ಕಾಳಗಿಯ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ 10.30ಗಂಟೆ ಆದರೂ ಯಾವೊಬ್ಬ ಸಿಬ್ಬಂದಿ ಇಲ್ಲದೆ ಕುರ್ಚಿಗಳು ಖಾಲಿಯಾಗಿರುವುದು.
- ಕಾಳಗಿ ಸರ್ಕಾರಿ ಕಚೇರಿಗಳಲ್ಲಿ ನೌಕರರು ಆಡಿದ್ದೆ ಆಟ
- ಸಮಯಪಾಲನೆ ಇಲ್ಲವೇ ಇಲ್ಲ, ಜನರ ಸಮಸ್ಯೆ ಕೇಳಲ್ಲ
ಕಾಳಗಿ: ಇಲ್ಲಿನ ತಹಸಿಲ್ ಕಚೇರಿಯಲ್ಲಿ ಸರ್ಕಾರಿ ನೌಕರರು ಆಡಿದ್ದೆ ಆಟವಾಗಿದೆ. ಸರಿಯಾದ ಸಮಯಕ್ಕೆ ಬರಲ್ಲ, ಜನರ ಸಮಸ್ಯೆ ಕೇಳುವವರಿಲ್ಲ. ಕೆಲಸಕ್ಕಾಗಿ ಸುಮ್ಮನೆ ಅತ್ತಿತ್ತ ಅಲೆದಾಡಿಸುವುದು ಸಾಮಾನ್ಯವಾಗಿದೆ.
ನೂತನ ತಾಲೂಕು ಕೇಂದ್ರದಲ್ಲಿ ಹೆಸರಿಗೆ ಮಾತ್ರ ತಹಸಿಲ್ ಕಚೇರಿ ಎನ್ನುವಂತಾಗಿದೆ. ಕೆಲಸಕ್ಕಾಗಿ ನಿತ್ಯವೂ ಸಾರ್ವಜನಿಕರು ಅಲೆದಾಡುವುದು ತಪ್ಪಿಲ್ಲ. ಬೆಳಗ್ಗೆ 10 ಗಂಟೆಯೊಳಗೆ ಎಲ್ಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು ಎಂಬ ಆದೇಶವಿದೆ. ಆದರೆ ಈ ನಿಯಮವನ್ನು ಯಾರೊಬ್ಬರೂ ಪಾಲಿಸುವುದಿಲ್ಲ. ಕೆಲವರು 10.30ಕ್ಕೆ ಬಂದರೆ, ಬಹುತೇಕರು 11 ಗಂಟೆ ನಂತರವೇ ಕಚೇರಿಯಲ್ಲಿ ದರ್ಶನ ನೀಡುತ್ತಾರೆ. ಇದರಿಂದ ಜನರು ಪರದಾಡುವಂತಾಗಿದೆ.
11ಗಂಟೆ ಮೇಲೆ ಬರೋದು, ಕರೆಕ್ಟ್ 1 ಗಂಟೆಗೆ ಊಟಕ್ಕೆ ಹೋಗಿ ಬಿಡೋದು. ಊಟ ಮುಗಿಸಿ ಬರುತ್ತಿದ್ದಂತೆ ಒಂದಿಷ್ಟು ಕೆಲಸ ಮಾಡಿ ಸಂಜೆ 4 ಗಂಟೆಗೆ ಕಚೇರಿಯಿಂದ ಮನೆಯತ್ತ ಹೋಗಿಬಿಡೋದು. ಇದು ಬಹುತೇಕ ಅಧಿಕಾರಿಗಳ ನಿತ್ಯದ ಟೈಮ್ಟೇಬಲ್ ಆಗಿದೆ. ಬಹುತೇಕ ಅಧಿಕಾರಿ ಹಾಗೂ ನೌಕರರು 4-5 ಗಂಟೆ ತಮ್ಮ ಕಚೇರಿಯ ಸೀಟ್ನಲ್ಲಿ ಕುಳಿತುಕೊಳ್ಳುವುದೇ ಇಲ್ಲ. ಯಾವಾಗಲೂ ಖಾಲಿ ಕುರ್ಚಿಗಳೇ ಜನರನ್ನು ಸ್ವಾಗತಿಸುತ್ತವೆ. ಯಾವಾಗ ಬರುತ್ತಾರೊ? ಯಾವಾಗ ವಾಪಸ್ ಹೋಗುತ್ತಾರೊ ? ತಿಳಿಯುವುದಿಲ್ಲ. ಪ್ರತಿದಿನ ಕೆಲಸಕ್ಕಾಗಿ ಸಾವಿರಾರು ಜನ ದೂರದ ಊರುಗಳಿಂದ ತಹಸಿಲ್ ಕಚೇರಿಗೆ ಬಂದು ಕೆಲಸವಾಗದೆ ವಾಪಸ್ ಹೋಗುವಂತಾಗಿದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಕೆಲಸ ಮಾಡಲ್ಲ, ಅಲೆದಾಡಿಸೋದು ಬಿಡಲ್ಲ
