ಹೊಸಪೇಟೆಯಲ್ಲಿ ನಡೆದ ವಸಂತ ವೈಭವ ಮೆರವಣಿಗೆಯ ಮುಂಚೂಣಿಯಲ್ಲಿ ಗಜರಾಜ ಲಕ್ಷ್ಮೀ ಅಂಬಾರಿಯಲ್ಲಿ ತಾಯಿ ಭುವನೇಶ್ವರಿ ದೇವಿಯ ಮೂರ್ತಿಯನ್ನು ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. 
ರಾಜ್ಯ

ಹಂಪಿ ಉತ್ಸವದಲ್ಲಿ ಗತವೈಭವ ಸಾರಿದ ಕಲಾತಂಡಗಳು

ಪ್ರಮುಖ ಮುಖ್ಯಾಂಶಗಳು

  • ಹೊಸಪೇಟೆಯಲ್ಲಿ ಸಾಂಸ್ಕೃತಿಕ ಹಬ್ಬ
  • ಅಂಬಾರಿಯಲ್ಲಿ ಕಂಗೊಳಿಸಿದ ತಾಯಿ ಭುವನೇಶ್ವರಿ
  • ಮನಸೆಳೆದ ಜಾನಪದ ಜಾತ್ರೆ
  • 125 ಕಲಾತಂಡಗಳು ಭಾಗಿ
ಹೊಸಪೇಟೆ: ಹಂಪಿ ಉತ್ಸವದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಸಂತ ವೈಭವ ಕಲಾತಂಡಗಳ ಮೆರವಣಿಗೆಯು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾರಿದವು.
ಇಲ್ಲಿನ ವಡಕರಾಯ ದೇಗುಲದ ಆವರಣದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯ ಮುಂಚೂಣಿಯಲ್ಲಿ ಗಜರಾಜ ಲಕ್ಷ್ಮೀ ಅಂಬಾರಿಯಲ್ಲಿ ತಾಯಿ ಭುವನೇಶ್ವರಿ ದೇವಿಯ ಮೂರ್ತಿಯನ್ನು ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳಿಂದ ಆಗಮಿಸಿದ್ದ ಸುಮಾರು 125 ವೈವಿಧ್ಯಮಯ ಕಲಾತಂಡಗಳು ಈ ಸಂಭ್ರಮದಲ್ಲಿ ಪಾಲ್ಗೊಂಡು ಉತ್ಸವದ ಮೆರುಗನ್ನು ಇಮ್ಮಡಿಗೊಳಿಸಿದವು.
ಪುನೀತ್ ರಾಜಕುಮಾರ್ ವೃತ್ತದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ವಸಂತ ವೈಭವದ ಈ ಮೆರವಣಿಗೆಯು ಹಂಪಿ ಉತ್ಸವದ ಶೋಭೆಯನ್ನು ಹೆಚ್ಚಿಸಿದೆ. ದೇಶ ಮತ್ತು ವಿದೇಶದ ಪ್ರವಾಸಿಗರಿಗೆ ವಿಜಯನಗರ ಸಾಮ್ರಾಜ್ಯದ ಚಾರಿತ್ರಿಕ ಹಿರಿಮೆ ಹಾಗೂ ಗತವೈಭವವನ್ನು ಪರಿಚಯಿಸುವಲ್ಲಿ ಹಂಪಿ ಉತ್ಸವವು ಮಹತ್ವದ ಪಾತ್ರ ವಹಿಸುತ್ತದೆ. ಪ್ರಧಾನ ಉತ್ಸವಕ್ಕೆ ಮುನ್ನಾದಿನ ಆಯೋಜಿಸಲಾದ ಈ ವೈವಿಧ್ಯಮಯ ಕಲಾ ಪ್ರದರ್ಶನವು ಹಬ್ಬದ ವಾತಾವರಣವನ್ನು ನಿರ್ಮಿಸಿದೆ ಎಂದರು.
ಇದನ್ನೂ ಓದಿ:...
ಜಿ.ಪಂ. ಸಿಇಒ ನೋಂಗ್ಜಾಯ್ ಮೋಹಮ್ಮದ್ ಅಲಿ ಅಕ್ರಂ ಷಾ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಉಪವಿಭಾಗಾಧಿಕಾರಿ ವಿವೇಕಾನಂದ, ತಹಸೀಲ್ದಾರ್ ಶ್ರುತಿ ಮಾಳಪ್ಪ ಗೌಡರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗ ರಂಗಣ್ಣನವರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಜಾನಪದ ಕಲೆಗಳ ಮಹಾಸಂಗಮ

ಜನಪದ ಕಲೆಗಳ ವೈಭವವೇ ಇಲ್ಲಿ ಅನಾವರಣಗೊಂಡಿತ್ತು. ಮೆರವಣಿಗೆಯಲ್ಲಿ ಕಂಸಾಳೆ, ಪೂಜಾಕುಣಿತ, ಕರಡಿ ಮಜಲು, ಲಂಬಾಣಿ ನೃತ್ಯ, ಚಿಲಿಪಿಲಿ ಗೊಂಬೆ, ಆಲಾಯಿ ಹೆಜ್ಜೆಮೇಳ, ಸೋಮನ ಕುಣಿತ, ಮಹಿಳಾ ವೀರಗಾಸೆ, ಕೊಂಬು ಕಹಳೆ ಮತ್ತು ಚಂಡೆ ವಾದನಗಳು ಜನರ ಗಮನಸೆಳೆದವು.
ಅಲ್ಲದೆ ಝಾಂಜ್ ಮೇಳ, ಮೋಜಿನ ಗೊಂಬೆ, ಜಗ್ಗಲಿಗಿ, ಖಡ್ಗವರಸೆ, ನವಿಲು ಕುಣಿತ, ಮರಗಾಲು ಬೀಸು, ಸಿಂಧೋಳ ಕುಣಿತ, ಸಮಾಳ ಮತ್ತು ನಂದಿಕೋಲು ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಕುದುರೆ ಕುಣಿತ, ನಾದಸ್ವರ, ಡೊಳ್ಳುಕುಣಿತ, ಕೋಲಾಟ, ಹಗಲು ವೇಷ, ತಾಷಾರಂಡೋಲ್, ಗೊಂದಲಿಗರ ಹಾಡು ಹಾಗೂ ಗೊರವರ ಕುಣಿತದಂತಹ ಅಪರೂಪದ ಕಲಾ ಪ್ರಕಾರಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.