ ಪರಂಪರೆಯ ಅಪರೂಪದ ಕುರುಹುಗಳು ಕಂಪ್ಲಿ ಪಟ್ಟಣದಲ್ಲಿ ಮತ್ತೆ ಜೀವ ತಳೆಯುತ್ತಿವೆ. ಇಲ್ಲಿನ ಪ್ರಸಿದ್ಧ ಪೇಟೆ ಬಸವೇಶ್ವರ ಸ್ವಾಮಿಯ ಜೋಡಿ ರಥೋತ್ಸವದ ರಥಗಳಿಗೆ ಅಳವಡಿಸಲಾಗುವ ಸಾಂಪ್ರದಾಯಿಕ ಕಾಷ್ಠದ (ಮರದ) ಗೊಂಬೆಗಳು, ಸಿಂಹಗಳು ಹಾಗೂ ಬಾಗಿಲುವಾಡಗಳ ಜೀರ್ಣೋದ್ಧಾರ ಮತ್ತು ದುರಸ್ತಿ ಕಾರ್ಯವು ಪ್ರಸ್ತುತ ಭರದಿಂದ ಸಾಗಿದೆ.
ಪರಂಪರಾಗತ ವಿಜಯನಗರ ಜನಪದ ಕರಕುಶಲ ಕಲಾವಿದರಾದ ಪರಶುರಾಮಪ್ಪ ಚಿತ್ರಗಾರ ಅವರ ಕುಟುಂಬಸ್ಥರು ಒಟ್ಟಾಗಿ ಸೇರಿ, ಅತ್ಯಂತ ಶ್ರದ್ಧೆಯಿಂದ ಸಾಂಪ್ರದಾಯಿಕ ನೆಲೆಯಲ್ಲೇ ಈ ವಿಶಿಷ್ಟ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಜೋಡಿ ರಥಗಳ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಟ್ಟಾರೆ ನೂರಾರು ಕಾಷ್ಠದ ಕಲಾಕೃತಿಗಳಿಗೆ ಮರುಜೀವ ನೀಡುವ ಬೃಹತ್ ಕೆಲಸ ಪ್ರಸ್ತುತ ನಡೆಯುತ್ತಿದೆ.
ಪ್ರತಿ ಒಂದು ರಥಕ್ಕೆ ಒಟ್ಟು 66 ಕಲಾಕೃತಿಗಳನ್ನು ಅಳವಡಿಸಲಾಗುತ್ತದೆ. ಇದರನ್ವಯ ಎರಡು ರಥಗಳಿಗೆ ಬೇಕಾಗುವ 12 ಬಾಗಿಲುವಾಡಗಳು, ಎಂಟು ಗೊಂಬೆಗಳು, ನಾಲ್ಕು ಸಿಂಹಗಳು, 12 ಬಾಗಿಲುವಾಡದ ಪಟಗಳು ಹಾಗೂ 30 ಡುಬುರಿ ಪಟಗಳನ್ನು ಅತ್ಯಂತ ಆಕರ್ಷಕವಾಗಿ ದುರಸ್ತಿಗೊಳಿಸಲಾಗುತ್ತಿದೆ. ಇದರೊಂದಿಗೆ ರಥದ ಪ್ರಮುಖ ಆಕರ್ಷಣೆಗಳಾದ ನಂದಿ, ರಾವಣ ಹಾಗೂ ಇಬ್ಬರು ದ್ವಾರಪಾಲಕರ ವಿಗ್ರಹಗಳ ದುರಸ್ತಿ ಕಾರ್ಯವೂ ಏಕಕಾಲದಲ್ಲಿ ಸಾಗಿದೆ.
ಈ ದುರಸ್ತಿ ಪ್ರಕ್ರಿಯೆಯು ಅತ್ಯಂತ ಶ್ರಮದಾಯಕ ಹಾಗೂ ಕೌಶಲದಿಂದ ಕೂಡಿದ್ದಾಗಿದೆ ಎಂದು ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್ ಅಧ್ಯಕ್ಷೆ ಸುಮಿತ್ರಮ್ಮ ಚಿತ್ರಗಾರ ವಿವರಿಸಿದ್ದಾರೆ. ಪ್ರಸ್ತುತ ಕಾಷ್ಠದ ಗೊಂಬೆಗಳ ಮೇಲಿನ ಹಳೆಯ, ಶಿಥಿಲಗೊಂಡ ಹೊದಿಕೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗುತ್ತಿದೆ. ಬಳಿಕ ಕಟ್ಟಿಗೆಪುಡಿ, ಹುಣಸೆಬೀಜದ ಸರಿ (ಅಂಟು) ಮತ್ತು ಗೋಣಿತಟ್ಟಿನ ನಾರನ್ನು ಹದವಾಗಿ ಸೇರಿಸಿ ವಿಶೇಷ ಕಿಟ್ಟವನ್ನು ತಯಾರಿಸಲಾಗುತ್ತದೆ.