ಬಹುತೇಕ ಅಧಿಕಾರಿಗಳು ಕೆಲಸ ಮಾಡಿಕೊಡಿ ಎಂದು ಬರುವ ಸಾರ್ವಜನಿಕರನ್ನು ಸುಮ್ಮನೆ ಅಲೆದಾಡಿಸುತ್ತಾರೆ. ಕಂದಾಯ ವಿಭಾಗಕ್ಕೆ ಬಂದರೆ ತಹಸೀಲ್ದಾರ್ ಅವರನ್ನು ಕೇಳಿ ಅಂತಾರೆ, ಅವರು ಎಸಿಗೆ ಕಚೇರಿಗೆ ಹೋಗಿ, ಇವರು ಡಿಸಿ ಕಚೇರಿಯಲ್ಲಿ ಕೆಲಸವಾಗುತ್ತದೆ ಎನ್ನುತ್ತಾರೆ. ಕೊನೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಳಿದರೆ ತಹಸಿಲ್ ಕಚೇರಿಯಲ್ಲೇ ಕೆಲಸ ಮಾಡಿಕೊಳ್ಳಿ ಎನ್ನುತ್ತಾರೆ. ಹೀಗಾಗಿ ಅಲೆದಾಡಿ ಸಾಕಾಗಿದೆ. ಇದರ ಜತೆಗೆ ಕಚೇರಿಯಲ್ಲಿ ಹಣ ನೀಡಿದರೆ ಮಾತ್ರ ಕೆಲಸ ಆಗುತ್ತದೆ ಎಂದು ದೂರುತ್ತಾರೆ ರೈತಾಪಿ ವರ್ಗ.
"
ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಿ ಸಾರ್ವಜನಿಕರ ಕೆಲಸಗಳನ್ನು ಸುಗಮವಾಗಿ ಮಾಡಿಕೊಡಬೇಕು. ಇಲ್ಲದಿದ್ದಲಿ ತಹಸಿಲ್ ಕಚೇರಿಗೆ ಬೀಗ ಹಾಕಿ ಹೋರಾಟ ಮಾಡಬೇಕಾಗುತ್ತದೆ.
— > ವೀರಣ್ಣ ಗಂಗಾಣಿ, ತಾಲೂಕು ಅಧ್ಯಕ್ಷ, ರಾಜ್ಯ ರೈತ ಸೇನೆ ಮತ್ತು ರೈತ ಸಂಘ
"
ನಾನು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ನನ್ನ ತಂದೆಯ ಹೆಸರಿನಲ್ಲಿರುವ ಜಮೀನಿನ ಪಹಣಿಯಲ್ಲಿ ಹೆಸರು ತಿದ್ದುಪಡಿ ಮಾಡಲು ಕಳೆದ ಎರಡು ವರ್ಷಗಳಿಂದ ಅಲೆದಾಡುತ್ತಿದ್ದೇನೆ. ರಜೆ ಮೇಲೆ ಗ್ರಾಮಕ್ಕೆ ಬಂದಾಗಲೊಮ್ಮೆ ತಹಸಿಲ್ ಕಚೇರಿಗೆ ಹೋಗಿ ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
— > ನಾಗರಾಜ ಮಂಜಾಳಕರ, ಯೋಧ, ಕಾಳಗಿ
"
ತಹಸಿಲ್ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇನ್ಮುಂದೆಯೂ ಸಮಯಕ್ಕೆ ಸರಿಯಾಗಿ ಬಾರದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
— > ಪೃಥ್ವಿರಾಜ್ ಪಾಟೀಲ್, ತಹಸೀಲ್ದಾರ್