ಈ ಕಿಟ್ಟವನ್ನು ಗೊಂಬೆಗಳಿಗೆ ಮೆತ್ತಿದ ನಂತರ, ಅವುಗಳಿಗೆ ಸೂಕ್ತ ಆಕಾರವನ್ನು ತಿದ್ದಿ ಬಟ್ಟೆಯನ್ನು ಲೇಪಿಸಲಾಗುತ್ತದೆ. ಇದರ ಮೇಲ್ಭಾಗಕ್ಕೆ ವಿಭೂತಿ ಹಾಗೂ ಹುಣಸೆಬೀಜದ ಸರಿಯ ಮಿಶ್ರಣವನ್ನು ಸತತ ಮೂರು ಬಾರಿ ಲೇಪನ ಮಾಡಿ ಶುದ್ಧಗೊಳಿಸಲಾಗುತ್ತದೆ. ನಂತರ ಇಡೀ ಕಲಾಕೃತಿಯನ್ನು ತಿಕ್ಕಿ ನಯಗೊಳಿಸಿ ಆಕರ್ಷಕ ಬಣ್ಣಗಳನ್ನು ಲೇಪಿಸಲಾಗುತ್ತದೆ. ಈ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಆರು ತಿಂಗಳ ಸುದೀರ್ಘ ಕಾಲಾವಕಾಶದ ಅಗತ್ಯವಿದೆ.
ಪರಂಪರೆಯ ಇತಿಹಾಸ ಹೊಂದಿರುವ ಈ ಅಪರೂಪದ ಕರಕುಶಲ ಕಲೆಯು ನಶಿಸಿಹೋಗದಂತೆ ಕಂಪ್ಲಿಯ ಚಿತ್ರಗಾರ ಕುಟುಂಬದ ಸದಸ್ಯರೆಲ್ಲರೂ ಸಾಮೂಹಿಕವಾಗಿ ಶ್ರಮಿಸುತ್ತಿದ್ದಾರೆ.
ಹಿರಿಯ ಕಲಾವಿದ ಪರಶುರಾಮಪ್ಪ ಚಿತ್ರಗಾರ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಗೊಂಬೆಗಳ ದುರಸ್ತಿ ಕಾರ್ಯದಲ್ಲಿ ಕುಟುಂಬದ ಸದಸ್ಯರಾದ ರಾಮಕೃಷ್ಣ, ಲಕ್ಷ್ಮೀ, ಸಂಗೀತಾ, ಸ್ವಪ್ನಾ, ಶ್ರುತಿ, ರಾಮಚಂದ್ರ, ರವಿ, ರಾಜಾರಾಮ್, ಪ್ರಕಾಶ್ ಹಾಗೂ ಸುಮಂತ್ ಅವರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕಲಾಸೇವೆಯನ್ನು ಒಪ್ಪಿಸುತ್ತಿದ್ದಾರೆ. ಮುಂಬರುವ ರಥೋತ್ಸವದ ವೇಳೆಗೆ ಈ ಎಲ್ಲ ಕಲಾಕೃತಿಗಳು ಹೊಸ ಕಳೆಯೊಂದಿಗೆ ರಥವನ್ನು ಅಲಂಕರಿಸಲಿವೆ.
"
ವಿಜಯನಗರ ಶೈಲಿಯ ಈ ಸಾಂಪ್ರದಾಯಿಕ ಕಲಾ ಕಾಯಕಕ್ಕಾಗಿ ನಮ್ಮ ಮನೆ ಮಂದಿಯೆಲ್ಲ ಒಟ್ಟಾಗಿ ಸೇರಿ ದಿನಕ್ಕೆ ನಿರಂತರವಾಗಿ ಎಂಟು ತಾಸು ಕೆಲಸ ಮಾಡುತ್ತಿದ್ದೇವೆ. ಈ ವಿಧಾನದಲ್ಲಿ ಸಿದ್ಧಗೊಳ್ಳುವ ಗೊಂಬೆಗಳು ಸುಮಾರು ಇಪ್ಪತ್ತು ವರ್ಷಗಳ ಕಾಲ ಯಾವುದೇ ಹಾನಿಯಾಗದಂತೆ ಅತ್ಯಂತ ತಾಳಿಕೆ ಬಾಳಿಕೆ ಬರಬಲ್ಲವು. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಅಪರೂಪದ ಸಾಂಪ್ರದಾಯಿಕ ಕರಕುಶಲ ಕೆಲಸವನ್ನು ಮಾಡುವ ಕುಟುಂಬಗಳ ಸಂಖ್ಯೆ ತೀರಾ ವಿರಳವಾಗುತ್ತಿರುವುದು ಆತಂಕದ ಸಂಗತಿ.
— ಸುಮಿತ್ರಮ್ಮ ಚಿತ್ರಗಾರ, ಅಧ್ಯಕ್ಷರು, ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್